ADVERTISEMENT

ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ಕ‍ಪ್ಪುಪಟ್ಟಿ ಸಂಸ್ಥೆಗೆ?

ಮಂಜುನಾಥ್ ಹೆಬ್ಬಾರ್‌
Published 20 ಫೆಬ್ರುವರಿ 2019, 20:29 IST
Last Updated 20 ಫೆಬ್ರುವರಿ 2019, 20:29 IST
   

ಬೆಂಗಳೂರು: ಉನ್ನತ ಅಧಿಕಾರಿಗಳ ವಿರೋಧದ ಮಧ್ಯೆಯೂ ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಯ ₹4,500 ಕೋಟಿ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಹಿಸಲು ರಾಜ್ಯ ಸಿದ್ಧತೆ ನಡೆಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿ ಮಾಡಿದ್ದ ನಗರ ವ್ಯಾಪ್ತಿಯ ಮೂರೂ ಪಕ್ಷಗಳ 15 ಶಾಸಕರು, ಕಾಮಗಾರಿಯ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಬೇಕು ಎಂದು ಲಾಬಿ ನಡೆಸಿದ್ದರು. ಅದಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರೆ. ಈ ಸಂಬಂಧ ಆದೇಶ ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ಬಿ. ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದ ಹತ್ತಿರದ ಸಂಬಂಧಿ. ನಿಗಮಕ್ಕೆ ಹೊಣೆ ನೀಡುವ ವಿಷಯದಲ್ಲಿ ‘ಕುಟುಂಬ ಪ್ರೀತಿ’ ಸಹ ಕೆಲಸ ಮಾಡಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಸರ್ಕಾರದ ನಿರ್ಧಾರಕ್ಕೆ ಮೂವರು ಉನ್ನತ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ‘₹8,015 ಕೋಟಿಯ ನವ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು 3 ವರ್ಷಗಳಿಗೆ ಹಂಚಿಕೆ ಮಾಡಲಾಗಿತ್ತು. ಮೊದಲ ವರ್ಷಕ್ಕೆ ಮೀಸಲಿಟ್ಟಿದ್ದು ₹2,500 ಕೋಟಿ. ಈಗ ಎರಡು ವರ್ಷಗಳ ಅನುದಾನವನ್ನು ಒಂದೇ ವರ್ಷದಲ್ಲಿ ಖರ್ಚು ಮಾಡುವ ತರಾತುರಿ ತೋರುತ್ತಿರುವುದು ಏಕೆ’ ಎಂದು ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

‘ತುರ್ತು ಕಾಮಗಾರಿಗಳಿಗಷ್ಟೇ 4 ಜಿ ವಿನಾಯಿತಿ ನೀಡಬಹುದು. ₹500 ಕೋಟಿಯ ತುರ್ತು ಕಾಮಗಾರಿಗಳನ್ನು ನಿಗಮಕ್ಕೆ ವಹಿಸಲು ಬೆಂಗಳೂರು ಅಭಿವೃದ್ಧಿ ಸಚಿವರು ಸೂಚಿಸಿದ್ದರು. ಈಗ ಸಕಾರಣ ಇಲ್ಲದೆ ದೊಡ್ಡ ಕಾಮಗಾರಿಗಳನ್ನು ನಿಗಮಕ್ಕೆ ವಹಿಸಲಾಗುತ್ತಿದೆ. ಇದನ್ನು ಬಲವಾಗಿ ವಿರೋಧಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಂಪುಟ ತೀರ್ಮಾನಕ್ಕೆ ವ್ಯತಿರಿಕ್ತ ನಡೆ: ಕ್ರಿಯಾಯೋಜನೆಯಲ್ಲಿ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಸಕ್ಷಮಪ್ರಾಧಿಕಾರಗಳಿಂದ ತಾಂತ್ರಿಕ ಅನುಮೋದನೆ ಪಡೆದು, ₹10 ಕೋಟಿಗೆ ಕಡಿಮೆ ಇಲ್ಲದಂತೆ ಪ್ಯಾಕೇಜ್‌ಗಳನ್ನು ಮಾಡಬೇಕು. ಕಡ್ಡಾಯವಾಗಿ ಕೆಟಿಪಿಪಿ ಕಾಯ್ದೆ–1999 ಹಾಗೂ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಮುಖಾಂತರ ಪ್ಯಾಕೇಜ್‌ ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳನ್ನು ಎರಡು ಹಂತದಲ್ಲಿ ಮಾಡಬೇಕು. ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್‌ ಅನುಮೋದನೆ ಪಡೆಯಬೇಕು ಎಂಬ ಷರತ್ತು ವಿಧಿಸಿ ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು.

