ADVERTISEMENT

KSPCB: ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ!

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಿಯಾಯೋಜನೆಗೆ ಅನುಮೋದನೆ

ಆರ್. ಮಂಜುನಾಥ್
Published 7 ಜನವರಿ 2024, 20:40 IST
Last Updated 7 ಜನವರಿ 2024, 20:40 IST
<div class="paragraphs"><p>ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ</p></div>

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

   

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಂಸ್ಥೆಯ ನಿರೀಕ್ಷಿತ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತದ ಕ್ರಿಯಾಯೋಜನೆಗೆ ಮಂಡಳಿ ಸಭೆ ಅನುಮೋದನೆ ನೀಡಿದೆ. 

ಮುಂದಿನ ಮೂರು ವರ್ಷಗಳಲ್ಲಿ ₹600 ಕೋಟಿ ಮಾತ್ರ ನಿರೀಕ್ಷಿತ ಆದಾಯವಾಗಿದ್ದರೂ,  ₹1,546.44 ಕೋಟಿಯ ಕ್ರಿಯಾಯೋಜನೆಗೆ 243ನೇ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 2023ರ ಆರ್ಥಿಕ ವರ್ಷದಲ್ಲಿ ಉಳಿಯಲಿರುವ  ₹1,050 ಕೋಟಿಯನ್ನು ಕೂಡಲೇ ವೆಚ್ಚ ಮಾಡುವ ಯೋಜನೆ ಇದಾಗಿದ್ದು, ಇದರಿಂದ ಮಂಡಳಿ ದಿವಾಳಿಯಾಗಲಿದೆ ಎಂಬ ಆರೋಪ ವ್ಯಕ್ತವಾಗಿದೆ.

ADVERTISEMENT

‘ಒಂದು ಸಾವಿರ ಕೋಟಿಯನ್ನು ಈಗಲೇ ತಮ್ಮಿಷ್ಟದಂತೆ ವೆಚ್ಚ ಮಾಡಿಕೊಳ್ಳಲು ಇಂತಹ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಂಡಳಿ ಸದಸ್ಯರೊಬ್ಬರು ದೂರಿದರು.

2023–24, 2024–25, 2025–26ನೇ ಸಾಲಿಗೆ ಪ್ರಯೋಗಾಲಯಗಳ ಅಭಿವೃದ್ಧಿ, ನೀರು ಗುಣಮಟ್ಟ ನಿರ್ವಹಣೆ ವ್ಯವಸ್ಥೆ, ಸಾಫ್ಟ್‌ವೇರ್ ಉನ್ನತೀಕರಣ ಸೇರಿದಂತೆ ಅರಿವು, ಜಾಗೃತಿ ಕಾರ್ಯಕ್ರಮಗಳಿಗೆ ಹಣ ವೆಚ್ಚ ಮಾಡಲು ಮಂಡಳಿ ಸಭೆ ಸಮ್ಮತಿಸಿದೆ.

ಅಧ್ಯಕ್ಷರ ಅನುಮೋದನೆ ಇಲ್ಲದೆ ಸದಸ್ಯ ಕಾರ್ಯದರ್ಶಿಗಳು ಸಭೆಗಳ ಕಾರ್ಯಸೂಚಿಯನ್ನು ಸದಸ್ಯರಿಗೆ ಕಳುಹಿಸುವುದು ಸರಿಯಲ್ಲ ಎಂಬ ಅಧ್ಯಕ್ಷ ಶಾಂತ್‌ ತಮ್ಮಯ್ಯ ಅವರ ಅಭಿಪ್ರಾಯವನ್ನು ವಿರೋಧಿಸಿರುವ ಮಂಡಳಿ ಸದಸ್ಯರು, ಕಾರ್ಯಸೂಚಿಯನ್ನು ಸದಸ್ಯ ಕಾರ್ಯದರ್ಶಿ ಅವರು ಸದಸ್ಯರಿಗೆ ಕಳುಹಿಸಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಮಂಡಳಿ ಸಭೆಯ ವಿಡಿಯೊ–ಆಡಿಯೊ ರೆಕಾರ್ಡಿಂಗ್‌ ಬೇಡ ಎಂಬ ಅಧ್ಯಕ್ಷರ ಮಾತನ್ನೂ ಬದಿಗಿರಿಸಿ, ರೆಕಾರ್ಡಿಂಗ್ ಮಾಡಿಕೊಳ್ಳಲು ಸದಸ್ಯರು ಒಮ್ಮತದಿಂದ ತೀರ್ಮಾನಿಸಿದರು.

