ADVERTISEMENT

ಬರ | 40 ಲಕ್ಷ ರೈತರಿಗೆ ₹4100 ಕೋಟಿ ಪರಿಹಾರ: ಕೃಷ್ಣ ಬೈರೇಗೌಡ

‘ರೈತರ ಜಮೀನುಗಳಿಗೆ ಆಧಾರ್ ಲಿಂಕ್ ಜುಲೈ ಅಂತ್ಯಕ್ಕೆ ಪೂರ್ಣ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 10:21 IST
Last Updated 24 ಜೂನ್ 2024, 10:21 IST
   

ಕಲಬುರಗಿ: ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವ, ಒಬ್ಬರ ಜಮೀನಿನ ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಗ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ವಿಭಾಗ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ 1.75 ಕೋಟಿ ಆಸ್ತಿಗಳಿಗೆ ಆಧಾರ್ ಲಿಂಗ್ ಮಾಡಲಾಗಿದೆ. ಇದರಿಂದಾಗಿ ಭೂಮಿಯ ಮಾಲೀಕರಿಗೆ ಹೆಚ್ಚಿನ ಸುರಕ್ಷೆ ದೊರೆಯಲಿದೆ. ಅವರ ಭೂಮಿಯನ್ನು ಮತ್ತೊಬ್ಬರು ಕಬಳಿಸಿ ಬೇರೆಯವರಿಗೆ ಪರಭಾರೆ ಮಾಡುವುದು ತಪ್ಪಲಿದೆ. ಅಲ್ಲದೇ, ಆ ಜಮೀನಿನ ಮಾರಾಟ, ತಮ್ಮ ಕುಟುಂಬದ ಇತರ ಸದಸ್ಯರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯೂ ಸರಳವಾಗಲಿದೆ’ ಎಂದರು.

‘ಒಟ್ಟಾರೆ ರಾಜ್ಯದಲ್ಲಿ 4 ಕೋಟಿ ಆಸ್ತಿಗಳ ಮಾಲೀಕರಿದ್ದು, ಅದರಲ್ಲಿ 24 ಲಕ್ಷ ರೈತರು ಮೃತಪಟ್ಟಿದ್ದಾರೆ. ಅವರಿಗೆ ಪೌತಿ ಖಾತೆ ಮಾಡಿಕೊಡಬೇಕಿದೆ. ಇನ್ನೂ ಕೆಲವು ಪಹಣಿಯಲ್ಲಿ ಮಾತ್ರ ಜಮೀನಾಗಿದ್ದು, ಕೃಷಿಯೇತರ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಎನ್‌ಎ ಆದ ಜಮೀನುಗಳಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಆಸ್ತಿಗಳ ಮಾಲೀಕರು ಮೃತ‍ಪಟ್ಟ ಪ್ರಕರಣಗಳಲ್ಲಿ ಗ್ರಾಮಗಳ ಹಂತದಲ್ಲಿ ವಿಶೇಷ ಪೌತಿ ಅಭಿಯಾನ ನಡೆಸಿ ಅವರ ವಾರಸುದಾರರಿಗೆ ಅವರ ಒಪ್ಪಿಗೆ ಮೇರೆಗೆ ಭೂಮಿಯ ಹಕ್ಕನ್ನು ವರ್ಗಾಯಿಸಲಾಗುವುದು ಎಂದರು.

ಸರ್ಕಾರಿ ಆಸ್ತಿ ರಕ್ಷಣೆಗೆ ಲ್ಯಾಂಡ್ ಬ್ಯಾಂಕ್: ರಾಜ್ಯದ ವಿವಿಧ ಕಡೆ ಇರುವ ಸರ್ಕಾರಿ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಇಲಾಖೆಯು ಲ್ಯಾಂಡ್ ಬ್ಯಾಂಕ್ ಅಭಿಯಾನವನ್ನು ನಡೆಸುತ್ತಿದ್ದು, ಇಲಾಖೆ ಅಧೀನದಲ್ಲಿರುವ ಭೂಮಿಯನ್ನು ಗುರುತಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಒಟ್ಟಾರೆ ಇಲಾಖೆಯ ಅಧೀನದಲ್ಲಿ 14.50 ಲಕ್ಷ ಸರ್ಕಾರಿ ಜಾಗಗಳಿವೆ. ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಇದುವರೆಗೆ 9.70 ಲಕ್ಷ ಆಸ್ತಿಗಳಿಗೆ ಭೇಟಿ ನೀಡಿದ್ದಾರೆ. ಈ ಆಸ್ತಿಗಳ ಮಾಹಿತಿಯನ್ನು ಮೊಬೈಲ್‌ನಲ್ಲೇ ಪಡೆಯಲು ಸಾಫ್ಟ್‌ವೇರ್ ರೂಪಿಸಲಾಗಿದ್ದು, ಬೆರಳ ತುದಿಯಲ್ಲೇ ಯಾವ ಭೂಮಿ ಎಲ್ಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಜಿಪಿಎಸ್ ಅಳವಡಿಸಲಾಗುವುದರಿಂದ ಒತ್ತುವರಿಯಾಗಿದ್ದರೆ ಅದರ ಮಾಹಿತಿಯೂ ಸಿಗಲಿದೆ. ಎಲ್ಲ ಆಸ್ತಿಗಳಿಗೆ ಭೇಟಿ ನೀಡಿ ವರದಿ ನೀಡಿದ ನಂತರ, ಯಾವುದಾದರೂ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಪ್ರಕ್ರಿಯೆಯೂ ನಡೆಯಲಿದೆ. ಈ ಆಸ್ತಿಗಳಲ್ಲಿ ಕೆರೆ, ಸ್ಮಶಾನಗಳೂ ಸೇರಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕಳೆದ ಬಾರಿ ಬರಗಾಲದಿಂದ ತತ್ತರಿಸಿದ 40 ಲಕ್ಷ ರೈತರಿಗೆ ವಿಪತ್ತು ಪರಿಹಾರವಾಗಿ ₹ 4100 ಕೋಟಿ ಪರಿಹಾರ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ರೈತರ ಜೀವನೋಪಾಯಕ್ಕಾಗಿ ತಲಾ ₹ 3 ಸಾವಿರದಂತೆ 18 ಲಕ್ಷ ರೈತರಿಗೆ ₹ 500 ಕೋಟಿ ಪರಿಹಾರ ನೀಡಲಾಗಿದೆ ಎಂದರು. ನಾವು ಸಮರ್ಥವಾಗಿ ಬರ ಪರಿಹಾರ ಪಾವತಿ ಮಾಡಿದ ಕ್ರಮವನ್ನು ಶ್ಲಾಘಿಸಿರುವ ಕೇಂದ್ರ ಸರ್ಕಾರ ಕರ್ನಾಟಕದ ಮಾದರಿ ಅನುಸರಿಸುವಂತೆ ಇತರೆ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ ಎಂದರು.

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ್, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಗೋಷ್ಠಿಯಲ್ಲಿದ್ದರು.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಇಲ್ಲಿಯವರೆಗೆ 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ 8.37 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು
–ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.