ADVERTISEMENT

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ: ರಾಜೀನಾಮೆಗೆ ಒಪ್ಪದ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 20:18 IST
Last Updated 13 ಏಪ್ರಿಲ್ 2022, 20:18 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರುವ ಆರೋಪಕ್ಕೆ ಗುರಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಬೇಕೆಂಬ ಒತ್ತಡ ಪಕ್ಷದೊಳಗೆ ಹಾಗೂ ಹೊರಗೆ ಹೆಚ್ಚುತ್ತಿದೆ. ಆದರೆ, ಬಿಜೆಪಿ ವರಿಷ್ಠರು ಮತ್ತು ಮುಖ್ಯಮಂತ್ರಿ ಸೂಚನೆಯನ್ನೂ ಕಡೆಗಣಿಸಿರುವ ಅವರು ಹುದ್ದೆಯಲ್ಲಿ ಮುಂದುವರಿಯಲು ಕಸರತ್ತು ನಡೆಸುತ್ತಿದ್ದಾರೆ.

‘ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾನು ಮಾಡಿರುವ ಕಾಮಗಾರಿಗಳ ಬಿಲ್‌ ಮಂಜೂರಾತಿಗೆ ಈಶ್ವರಪ್ಪ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪ ಮಾಡಿದ್ದ ಸಂತೋಷ್, ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಪತ್ತೆಯಾಗಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಿಸಿದ್ದು, ಈಶ್ವರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅವರ ಆಪ್ತರಾದ ಬಸವರಾಜ್‌ ಮತ್ತು ರಮೇಶ್‌ ಇತರ ಆರೋಪಿಗಳು.

ಸಂತೋಷ್‌ ಸಾವಿನ ಸಂಗತಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್‌, ಎಎಪಿ ಸೇರಿದಂತೆ ವಿರೋಧ ಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಬೀದಿಗೆ ಇಳಿದಿದ್ದವು. ಮಂಗಳವಾರವೇ ಹಲವೆಡೆ ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಉಡುಪಿಗೆ ದೌಡಾಯಿಸಿದ್ದ ಮೃತ ಗುತ್ತಿಗೆದಾರನ ಸಹೋದರರು, ಈಶ್ವರಪ್ಪ ಮತ್ತು ಇತರ ಆರೋಪಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದರು.

ADVERTISEMENT

ಸೆಡ್ಡು ಹೊಡೆದ ಸಚಿವ: ಬಿಜೆಪಿಯ ವಿಭಾಗವಾರು ಸಭೆಯಲ್ಲಿ ಭಾಗವಹಿಸಲು ಈಶ್ವರಪ್ಪ ಮೈಸೂರಿನಲ್ಲಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ವಿಭಾಗವಾರು ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಂಗಳೂರಿನಲ್ಲಿದ್ದರು. ಇಬ್ಬರನ್ನೂ ಸಂಪರ್ಕಿಸಿದ್ದ ಬಿಜೆಪಿಯ ವರಿಷ್ಠರು, ಈಶ್ವರಪ್ಪ ರಾಜೀನಾಮೆಗೆ ಸೂಚಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ವರಿಷ್ಠರಿಂದ ನಿರ್ದೇಶನ ಬರುತ್ತಿದ್ದಂತೆಯೇ ಈಶ್ವರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಬೊಮ್ಮಾಯಿ, ಸಂದೇಶ ರವಾನಿಸಿದ್ದರು. ಮೈಸೂರಿನ ಹೋಟೆಲ್‌ ಆವರಣದಲ್ಲಿ ಏಕಾಂಗಿಯಾಗಿ ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ಈಶ್ವರಪ್ಪ, ತರಾತುರಿಯಲ್ಲಿ ಕಾರು ಏರಿ ಹೊರಟಿದ್ದರು.

