ಚಿಕ್ಕಬಳ್ಳಾಪುರ: ವಿಧಾನಸಭೆ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ತಮ್ಮ ಸ್ಥಾನಕ್ಕೆ ಸೆಪ್ಟೆಂಬರ್ 11 ರಂದು ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ನಾನು ಸಚಿವ ಸ್ಥಾನ ಬಯಸಿದ್ದೆ. ಆದರೆ ಜೆಡಿಎಸ್ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರು ಕೊನೆಯ ಕ್ಷಣದಲ್ಲಿ ಸದ್ಯ ಈ ಹುದ್ದೆಗೆ ಒಪ್ಪಿಕೊಳ್ಳಿ ಎಂದು ಒತ್ತಾಯ ಮಾಡಿದರು. ಹೀಗಾಗಿ ನನಗೆ ಇಷ್ಟವಿಲ್ಲದಿದ್ದರೂ ವರಿಷ್ಠರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಉಪ ಸಭಾಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದ್ದೆ’ ಎಂದು ಕೃಷ್ಣಾರೆಡ್ಡಿ ಅವರು ಆಪ್ತ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
‘ನಾನು ಕೇವಲ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ಆದರೆ ಜೆಡಿಎಸ್‌ನಲ್ಲಿ ನಾಲ್ಕೈದು ಆಯ್ಕೆಯಾದವರಿದ್ದಾರೆ. ಎ.ಟಿ.ರಾಮಸ್ವಾಮಿ, ವಿಶ್ವನಾಥ್ ಸೇರಿದಂತೆ ಅನೇಕ ಹಿರಿಯರು ಇದ್ದಾರೆ. ಅದು ಹಿರಿಯರಿಗೆ ಕೊಡುವ ಸ್ಥಾನ. ಆದ್ದರಿಂದ ಅದು ನನಗೆ ಸೂಕ್ತವಲ್ಲ ಎಂದು ಎನಿಸುತ್ತಿದೆ. ನಾನು ಶಾಸಕನಾಗಿಯೇ ಇರಲು ಬಯಸುತ್ತೇನೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
‘ಆ ಸ್ಥಾನವನ್ನು ಹಿರಿಯರಿಗೆ ನೀಡಲಿ. ಸಚಿವ ಸ್ಥಾನ ನೀಡುವುದು ಬಿಡುವುದು ವರಿಷ್ಠರ ನಿರ್ಧಾರ. ಆದರೆ ಆ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುತ್ತಿಲ್ಲ. ನನಗೆ ಯಾವುದೇ ಅಸಮಾಧಾನ, ಬೇಸರವಿಲ್ಲ. ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11ರ ಸುಮಾರಿಗೆ ವಿಧಾನಸಭೆ ಸಭಾಪತಿ ಕೆ.ಆರ್.ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಕೃಷ್ಣಾರೆಡ್ಡಿ ಅವರನ್ನು ಅನೇಕ ಬಾರಿ ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ. ನಂತರ ಅವರ ಮೊಬೈಲ್ ಸ್ವಿಚ್ಡ್‌ಆಫ್ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.