ADVERTISEMENT

ಕೆಆರ್‌‍ಪಿಪಿ ಅಧ್ಯಕ್ಷರಾಗಿ ಜನಾರ್ದನ ರೆಡ್ಡಿ

‘ಲೋಕಸಭೆ ಚುನಾವಣೆಗೆ ಮೈತ್ರಿ ಇಲ್ಲ; 2ರಿಂದ 6 ಕ್ಷೇತ್ರದಲ್ಲಿ ಸ್ಪರ್ಧೆ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 23:48 IST
Last Updated 25 ನವೆಂಬರ್ 2023, 23:48 IST
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ದ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜನಾರ್ದನ ರೆಡ್ಡಿ ಅವರನ್ನು ಪಕ್ಷದ ಮುಖಂಡರು ಸನ್ಮಾನಿಸಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ದ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜನಾರ್ದನ ರೆಡ್ಡಿ ಅವರನ್ನು ಪಕ್ಷದ ಮುಖಂಡರು ಸನ್ಮಾನಿಸಿದರು.   

ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ನೂತನ ರಾಜ್ಯ ಅಧ್ಯಕ್ಷರಾಗಿ ಗಂಗಾವತಿ ಕ್ಷೇತ್ರದ ಶಾಸಕ ಜಿ.ಜನಾರ್ದನ ರೆಡ್ಡಿ ಅವರು ನಗರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಹಿಂದಿನ ಅಧ್ಯಕ್ಷ ಜೆ.ರಾಮಣ್ಣ ಅವರಿಂದ ಪಕ್ಷದ ಬಾವುಟ ಸ್ವೀಕರಿಸಿದ ರೆಡ್ಡಿ, ‘ಪ್ರಾದೇಶಿಕ ಪಕ್ಷದಲ್ಲಿ ಹೊಸ ಶಕೆ ಆರಂಭ’ವಾಗಿದೆ ಎಂದು ಘೋಷಿಸಿದರು. ಹಲವು ಜಿಲ್ಲೆಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಾಕ್ಷಿಯಾದರು. ಇದೇ ವೇಳೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.

ನಂತರ ಮಾತನಾಡಿದ ಜನಾರ್ದನ ರೆಡ್ಡಿ, ‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಚಿತ್ರದುರ್ಗ, ಕೋಲಾರ, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ, ಕ್ಷೇತ್ರದಲ್ಲಿನ ವಾತಾವರಣ ಅವಲೋಕಿಸುತ್ತೇನೆ. ಪೂರಕ ವಾತಾವರಣವಿರುವ  ಎರಡರಿಂದ ಆರು ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದೇವೆ. 2028ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು 113 ಕ್ಷೇತ್ರದಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಸಹ ಆರಂಭಿಕ ದಿನಗಳಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿತ್ತು. ನಂತರ, ಅಧಿಕಾರಕ್ಕೇರಿತ್ತು’ ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಅಧಿಕಾರದ ದಾಹ. ಬಿಜೆಪಿ ಬಗ್ಗೆಯೂ ಜನರಿಗೆ ಅಸಮಾಧಾನವಿದೆ. ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರವು ಗೊಂದಲ ಮೂಡಿಸುತ್ತಿದೆ’ ಎಂದು ಆಪಾದಿಸಿದರು.

ಇದೇ ವೇಳೆ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮನೋಹರಗೌಡ, ವೆಂಕಟರಮಣ, ಮುನ್ನಬಾಯಿ, ಶ್ರೀಕಾಂತ್‌, ಕೆ.ಎಸ್.ದಿವಾಕರ್‌, ಯುವ ಘಟಕದ ರಾಜ್ಯ ಅಧ್ಯಕ್ಷರಾದ ಭೀಮಾಶಂಕರ್‌ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಎಸ್‌.ಸಿ ಘಟಕದ ಅಧ್ಯಕ್ಷ ದೊರೆಪ್ಪನಾಯಕ ಸೇರಿದಂತೆ ಹಲವರಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.