‘ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ನೀಡಬೇಕಾಗುತ್ತದೆ’ ಎಂದು ಈಶ್ವರಪ್ಪ ಮೈಸೂರಿನಿಂದ ಹೊರಡುವ ಮುನ್ನ ಹೇಳಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯ ಸುಳಿವನ್ನೂ ನೀಡಿದ್ದರು. ಪಕ್ಷದ ವರಿಷ್ಠರ ಸೂಚನೆಯಂತೆ ಈಶ್ವರಪ್ಪ ಬೆಂಗಳೂರಿಗೆ ಬಂದು ರಾಜೀನಾಮೆ ಸಲ್ಲಿಸಬಹುದು ಎಂದು ಹೇಳಲಾಗಿತ್ತು.

ಮುಖ್ಯಮಂತ್ರಿ ಕೂಡ ಅದೇ ಉದ್ದೇಶದಿಂದ ಮಂಗಳೂರಿನಿಂದ ನಿಗದಿತ ಸಮಯಕ್ಕೆ ಸರಿಯಾಗಿ ಹಿಂದಿರುಗಿದ್ದರು. ಆದರೆ, ಮಾರ್ಗ ಮಧ್ಯದಲ್ಲೇ ತೀರ್ಮಾನ ಬದಲಿಸಿದ ಈಶ್ವರಪ್ಪ ಶಿವಮೊಗ್ಗಕ್ಕೆ ತೆರಳಿದರು. ಅಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಕಟಿಸಿದ್ದಲ್ಲದೇ, ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಎರಡು ದಿನಗಳ ಬಳಿಕ ಬೆಂಗಳೂರಿಗೆ ಬಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ವರಿಷ್ಠರು ಮತ್ತು ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಚಿವರ ಜತೆ ಚರ್ಚೆ: ಈಶ್ವರಪ್ಪ ಅವರನ್ನು ಸಂಪುಟದಲ್ಲಿ ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ ಎಂಬ ಅಭಿಪ್ರಾಯ ಬಿಜೆಪಿ ವರಿಷ್ಠರಿಂದಲೇ ಬಂದಿದೆ. ಈ ಕಾರಣಕ್ಕಾಗಿ ಈಶ್ವರಪ್ಪ ರಾಜೀನಾಮೆಗೆ ನಿರಾಕರಿಸಿದರೆ ಸಂಪುಟದಿಂದ ಕೈಬಿಡುವ ಕುರಿತಂತೆಯೂ ಬೊಮ್ಮಾಯಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಕೆಲವು ಸಚಿವರ ಜತೆ ಬುಧವಾರ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಗುರುವಾರ ಬಂದು ಭೇಟಿಮಾಡುವುದಾಗಿ ಈಶ್ವರಪ್ಪ ಅವರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ. ಗುರುವಾರವೂ ಅವರು ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ಕೈಬಿಡುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ರಾಜ್ಯಪಾಲರಿಗೆ ದೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ನೇತೃತ್ವದ ನಿಯೋಗ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಬುಧವಾರ ಭೇಟಿಮಾಡಿದ್ದು, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿತು.

ಬಳಿಕ ಇದೇ ನಾಯಕರ ತಂಡ ಬೆಳಗಾವಿಗೆ ತೆರಳಿ, ಮೃತ ಸಂತೋಷ್‌ ಪಾಟೀಲ ಅವರ ಮನೆಗೆ ಭೇಟಿ ನೀಡಿ, ಮೃತರ ಪತ್ನಿ ಜಯಶ್ರೀ ಪಾಟೀಲ ಅವರಿಗೆ ಸಾಂತ್ವನ ಹೇಳಿತು.

