ADVERTISEMENT

ಕೃಷ್ಣಾ ಮೇಲ್ದಂಡೆ: ಸರ್ಕಾರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 20:09 IST
Last Updated 24 ಜೂನ್ 2024, 20:09 IST
<div class="paragraphs"><p>ನೋಟಿಸ್‌</p></div>

ನೋಟಿಸ್‌

   

ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಾಗ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಆರೋಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿದೆ.

ಈ ಸಂಬಂಧ ಬಾಗಲಕೋಟೆ ನವನಗರದ ನಿವಾಸಿ ಶ್ರೀಶೈಲ್ ಬರಗುಂಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಭೂ ಸ್ವಾಧಿನ ಮಾಡಿಕೊಂಡಿತ್ತು. ಭೂಮಿ ಕಳೆದುಕೊಂಡವರಿಗೆ 2013ರ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ ಪುನರ್ವಸತಿ ಹಾಗೂ ಪುನರ್ವಸತಿ ಮಸೂದೆ ಅಡಿಯಲ್ಲಿ ಪರಿಹಾರವಾಗಿ ಉದ್ಯೋಗ ಸೇರಿದಂತೆ ವಿವಿಧ ರೀತಿಯ ಸಹಾಯಹಸ್ತಕ್ಕೆ ಮುಂದಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಸರಿಯಾದ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

‘ಸರ್ಕಾರ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಲು ನಿರ್ಧರಿಸಿದ್ದು, ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಗೂ ಈ ಹಣ ಹಂಚಿ ಹೋಗುತ್ತಿದೆ. ಆದ್ದರಿಂದ ಈ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು’ ಎಂದು ಕೋರಿದರು. ಇದಕ್ಕೆ ನ್ಯಾಯಪೀಠ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಆಗಸ್ಟ 6ಕ್ಕೆ ಮುಂದೂಡಲಾಗಿದೆ.

ಪರಿಹಾರದಲ್ಲಿ ಅಕ್ರಮ: ‘ಪರಿಹಾರ ಪಡೆದುಕೊಳ್ಳುವ ಪ್ರತಿಯಲ್ಲಿ ಖಾಸಗಿ ವ್ಯಕ್ತಿಗಳು ಅಧಿಕಾರಿಗಳ ಸಹಾಯ ಪಡೆದು ವೈಟ್ನರ್ ಬಳಸಿ ನಿಜವಾದ ಸಂತ್ರಸ್ತರ ಜಾಗದಲ್ಲಿ ತಮ್ಮ ಹೆಸರನ್ನು ನಮೂದಿಸಿ ಲಾಭ ಪಡೆಯುತ್ತಿದ್ದಾರೆ. ಸಂತ್ರಸ್ತ ಕುಟುಂಬದ ಸದಸ್ಯರು ಸ್ವತಃ ಅಧಿಕಾರಿಗಳ ಜತೆ ಶಾಮೀಲಾಗಿ ಈ ಕೃತ್ಯ ಎಸಗುತ್ತಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.