ADVERTISEMENT

ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ್ ಅಹಮದ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಮೇ 2020, 1:44 IST
Last Updated 4 ಮೇ 2020, 1:44 IST
ವ
   

ಬೆಂಗಳೂರು: ಜೋಗದ ಸಿರಿ ಬೆಳಕನ್ನು, ತುಂಗಾ ತೀರದ ತೆನೆಗಳ ಬಳುಕುವಿಕೆಯಲ್ಲಿ ಅಡಗಿರುವ ಸೊಬಗನ್ನು, ಸಹ್ಯಾದ್ರಿಯ ಉತ್ತುಂಗವನ್ನು ನಾಡಿನುದ್ದಗಲಕ್ಕೂ ಪರಿಚಯಿಸಿದ, ಕುರಿಗಳಂತೆ ನಮ್ಮೊಳಗಡಗಿರುವ ಅಮಾಯಕ ಮನಸ್ಥಿತಿಯನ್ನು ತಮ್ಮ ವಿಭಿನ್ನ ವಿಡಂಬನಾ ಶೈಲಿಯಲ್ಲಿ ಕಟ್ಟಿಕೊಟ್ಟ ಪ್ರೊ.ಕೆ.ಎಸ್.ನಿಸಾರ್ ಅಹಮದ್ (84) ಇನ್ನು ನೆನಪು ಮಾತ್ರ.

ತಮ್ಮ ಸರಳ ಹಾಗೂ ಹೃದಯಸ್ಪರ್ಶಿ ಭಾಷೆಯ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ‘ನಿತ್ಯೋತ್ಸವ‘ದ ರಂಗು ತುಂಬಿದ ನಿಸಾರ್ ಅವರು ಪದ್ಮನಾಭನಗರದ ಸ್ವಗೃಹದಲ್ಲಿ ಭಾನುವಾರ ನಿಧನರಾದರು.

ಬೆಂಗಳೂರಿನ ಗಾಂಧಿಬಜಾರಿನ ಥಳುಕು ಬಳುಕಿನಿಂದ ಹಿಡಿದು ಶಿವಮೊಗ್ಗೆಯಲ್ಲಿ ಜುಲೈನಲ್ಲಿ ಕಾಣಿಸುವ ಸೋನೆ ಮಳೆಯ ವೈಭವದವರೆಗಿನ ನಿತ್ಯವೂ ಎದುರಾಗುವ ಪ್ರಸಂಗಗಳನ್ನೇ ಬಳಸಿ ಕವಿತೆ ಹೊಸೆಯುತ್ತಾ, ಸಂಬಂಧಗಳ ಮಹತ್ವ ತಿಳಿಸುತ್ತಾ, ಬದುಕಿನಲ್ಲಿ ಸಾರ್ಥಕತೆಯತ್ತ ಹೆಜ್ಜೆ ಹಾಕುವ ಪರಿಯನ್ನು ಹೇಳಿಕೊಟ್ಟ ಮಗು ಮನಸ್ಸಿನ ಕವಿ ಅನಂತತೆಯನ್ನು ಹುಡುಕುತ್ತಾ ಹೊರಟು ಹೋದರು. ಮನಸ್ಸಿಗೆ ಕಚಗುಳಿ ಇಡುವ ಹೊಸಬಗೆಯ ಕವಿತೆಗಳು, ಚಿಂತನೆಗೆ ಒರೆಹಚ್ಚುವ ವೈಚಾರಿಕ ಬರಹಗಳು ಹಾಗೂ ಮಕ್ಕಳ ಸಾಹಿತ್ಯ ಕೃತಿಗಳ ಮೂಲಕ ಅವರು ಕನ್ನಡಿಗರ ಮನಸುಗಳಲ್ಲಿ ನಿತ್ಯೋತ್ಸವವಾಗಿಯೇ ಸದಾ ಉಳಿಯಲಿದ್ದಾರೆ.

ADVERTISEMENT

ಬದುಕಿನುದ್ದಕ್ಕೂ ತಾವು ಬಹುವಾಗಿ ಪ್ರೀತಿಸಿದ್ದ ಪತ್ನಿಶಹನ್ವಾಜ್ ಬೇಗಂ ಅವರನ್ನು ನಿಸಾರ್ ಕಳೆದ ವರ್ಷ ಕಳೆದುಕೊಂಡಿದ್ದರು.ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಈಚೆಗಷ್ಟೇ ಅಮೆರಿಕದಲ್ಲಿ ಮೃತಪಟ್ಟಿದ್ದರು.ಅವರಿಗೆ ಇಬ್ಬರು ಪುತ್ರಿಯರು ಸಹ ಇದ್ದಾರೆ.

ಒಬ್ಬ ಪುತ್ರಿ ಅಮೆರಿಕದಲ್ಲಿದ್ದು, ಲಾಕ್‌ ಡೌನ್‌ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರುವ ಕಾರಣ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರು ವಿಡಿಯೋ ಕಾಲ್‌ ಮೂಲಕ ತಂದೆಯ ಅಂತಿಮ ದರ್ಶನ ಪಡೆದರು. ನಿಸಾರ್ ಅವರ ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳಿಗಾಗಿ ಸ್ವಗೃಹದಲ್ಲಿಯೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಲಾಕ್‌ ಡೌನ್‌ನಿಂದ ಬಹುತೇಕರಿಗೆ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.

ಜೆ.ಸಿ.ನಗರದ ದೂರದರ್ಶನ ಕಚೇರಿ ಬಳಿ ನಂದಿದುರ್ಗ ರಸ್ತೆಯ ಕಬರಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ 1.10ಕ್ಕೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಿಸಾರ್ ಅಹಮದ್ ಅವರ ಪೂರ್ಣ ಹೆಸರು ಕೊಕ್ಕರೆ ಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆ.5ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದರು. 10 ವರ್ಷದವರಿದ್ದಾಗಲೇ ‘ಜಲಪಾತ’ದ ಬಗ್ಗೆ ಅವರು ಬರೆದ ಕವನ ಪತ್ರಿಕೆಯಲ್ಲಿ ಅಚ್ಚಾಗಿತ್ತು. 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳು ಪ್ರಕಟವಾಗಿವೆ. ‌ಅವುಗಳಲ್ಲಿ ‘ಮನಸು ಗಾಂಧಿ ಬಜಾರು’, ‘ನಿತ್ಯೋತ್ಸವ’ ಹಾಗೂ ‘ಕುರಿಗಳು ಸಾರ್ ಕುರಿಗಳು’ ಬಲುಪ್ರಸಿದ್ಧ.

1978ರಲ್ಲಿ ನಿಸಾರ್ ಅವರ ಮೊದಲ ಕ್ಯಾಸೆಟ್ ‘ನಿತ್ಯೋತ್ಸವ’ ಹೊರಬಂದಿತು. ಅವರ ಹಾಡುಗಳು ಮನೆಮಾತಾದವು. ಅವರ ಕವನಗಳನ್ನು ಒಳಗೊಂಡ 13 ಆಡಿಯೋ ಆಲ್ಬಮ್‌ಗಳು ಪ್ರಕಟವಾಗಿವೆ.

2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1984ರಿಂದ 1987ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರಿಗೆಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು, ಬಿರುದುಗಳು ಸಂದಿವೆ. ಪದ್ಮಶ್ರೀ ಗೌರವ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಅರಸು ಪ್ರಶಸ್ತಿ ಸೇರಿದಂತೆ ಹಲವು ಸಾಂಸ್ಕೃತಿಕ ಸಂಘ–ಸಂಸ್ಥೆಗಳ ಗೌರವಕ್ಕೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.