ADVERTISEMENT

ಕೆಎಸ್‌ಡಿಎಲ್‌: ರಾಸಾಯನಿಕ ಮಾದರಿ ಪರೀಕ್ಷೆಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:29 IST
Last Updated 19 ಮಾರ್ಚ್ 2023, 20:29 IST
   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ (ಕೆಎಸ್‌ಡಿಎಲ್) ತಿರಸ್ಕೃತಗೊಂಡಿರುವ ಕೆಲವು ಕಂಪನಿಗಳ ರಾಸಾಯನಿಕ ಮಾದರಿಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಹೈಕೋರ್ಟ್ ನಿರ್ದೇಶಿಸಿದೆ.

ರಾಸಾಯನಿಕಗಳ ಮಾದರಿ ತಿರಸ್ಕರಿಸಿದ್ದ ಕೆಎಸ್‌ಡಿಎಲ್ ಕ್ರಮವನ್ನು ಪ್ರಶ್ನಿಸಿ ಡೆಲಿಷಿಯಾ ಕೆಮಿಕಲ್ಸ್, ಕೆಮಿಕ್ಸಿಲ್ ಕಾರ್ಪೊರೇಷನ್ ಹಾಗೂ ಬನ್ನಾರಿ ಕನ್‌ಸ್ಟ್ರಕ್ಷನ್ಸ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ. ದಳವಾಯಿ, ‘ಕೆಎಸ್‌ಡಿಎಲ್ ಸಾಬೂನು ಮತ್ತು ಮಾರ್ಜಕ ತಯಾರಿಕೆಗಾಗಿ ರಾಸಾಯನಿಕ ತೈಲದಂತಹ ಕಚ್ಚಾ ವಸ್ತುಗಳನ್ನು ಖಾಸಗಿ ಕಂಪನಿಗಳಿಂದ ಖರೀದಿಸುತ್ತದೆ. ಆದರೆ, ಅರ್ಜಿದಾರ ಕಂಪನಿಗಳು ಒದಗಿಸಿದ್ದ 15 ರಾಸಾಯಯನಿಕ ಮಾದರಿಗಳನ್ನು ಕೆಎಸ್‌ಡಿಎಲ್ ತಿರಸ್ಕರಿಸಿದೆ. ದುಬಾರಿ ಬೆಲೆಗೆ ಬೇರೆ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇದರ ಹಿಂದೆ ದುರುದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ದರಿಂದ, ಕೆಎಸ್‌ಡಿಎಲ್ ತಿರಸ್ಕರಿಸಿರುವ ರಾಸಾಯನಿಕ ಮಾದರಿಯನ್ನು ಐಐಎಸ್‌ಸಿ ವಿಜ್ಞಾನಿಗಳಿಂದ ಪರೀಕ್ಷೆಗೆ ಒಳಪಡಿಸಲು ಆದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಪುರಸ್ಕರಿಸಿದ ನ್ಯಾಯಪೀಠ, ‘ಅರ್ಜಿದಾರರ ಕಂಪನಿಗಳು ಕೆಎಸ್‌ಡಿಎಲ್ ತಿರಸ್ಕರಿಸಿರುವ ರಾಸಾಯನಿಕ ಮಾದರಿಯನ್ನು ಐಐಎಸ್‌ಸಿಗೆ ಒದಗಿಸಬೇಕು. ಆ ರಾಸಾಯನಿಕಗಳ ಮಾದರಿಯನ್ನು ಐಐಎಸ್‌ಸಿ ತಪಾಸಣೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ.

ದೂರು: ಕೆಮಿಕ್ಸಿಲ್ ಕಾರ್ಪೊರೇಷನ್‌ನ ಶ್ರೇಯಸ್ ಕಶ್ಯಪ್ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ‘ನಮ್ಮ ಕಂಪನಿಯ ರಾಸಾಯನಿಕ ಮಾದರಿ ತಿರಸ್ಕರಿಸಿ, ದುಬಾರಿ ಬೆಲೆಗೆ ಬೇರೆ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ’ ಎಂದು ಆಕ್ಷೇಪಿಸಿ ಅರ್ಜಿದಾರ ಕಂಪನಿಗಳು ಫೆಬ್ರುವರಿ 14ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಏತನ್ಮಧ್ಯೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 2ರಂದು ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.