ADVERTISEMENT

ಕಾಂಗ್ರೆಸ್‌ ಸರ್ವನಾಶಕ್ಕೆ ಸಿದ್ದರಾಮಯ್ಯ ಶಪಥ: ಈಶ್ವರಪ್ಪ

ಸಚಿವ ಕೆ.ಎಸ್‌. ಈಶ್ವರ‍ಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 15:42 IST
Last Updated 2 ಡಿಸೆಂಬರ್ 2019, 15:42 IST
ಅಥಣಿಯಲ್ಲಿ ಸೋಮವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಅಥಣಿಯಲ್ಲಿ ಸೋಮವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಅಥಣಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಸರ್ವನಾಶ ಮಾಡುವ ಶಪಥವನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ. 120 ಸ್ಥಾನ ಗೆದಿದ್ದ ಆ ಪಕ್ಷವನ್ನು 78 ಸ್ಥಾನಗಳಿಗೆ ತಂದು ನಿಲ್ಲಿಸಿದರು. ಈಗ ಅದನ್ನು 62ಕ್ಕೆ ತಂದಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಉಪ ಚುನಾವಣೆ ಅಂಗವಾಗಿ ಸೋಮವಾರ ಇಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮತ್ತೆ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿರುವ ಸಿದ್ದರಾಮಯ್ಯ, ಧರ್ಮಗಳು ಮತ್ತು ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಸ್ವತಃ ಕುರುಬ ಸಮಾಜದವರಾದ ಅವರು ಯಾವ ಕುರುಬ ನಾಯಕನನ್ನು ಬೆಳೆಸಿದ್ದಾರೆಯೇ? ಅವರನ್ನು ಕಾಂಗ್ರೆಸ್‌ಗೆ ಕರೆ ತಂದ ಎಚ್. ವಿಶ್ವನಾಥ್‌ ಅವರನ್ನೇ ತುಳಿಯಲು ಯತ್ನಿಸಿದರು. ಹೀಗಾಗಿ, ಅವರು ಬಿಜೆಪಿಗೆ ಬಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಎಚ್‌.ಡಿ. ಕುಮಾರಸ್ವಾಮಿ 4 ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದ್ದರು. ಇದರಿಂದಾಗಿ 17 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ’ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ನಮ್ಮ ಪಕ್ಷ ಎಲ್ಲ ಸಮುದಾಯದವರನ್ನೂ ಬೆಳೆಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಕುರುಬ ಸಮುದಾಯಕ್ಕೆ ಆದ್ಯತೆ ನೀಡಿರಲಿಲ್ಲ. ಈಗ ಕುರುಬ ಸಮಾಜದ ಐವರು ಮಂತ್ರಿಯಾಗುತ್ತಾರೆ. ಆದರೆ, ನಾನು ಮಾತ್ರ ಮಂತ್ರಿಯಾಗುವುದಿಲ್ಲ. ಶಾಸಕನಾಗಿಯೇ ಉಳಿಯುತ್ತೇನೆ. ಮಂತ್ರಿ ಮಾಡಲಿ ಬಿಡಲಿ ನಾನು ಯಡಿಯೂರಪ್ಪ ಹಿಂದಿರುತ್ತೇನೆ’ ಎಂದು ಹೇಳಿದರು.

ಅಭ್ಯರ್ಥಿ ಮಹೇಶ ಕುಮಠಳ್ಳಿ ಮತ ಯಾಚಿಸಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಉಮೇಶ ಕತ್ತಿ, ಡಿ.ಎಂ. ಐಹೊಳೆ, ವಿಧಾನಪರಿಷತ್ ಸದಸ್ಯರಾದಅರುಣ ಶಹಾಪುರ, ಹಣಮಂತ ನಿರಾಣಿ, ಮುಖಂಡರಾದ ಸಿದ್ದು ಸವದಿ, ಮಹೇಶ ತೆಂಗಿನಕಾಯಿ, ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ವಿಜುಗೌಡ ಪಾಟೀಲ ಶಶಿಕಾಂತ ನಾಯಿಕ, ಕಿರಣಗೌಡ ಪಾಟೀಲ, ದಿಲೀಪ ಲೋಣಾರೆ, ಅನಿಲ ಶಾಸ್ತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.