₹50 ಕೋಟಿಗಿಂತ ಹೆಚ್ಚಿನ ಕಾಮಗಾರಿಗಳು ಹಾಗೂ ಪ್ಯಾಕೇಜ್‌ಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟದಿಂದ ಪಡೆಯಬೇಕು. ಕ್ರಿಯಾಯೋಜನೆಯಲ್ಲಿ ಅನುಷ್ಠಾನಗೊಳಿಸಬೇಕಿರುವ ಕಾಮಗರಿಗಳನ್ನು ಬದಲಾಯಿಸುವುದನ್ನು ಪ್ರತಿಬಂಧಿಸಲಾಗಿದೆ. ಪ್ರಧಾನ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌ ಕಾಮಗಾರಿ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕೆಂದು ತಿಳಿಸಲಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ.

ಕಪ್ಪು ಪಟ್ಟಿಗೆ ಸೇರಿಸಿದ್ದ ಪಾಲಿಕೆ
ಕಳಪೆ ಕಾಮಗಾರಿಗಳ ಕಾರಣದಿಂದ ಬಿಬಿಎಂಪಿ 2010ರಲ್ಲಿ ನಿಗಮವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ‘ತುರ್ತು ಕಾಮಗಾರಿಗಳನ್ನು ಸಹ ಟೆಂಡರ್‌ ಕರೆದೇ ಮಾಡಬೇಕು. ನಿಗಮಕ್ಕೆ ಯಾವುದೇ ಕಾಮಗಾರಿಯ ಹೊಣೆ ವಹಿಸಬಾರದು’ ಎಂದು ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್ ಅವರು 2015ರಲ್ಲಿ ಆದೇಶಿಸಿದ್ದರು.

ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳ ಸಲುವಾಗಿ ಬಿಡುಗಡೆಯಾಗಿದ್ದ ₹1,335 ಕೋಟಿ ಹಣವನ್ನು ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟಿದ್ದನ್ನು ಹಿರಿಯ ಐಎಫ್‌ಎಸ್‌ ಅಧಿಕಾರಿ ಪುನಟಿ ಶ್ರೀಧರ್‌ ನೇತೃತ್ವದ ಸಮಿತಿ 2015ರಲ್ಲಿ ಪತ್ತೆ ಹಚ್ಚಿತ್ತು.

‘ನಿಗಮವು ಜಿಎಸ್‌ಟಿ, ಮೂರನೇ ವ್ಯಕ್ತಿ ಪರಿವೀಕ್ಷಣೆ ಹಾಗೂ ಆಡಳಿತ ವೆಚ್ಚಗಳಿಗಾಗಿ ಒಟ್ಟು ಕಾಮಗಾರಿ ವೆಚ್ಚದ ಶೇ 18.5 ಕಟಾವು ಮಾಡುತ್ತಿದೆ. ಕಾಮಗಾರಿಗಳ ಗುಣಮಟ್ಟ ಚೆನ್ನಾಗಿಲ್ಲ’ ಎಂಬ ಕಾರಣ ನೀಡಿದ್ದಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಯಾವುದೇ ಕಾಮಗಾರಿಗಳನ್ನು ನಿಗಮಕ್ಕೆ ನೀಡಬಾರದು ಎಂದು 2018ರ ಸೆಪ್ಟೆಂಬರ್‌ನಲ್ಲಿ ಸೂಚಿಸಿದ್ದರು.

ಏಕೆ ಮಣೆ?
* ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾಗಲಿದ್ದು, ಟೆಂಡರ್‌ ಕರೆದು ಕಾಮಗಾರಿ ಮಾಡಿದರೆ ವಿಳಂಬವಾಗಲಿದೆ.
* ಕಾಮಗಾರಿಗಳಿಗೆ ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಬಿಡ್‌ಗಳು ಸಲ್ಲಿಕೆಯಾಗುತ್ತವೆ. ಇದರಿಂದ ಮರಳಿ ಟೆಂಡರ್‌ ಕರೆಯಬೇಕಾಗುತ್ತದೆ. ನಿಗಮಕ್ಕೆ ವಹಿಸಿದರೆ ಈ ಎಲ್ಲ ಸಮಸ್ಯೆಗಳು ಇಲ್ಲ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಯೋಜನೆ?
ರಾಜಧಾನಿಯ ಚಹರೆಯನ್ನು ಬದಲಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಗೆ ಸಚಿವ ಸಂಪುಟ ಈ ವರ್ಷದ ಜನವರಿಯಲ್ಲಿ ಒಪ್ಪಿಗೆ ನೀಡಿತ್ತು. ಈ ಯೋಜನೆಯಡಿ ಮೂರು ವರ್ಷಗಳಿಗೆ ₹ 8,105 ಕೋಟಿ ಹಂಚಿಕೆ ಮಾಡಲಾಗಿದೆ. ಮೊದಲ ವರ್ಷಕ್ಕೆ ₹ 2,500 ಕೋಟಿ, ಎರಡನೇ ವರ್ಷಕ್ಕೆ ₹ 4,267 ಕೋಟಿ ಹಾಗೂ ಮೂರನೇ ವರ್ಷಕ್ಕೆ ₹ 1,247 ಕೋಟಿ ಅನುದಾನ ನಿಗದಿಪ‍ಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.