ಮಂಡ್ಯ: ಕೆಆರ್‌ಎಸ್‌ನಲ್ಲಿ ಸದ್ಯ ಸಂಗ್ರಹ ಇರುವ ನೀರನ್ನು ಕುಡಿಯುವುದಕ್ಕೆ ಮೀಸಲಿಟ್ಟಿದ್ದು, ಬೇಸಿಗೆಯಲ್ಲಿ ಯಾವುದೇ ಬೆಳೆಗೆ ನೀರು ಹರಿಸದೇ ಇರಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಕೆಆರ್‌ಎಸ್ ಜಲಾಶಯದ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಸದ್ಯ ಜಲಾಶಯದಲ್ಲಿ 16 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ ಬೇಸಿಗೆಯಲ್ಲಿ 2-3 ಟಿಎಂಸಿ ನೀರು ಆವಿ ಆಗುವ ಸಾಧ್ಯತೆ ಇದೆ. ಇನ್ನು 13 ಟಿಎಂಸಿ ಅಷ್ಟೇ ಬಳಕೆಗೆ ಲಭ್ಯ ಇರಲಿದೆ ಎಂದು ವಿವರಿಸಿದರು.
ಕೆಆರ್‌ಎಸ್‌ನಿಂದ ಬೆಂಗಳೂರು, ಮೈಸೂರು ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತಿಂಗಳಿಗೆ 2.1 ಟಿಎಂಸಿ ನೀರು ಪೂರೈಕೆ ಆಗುತ್ತಿದೆ. ಜೂನ್‌ವರೆಗೆ ಕುಡಿಯುವ ನೀರಿಗೆಂದೇ 16 ಟಿಎಂಸಿ ನೀರು ಬೇಕು. ಹೀಗಾಗಿ ಮಳೆ ಆಗದೇ ಇದ್ದಲ್ಲಿ ಕಡೆಯ ಎರಡು ತಿಂಗಳು ಕುಡಿಯುವ ನೀರಿಗೆ ಕೊರತೆ ಆಗಬಹುದು ಎಂದರು.
ಮಂಡ್ಯ ಜಿಲ್ಲೆಯ ಶಾಸಕರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನಲ್ಲಿ ಮುಖ್ಯಮಂತ್ರಿ ಪ್ರವಾಸದಲ್ಲಿರುವ ಕಾರಣ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಆ ಭಾಗದ ಸಚಿವರು, ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.