ADVERTISEMENT

ಶೀಘ್ರದಲ್ಲಿ ಕೆಎಸ್‌ಡಿಎಲ್‌ ಕ್ಯಾಂಡಲ್‌, ಜೆಲ್‌!

ಹೆಚ್ಚಿದ ಉತ್ಪಾದನಾ ಸಾಮರ್ಥ್ಯ; ವಾರ್ಷಿಕ ವಹಿವಾಟು ₹2,000 ಕೋಟಿಗೆ ಏರಿಕೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 15:40 IST
Last Updated 11 ನವೆಂಬರ್ 2023, 15:40 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಬಗೆ ಬಗೆಯ ಆಲಂಕಾರಿಕ ಮೋಂಬತ್ತಿ (ಕ್ಯಾಂಡಲ್‌), ಚರ್ಮಕ್ಕೆ ಪೋಷಣೆ ನೀಡುವ ಸಾಬೂನು ಜೆಲ್‌, ಲಿಂಬೆ, ಲ್ಯಾವೆಂಡರ್‌, ಗುಲಾಬಿ, ಬೇವು, ಅರಿಸಿನ ಒಳಗೊಂಡ ಸುವಾಸನೆಯ ಸಾಬೂನುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಮುಂದಾಗಿದೆ. ಆ ಮೂಲಕ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿ, ಒಟ್ಟು ವಹಿವಾಟು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯ ಕೆಎಸ್‌ಡಿಎಲ್‌ ವಾರ್ಷಿಕ ₹1,400 ಕೋಟಿಯ ವಹಿವಾಟು ನಡೆಸುತ್ತಿದೆ. ಕಳೆದ ಆರು ತಿಂಗಳಿನಿಂದ ದಿನವೊಂದಕ್ಕೆ $1.30 ಕೋಟಿಯ ಮೌಲ್ಯದ ಉತ್ಪನ್ನಗಳು ಹೆಚ್ಚುವರಿಯಾಗಿ ತಯಾರಿಕೆಯಾಗುತ್ತಿವೆ. ಕಾರ್ಖಾನೆಯಲ್ಲಿ ತಯಾರಿಕಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿ, ಮಾರುಕಟ್ಟೆಯ ಸದ್ಯದ ಅಗತ್ಯಗಳನ್ನು ಮನಗಂಡು ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಲು ಮತ್ತು ಹೊಸ ಏಜೆನ್ಸಿಗಳ ಮೂಲಕ ದೇಶ– ವಿದೇಶಗಳಿಗೆ ಉತ್ಪನ್ನಗಳನ್ನು ತಲುಪಿಸಲು ಕೆಎಸ್‌ಡಿಎಲ್‌ ತಯಾರಿ ನಡೆಸಿದೆ.

‘ಕಳೆದ ಆರು ತಿಂಗಳಲ್ಲಿ ಕೆಎಸ್‌ಡಿಎಲ್‌ ಆಡಳಿತ ಮಂಡಳಿಯ ಸಭೆಗಳನ್ನು ನಿರಂತರ ನಡೆಸಿ, ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ತಯಾರಿಕಾ ಸಾಮರ್ಥ್ಯ ಮತ್ತು ವಹಿವಾಟಿನಲ್ಲಿ ಶೇ 25ರಷ್ಟು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಬೂನು ತಯಾರಿ ಸಾಮರ್ಥ್ಯ ದಿನವೊಂದಕ್ಕೆ 100 ಟನ್‌ನಿಂದ 125 ಟನ್‌ಗೆ ಹೆಚ್ಚಳವಾಗಿದೆ. ಇದು ಕೆಎಸ್‌ಡಿಎಲ್‌ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ತಯಾರಿಕೆ. ಅಲ್ಲದೆ, ವಹಿವಾಟು ದಿನವೊಂದಕ್ಕೆ ₹4 ಕೋಟಿಯಿಂದ ₹5.30 ಕೋಟಿಗೆ ಹೆಚ್ಚಳವಾಗಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ (2023–24) ₹600 ಕೋಟಿಯಷ್ಟು ಹೆಚ್ಚುವರಿ ವಹಿವಾಟು ನಡೆಯಬಹುದೆಂದು ನಿರೀಕ್ಷಿಸಲಾಗಿದೆ. ವಾರ್ಷಿಕ ಒಟ್ಟು ವಹಿವಾಟು ₹2,000 ಕೋಟಿ ಮೀರಲಿದೆ’ ಎಂದು ಕೆಎಸ್‌ಡಿಎಲ್‌ ಅಧ್ಯಕ್ಷರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ADVERTISEMENT

