ಬೆಂಗಳೂರು: ‘ರಾಮಾಯಣ, ಮಹಾಭಾರತ ಮತ್ತು ಹಿಂದೂ ಧರ್ಮ ದೇವತೆಗಳನ್ನು ಅವಹೇಳನ ಮಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ‘ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹಾಗೂ ಪೆರಿಯಾರ್ ಚಿಂತಕಿ ಎಂ. ಕಲೈ ಸೆಲ್ವಿ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ಪ್ರಾಸಿಕ್ಯೂಷನ್ ಪರ ವಕೀಲರಿಗೆ ಸೂಚಿಸಿದೆ.
‘2015ರ ಸೆಪ್ಟೆಂಬರ್‌ನಲ್ಲಿಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದ್ದ ಪೆರಿಯಾರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ, ಕೆ.ಎಸ್. ಭಗವಾನ್, ಚಂದ್ರಶೇಖರ ಪಾಟೀಲ (ಚಂಪಾ) ಮತ್ತು ಎಂ.ಕಲೈ ಸೆಲ್ವಿ ಹಿಂದೂಗಳ ಭಾವನೆ ಕೆರಳಿಸುವಂತಹ ಪ್ರಚೋದನಕಾರಿ ಭಾಷಣ ಮಾಡಿದ್ದರು’ ಎಂದು ಆರೋಪಿಸಿಶ್ಯಾಮ ಸುದರ್ಶನ್ ಭಟ್ ಎಂಬುವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಐಪಿಸಿ ಕಲಂ 295(ಎ) ಮತ್ತು 153(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಕಾರ್ಯಕ್ರಮ ನಡೆದ ಸ್ಥಳ ಬೆಂಗಳೂರು ಎಂಬ ಕಾರಣಕ್ಕೆ ಪ್ರಕರಣವನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ನಡೆಸಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವನ್ನುನ್ಯಾಯಾಧೀಶ ವೀರನಗೌಡ ಎಸ್.ಪಾಟೀಲ ಸೋಮವಾರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಭಗವಾನ್ ಪರ ವಕೀಲ ಕೆ.ಎಸ್.ಚಿಕ್ಕಚನ್ನೇಗೌಡ, ‘ಪ್ರಕರಣದ ಮೊದಲ ಆರೋಪಿಯಾಗಿರುವ ಕೆ.ಎಸ್.ಭಗವಾನ್ 76 ವರ್ಷ ಮೀರಿದ್ದಾರೆ. ಪ್ರತಿ ವಿಚಾರಣೆಗೆ ಮೈಸೂರಿನಿಂದ ಇಲ್ಲಿಗೆ ಬರಬೇಕಿದ್ದು, ಅವರಿಗೆ ಜಾಮೀನು ನೀಡಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಚಂಪಾ ಅವರ ನಿಧನದ ಬಗ್ಗೆ ಪೊಲೀಸರು ವರದಿ ಸಲ್ಲಿಸುವಂತೆ ಸೂಚಿಸಿ, ಉಳಿದ ಆರೋಪಿಗಳ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.