ಬೆಂಗಳೂರು: ‘ಸ್ವಾತಂತ್ರ ಪ್ರೇಮಿ, ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ನಮ್ಮವರೇ ಕುತಂತ್ರದಿಂದ ಹಿಡಿದುಕೊಟ್ಟಿದ್ದರು. ಬ್ರಿಟಿಷರು 400 ವರ್ಷ ಭಾರತವನ್ನು ಆಳಲು ನಮ್ಮವರ ಪಿತೂರಿ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮಗಾಂಧಿ, ವಿವೇಕಾನಂದರು ಸಹಿತ ಎಲ್ಲ ಮಹಾತ್ಮರ ಆಶಯಗಳು ಸ್ಫೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಈ ಮಹಾತ್ಮರ ಹೆಸರುಗಳನ್ನು ಇಡಲಾಗುತ್ತಿದೆ‘ ಎಂದರು.
‘ಮಹಾತ್ಮರ ಆಶಯಗಳು ನಾಶ ಆಗಬೇಕು. ಸಂವಿಧಾನ ಇರಬಾರದು. ಅಸಮಾನತೆ ಮುಂದುವರಿಯಬೇಕು. ಯಾರೋ ದುಡಿದಿದ್ದನ್ನು ತಾವು ಕುಳಿತು ತಿನ್ನಬೇಕು ಎಂದು ಬಯಸುವವರೇ ನಮ್ಮ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ‘ ಎಂದು ಆರೋಪಿಸಿದರು.
‘ಸಮಾಜದ ಬದಲಾವಣೆಗೆ ಒಪ್ಪದ, ಸಮಾನ ಅವಕಾಶಗಳನ್ನು ಒಪ್ಪದ, ಅಸಮಾನತೆಯನ್ನು ಪೋಷಿಸುವ ಜನರು ಈಗಲೂ ನಮ್ಮ ನಡುವೆ ಇದ್ದಾರೆ. ಇಂಥವರು ಬಹಳ ಅಪಾಯಕಾರಿ‘ ಎಂದು ಎಚ್ಚರಿಸಿದರು.
ಆದಿ ಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.