‘ಮೈಸೂರ್  ಸ್ಯಾಂಡಲ್, ಮಿಲೇನಿಯಂ, ಸಿಕ್ಸರ್‌, ಗೋಲ್ಡ್, ಬೇಬಿ, ಹರ್ಬಲ್ ಕೇರ್ ಸೋಪ್, ಮೈಸೂರ್ ಕಾರ್ಬಾಲಿಕ್, ವಾಷಿಂಗ್ ಹಾಫ್ ಬಾರ್ ಸೋಪ್ ಸೇರಿ ಬಗೆ ಬಗೆಯ 42 ಸಾಬೂನುಗಳ ಸಹಿತ 52 ಉತ್ಪನ್ನಗಳು ಸದ್ಯ ತಯಾರಾಗುತ್ತಿವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಒಟ್ಟು ಉತ್ಪನ್ನಗಳನ್ನು ಹೆಚ್ಚಿಸುವ ಜೊತೆಗೆ ಮಾರುಕಟ್ಟೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ರಫ್ತು ಪ್ರಮಾಣವನ್ನು ಹೆಚ್ಚಿಸುವ ಚಿಂತನೆಯಿದೆ. ಈ ಉದ್ದೇಶದಿಂದ ಎಚ್‌ಸಿಎಲ್‌ ಕಂಪನಿಯಲ್ಲಿ ಕೆಲಸ ಮಾಡಿದ್ದ ತಜ್ಞರ ತಾಂತ್ರಿಕ ಸಲಹೆ ಪಡೆಯಲಾಗಿದೆ. ಆ ಮೂಲಕ, ಮೈಸೂರು ಸ್ಯಾಂಡಲ್‌ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದರು.

ಮೈಸೂರು ಮಹಾರಾಜರು ಸ್ಥಾಪಿಸಿದ ಸ್ಯಾಂಡಲ್ ಸೋಪ್ ಕಾರ್ಖಾನೆ ನಮ್ಮ ಹೆಮ್ಮೆ. ಅದರ ಉತ್ಪನ್ನಗಳು ದೇಶ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತೇವೆ
ಎಂ.ಬಿ.ಪಾಟೀಲ ಕೈಗಾರಿಕಾ ಸಚಿವ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ

ಕಳ್ಳತನಕ್ಕೆ ತಡೆ; ಕಳ್ಳಾಟಕ್ಕೆ ಕತ್ತರಿ 

ಕಾರ್ಖಾನೆಯಲ್ಲಿ 480ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಕೆಲವರು ಪರಸ್ಪರ ‘ಹೊಂದಾಣಿಕೆ’ ಮಾಡಿಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳದೆ ನಿದ್ದೆ ಮಾಡುತ್ತಿದ್ದರು. ಈ ವಿಷಯವನ್ನು ವ್ಯಕ್ತಿಯೊಬ್ಬರು ಕರೆ ಮಾಡಿ ಸಚಿವ ಎಂ.ಬಿ. ಪಾಟೀಲರಿಗೆ ತಿಳಿಸಿದ್ದರು. ಸಚಿವರ ಸೂಚನೆಯಂತೆ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಅವರು ಮಧ್ಯರಾತ್ರಿ ಕಾರ್ಖಾನೆಗೆ ದಿಢೀರ್‌ ತೆರಳಿ ಪರಿಶೀಲಿಸಿದಾಗ ನಿದ್ದೆ ಮಾಡುತ್ತಿರುವುದನ್ನು ಕಂಡಿದ್ದರು. ಹೀಗಾಗಿ ಕೆಲವರನ್ನು ಅಮಾನತು ಮಾಡಲಾಗಿದೆ. ಆ ಮೂಲಕ ಕಾರ್ಮಿಕರಲ್ಲಿ ದಕ್ಷತೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಖಾನೆಯಿಂದ ಕೆಲವು ಸಾಮಗ್ರಿಗಳು ಕಳವು ಆಗಿವೆ. ವಸ್ತುಗಳು ಕಳವು ಆಗುವುದನ್ನು ತಡೆಯಲು ಕೂಡಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.