‘ಕಾಮಗಾರಿ ನಡೆಸುವಂತೆ ಈಶ್ವರಪ್ಪ ತಿಳಿಸಿದ್ದು ನಿಜ’

ಬೆಳಗಾವಿ: ‘ಸಚಿವ ಕೆ.ಎಸ್. ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಗೆ ಕಾಮಗಾರಿಗಳನ್ನು ನಡೆಸಲು ತಿಳಿಸಿದ್ದು ನಿಜ’ ಎಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಹೇಳಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಹಿಂಡಲಗಾ ಗ್ರಾಮದ ಲಕ್ಷ್ಮೀದೇವಿ ಜಾತ್ರೆ ನೂರು ವರ್ಷಗಳ ಬಳಿಕ 2021ರಲ್ಲಿ ನಡೆದಿತ್ತು. ಆಗ ರಸ್ತೆ ದುರಸ್ತಿ ಸೇರಿದಂತೆ 108 ಕಾಮಗಾರಿಗಳನ್ನು ನಡೆಸಲಾಗಿತ್ತು. ಗುತ್ತಿಗೆದಾರ ಸಂತೋಷ್‌ ಅವರ ಬಿಲ್ ಬಾಕಿ ಉಳಿದಿದೆ. ಅವರು ಹಣಕ್ಕಾಗಿ ಓಡಾಡುತ್ತಿದ್ದರು’ ಎಂದು ಪ್ರತಿಕ್ರಿಯಿಸಿದರು.

‘ನಾನೂ ಎರಡು ಬಾರಿ ಸಂತೋಷ್ ಜೊತೆಗೆ ಹೋಗಿ ಈಶ್ವರಪ್ಪ ಅವರನ್ನು ಭೇಟಿಯಾಗಿದ್ದೆ. ಮೊದಲು ಉತ್ತಮವಾಗಿ ಕಾಮಗಾರಿ ನಡೆಸು, ನಂತರ ಸರಿ ಮಾಡುತ್ತೇನೆ ಎಂದು ಈಶ್ವರಪ್ಪ ಭರವಸೆ ನೀಡಿದ್ದರು’ ಎಂದು ತಿಳಿಸಿದರು.

‘ಸಂತೋಷ್ ಸಚಿವರ ಜೊತೆ ಚರ್ಚಿಸಿದ್ದರು. ಅವರ ಬಳಿ ಕಾರ್ಯಾದೇಶ ಇತ್ತೋ, ಇಲ್ಲವೋ ನನಗೆ ಗೊತ್ತಿಲ್ಲ. ಅವರು ಇಲ್ಲಿ ಕಾಮಗಾರಿ ನಡೆಸಿದ್ದು ನಿಜ. ಕಾಮಗಾರಿಗೆ ವ್ಯಯಿಸಿದ ಹಣ ಅವರ ಕುಟುಂಬಕ್ಕಾದರೂ ಸಿಗಬೇಕು’ ಎಂದರು.

ಸಿಎಂ ನಿವಾಸಕ್ಕೆ ಕಾಂಗ್ರೆಸ್‌ ಮುತ್ತಿಗೆ ಇಂದು

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಶೇ 40 ಕಮಿಷನ್‌ ಆರೋಪ ಹೊರಿಸಿ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ, ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್‌ ನಾಯಕರು, ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ನಿವಾಸಕ್ಕೆ ಗುರುವಾರ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

‘ಬೆಳಿಗ್ಗೆ 10.30ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮುಖ್ಯಮಂತ್ರಿ ಮನೆಯ ಬಳಿಗೆ ತೆರಳುತ್ತೇವೆ. ಹೀಗಾಗಿ, ಪಕ್ಷದ ವತಿಯಿಂದ ಬೆಳಿಗ್ಗೆ ನಡೆಯಬೇಕಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?

ಸಂತೋಷ್‌ ಪಾಟೀಲ ಸಹೋದರ ಪ್ರಶಾಂತ್‌ ಪಾಟೀಲ ನೀಡಿರುವ ದೂರನ್ನು ಆಧರಿಸಿ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್‌ ಹಾಗೂ ರಮೇಶ್‌ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಕಲಂ 34 (ಒಂದೇ ಉದ್ದೇಶಕ್ಕಾಗಿ ಹಲವರು ಜತೆಗೂಡಿ ಕೃತ್ಯ ಎಸಗಿರುವುದು) ಮತ್ತು ಕಲಂ 306 (ಆತ್ಮಹತ್ಯೆಗೆ ಕುಮ್ಮಕ್ಕು ನೀಡುವುದು) ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.