ಮಂಡಳಿಯ 220 ಹುದ್ದೆಗಳ ಭರ್ತಿಗೆ ಸಭೆ ಅನುಮೋದನೆ ನೀಡಿದ್ದು, ಚಾಲಕ ಮತ್ತು ಕಾವಲುಗಾರ ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಭರ್ತಿ ಮಾಡಲು ಸರ್ಕಾರವನ್ನು ಕೋರಲು ನಿರ್ಣಯ ಮಾಡಲಾಗಿದೆ.

ರಾಜ್ಯಮಟ್ಟದ ಜಾರಿ ಸಮಿತಿಯನ್ನು ಪುನರ್‌ ರಚಿಸಿದ್ದು, ಸರ್ಕಾರದಿಂದ ನಾಮನಿರ್ದೇಶಿತಗೊಂಡ ಸದಸ್ಯರಿಗೂ ಸ್ಥಾನ ಕಲ್ಪಿಸಲಾಗಿದೆ.  ಕೆಟಿಪಿಪಿ ಕಾಯ್ದೆಯಂತೆ ಅಧ್ಯಕ್ಷ ಹಾಗೂ ಸದಸ್ಯ ಕಾರ್ಯದರ್ಶಿಯವರು ಅನುಮೋದಿಸುವ ಯೋಜನೆಗಳ ವೆಚ್ಚದ ಪ್ರಮಾಣವನ್ನು ಹೆಚ್ಚಿಸಲು ನಿರ್ಣಯಿಸಲಾಗಿದೆ. ₹50 ಲಕ್ಷವಿದ್ದ ಅಧ್ಯಕ್ಷರ ಅಧಿಕಾರವನ್ನು ₹5 ಕೋಟಿ ಹಾಗೂ ₹25 ಲಕ್ಷವಿದ್ದ ಸದಸ್ಯ ಕಾರ್ಯದರ್ಶಿ ಅಧಿಕಾರವನ್ನು ₹2 ಕೋಟಿಗೆ ವೃದ್ಧಿಸಲು ನಿಯಮಗಳಿಗೆ ತಿದ್ದುಪಡಿ ತರಲು ನಿರ್ಣಯಿಸಲಾಗಿದೆ.

ಬಿಬಿಎಂಪಿಯ ₹53 ಕೋಟಿ ದುಂದುವೆಚ್ಚ!

ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ‘ಪ್ರಾಣ’ ಪೋರ್ಟಲ್‌ ನಲ್ಲಿ ಆಯ್ಕೆ ಮಾಡಲಾಗಿದ್ದ 64 ಚಟುವಟಿಕೆಗಳ ‘ವಾಯು ಯೋಜನೆ’ಯ ಕ್ರಿಯಾಯೋಜನೆಯನ್ನು ಬದಲಿಸಿ, ಬಿಬಿಎಂಪಿ ನೀಡಿರುವ ₹53 ಕೋಟಿ ವೆಚ್ಚ ಮಾಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಣಯಿಸಿದೆ.

‘ವಾಯು ಮಾಲಿನ್ಯ ನಿಗಾವಹಿಸುವುದು, ರಸ್ತೆ ದೂಳಿನ ಅಧ್ಯಯನ, ಪ್ರಯೋಗಾಲಯಗಳ ಉನ್ನತೀಕರಣ, ವಾಹನಗಳ ವಾಯುಮಾಲಿನ್ಯದ ನಿಗಾವಹಿಸುವುದು ಸೇರಿದಂತೆ ಸರ್ವೆ, ಅಧ್ಯಯನ, ವರದಿ ಸಿದ್ಧಪಡಿಸಲೆಂದೇ15ನೇ ಹಣಕಾಸು ಯೋಜನೆಯಲ್ಲಿ ಬಿಬಿಎಂಪಿಗೆ ಮಂಜೂರಾಗಿರುವ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಮಂಡಳಿ ಸದಸ್ಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.