ADVERTISEMENT

ರಾಯಣ್ಣ –ಚನ್ನಮ್ಮ ಬ್ರಿಗೇಡ್‌ಗೆ ದೊಡ್ಡಮಟ್ಟದಲ್ಲಿ ಚಾಲನೆ: ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 22:56 IST
Last Updated 25 ಸೆಪ್ಟೆಂಬರ್ 2024, 22:56 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬೆಂಗಳೂರು: ಹಿಂದೂಗಳ ಪರ ಹೋರಾಟ ನಡೆಸಲು ರಾಯಣ್ಣ –ಚನ್ನಮ್ಮ ಬ್ರಿಗೇಡ್‌ಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಲಾಗುವುದು. ಇದಕ್ಕಾಗಿ ಸದ್ಯವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಅವರ ಜತೆ ಮಂಗಳವಾರ ರಾತ್ರಿ ನಡೆದ  ಮಾತುಕತೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಿತು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತೀಚೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಹಿಂದುಗಳ ಮೇಲೆ ಮುಸ್ಲಿಮರಿಂದ ದಾಳಿ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರ ಹಿಂದುಗಳಿಗೆ ರಕ್ಷಣೆ ನೀಡುತ್ತಿಲ್ಲ. ಸಮಸ್ತ ಹಿಂದುಗಳ ರಕ್ಷಣೆಗಾಗಿ ಯತ್ನಾಳ ಅವರ ಜತೆ ಸೇರಿ ಹಿಂದುಗಳನ್ನು ಸಂಘಟಿಸಲು ಮತ್ತು ಜಾಗೃತಗೊಳಿಸಲು ತೀರ್ಮಾನಿಸಲಾಯಿತು ಎಂದರು.

ADVERTISEMENT

ಚನ್ನಮ್ಮ–ರಾಯಣ್ಣ ಬ್ರಿಗೇಡ್‌ಗೆ ಚಾಲನೆ ನೀಡಲು ಸದ್ಯವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಇದಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಯ್ದ 1,500 ರಿಂದ 2,000 ಪ್ರಮುಖರನ್ನು ಆಹ್ವಾನಿಸಿ ಚರ್ಚಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು. 

ರಾತ್ರಿ ನಡೆದ ಸಭೆಯಲ್ಲಿ ರಾಜಕೀಯ ವಿಚಾರವೂ ಚರ್ಚೆಗೆ ಬಂದಿತು. ಪಕ್ಷಕ್ಕೆ ಸೇರಿಸಿಕೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.