ADVERTISEMENT

ಮತ್ತೆ ₹ 634.50 ಕೋಟಿಗೆ ಕೈಯೊಡ್ಡಿದ ಸಾರಿಗೆ ಇಲಾಖೆ

ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಾರಿಗೆ ನಿಗಮಗಳು

ರಾಜೇಶ್ ರೈ ಚಟ್ಲ
Published 5 ನವೆಂಬರ್ 2020, 18:14 IST
Last Updated 5 ನವೆಂಬರ್ 2020, 18:14 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   
""

ಬೆಂಗಳೂರು: ಕೋವಿಡ್‌ ಕಾರಣದಿಂದ ರಾಜ್ಯ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ) ಸಂಕಷ್ಟದಲ್ಲಿದ್ದು, ಸಿಬ್ಬಂದಿಗೆ ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗಿನ ವೇತನ ಪಾವತಿಸಲು ₹ 634.50 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಪ್ರಸ್ತಾವನೆಯಲ್ಲಿ ನಾಲ್ಕೂ ನಿಗಮಗಳ ಸಿಬ್ಬಂದಿಯ ಮೂಲ ವೇತನ ಮತ್ತು ತುಟ್ಟಿಭತ್ಯೆಯ ವೆಚ್ಚದ ಪಾಲು ಸೇರಿ ವೇತನ ಪಾವತಿಗೆ ಶೇ 75ರಂತೆ ಅನು ದಾನ ಕೋರಲಾಗಿದೆ. ಈ ಲೆಕ್ಕಾಚಾರ ದಂತೆ ಪ್ರತಿ ತಿಂಗಳಿಗೆ ತಲಾ ₹ 211.50 ಕೋಟಿಯಂತೆ (ಒಟ್ಟು ₹ 634.50 ಕೋಟಿ) ಅಗತ್ಯವಿದೆ.

ಪ್ರಸಕ್ತ ಸಾಲಿನಲ್ಲಿ (2020–21) ಏಪ್ರಿಲ್ನಿಂದ ಸೆಪ್ಟೆಂಬರ್‌ವರೆಗೆ ನಿಗಮಗಳ ಸಿಬ್ಬಂದಿ ವೇತನ ಪಾವತಿಸಲು ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಈಗಾಗಲೇ ₹ 1,499.08 ಕೋಟಿ ವಿಶೇಷ ಅನುದಾನ ನೀಡಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟು 1.35 ಲಕ್ಷ ಸಿಬ್ಬಂದಿ ಇದ್ದಾರೆ.

ADVERTISEMENT

ಮುಂದಿನ ಮೂರು ತಿಂಗಳಲ್ಲಿ ನಿಗಮಗಳ ಕಾರ್ಯಾಚರಣೆಯಿಂದ ಸಂಗ್ರಹ ಆಗಬಹುದಾದ ಆದಾಯ, ಪಾವತಿ ಮಾಡಬೇಕಾದ ವೆಚ್ಚವನ್ನು ವಿಶ್ಲೇಷಿಸಿದಾಗ ₹ 861.31 ಕೋಟಿ ಕೊರತೆ ಉಂಟಾಗಬಹುದು ಎಂದೂ ಇಲಾಖೆಯ ಅಧಿ ಕಾರಿಗಳು ಅಂದಾಜಿಸಿದ್ದಾರೆ.

ನಗದು ಕೊರತೆ ನಿಭಾಯಿ ಸಲು ನಿಗಮಗಳಿಗೆ ಯಾವುದೇ ಇತರ ಅನುದಾನ ಅಥವಾ ಮಾರ್ಗಗಳು ಇಲ್ಲ. ನಿಗಮಗಳು ಈಗಾಗಲೇ ಕೋವಿಡ್‌ 19 ಅವಧಿಯಲ್ಲಿ ಸಂಗ್ರಹಿಸಿದ ಆದಾಯದಲ್ಲಿ ಆದ್ಯತೆಯ ಮೇರೆಗೆ ಸಿಬ್ಬಂದಿ ವೇತನ ಮತ್ತು ಇತರ ಅತ್ಯಾವಶ್ಯಕ ವೆಚ್ಚ ಗಳನ್ನು ಮಾತ್ರ ಪಾವತಿ ಮಾಡಿದೆ. ಇಂಧನ ಸರಬರಾಜು ವೆಚ್ಚ, ನಿವೃತ್ತ ನೌಕರ ರಿಗೆ ಉಪದಾನ, ಬಿಡಿಭಾಗಗಳ ಪೂರೈಕೆ ದಾರರ ಬಾಕಿ, ಭವಿಷ್ಯನಿಧಿ ಮಂಡಳಿಗೆ ಬಾಕಿ ಪಾವತಿ ಸೇರಿ ಒಟ್ಟು ₹ 2,234.92 ಕೋಟಿ ಪಾವತಿಸಲು ಬಾಕಿ ಇದೆ.

ಅಷ್ಟೇ ಅಲ್ಲ, ನಾಲ್ಕೂ ನಿಗಮಗಳು ವಿವಿಧ ಬಂಡವಾಳ ವೆಚ್ಚ ಹಾಗೂ ಇತರ ವೆಚ್ಚಗಳನ್ನು ನಿಭಾಯಿಸಲು ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲ ಪಡೆದಿವೆ. ಈ ಅವಧಿ ಸಾಲದ ಮೊತ್ತ 2020ರ ಸೆ.30ರ ವೇಳೆಗೆ ಒಟ್ಟು ₹ 1,569.33 ಕೋಟಿ ಬಾಕಿ ಇದೆ. ಹೀಗಾಗಿ, ಸಿಬ್ಬಂದಿ ವೇತನ ಪಾವತಿಗೆ ವಾಣಿಜ್ಯ ಬ್ಯಾಂಕುಗಳಿಂದ ಮತ್ತೆ ಹೊಸತಾಗಿ ಸಾಲ ಪಡೆಯುವ ಸಾಮರ್ಥ್ಯ ಇಲ್ಲ. ಸಾಲ ಮರುಪಾವತಿಸಲು ಮುಂದಿನ ದಿನಗಳಲ್ಲಿ ನಗದು ಕ್ರೋಡೀಕರಣವಾಗುವ ಸಾಧ್ಯತೆಯೂ ಇಲ್ಲ ಎಂದು ಪ್ರಸ್ತಾವನೆ ವಿವರಿಸಿದೆ.

ಕೋವಿಡ್‌ನಿಂದ ಸಾರಿಗೆ ನಿಗಮಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚ ರಣೆ ನಡೆಸಲು ಸಾಧ್ಯವಾಗದೆ ಆದಾಯ ಕೊರತೆಯಾಗಿದೆ. ಹೀಗಾಗಿ, ವೇತನ ಪಾವತಿ, ಇಂಧನ ವೆಚ್ಚ, ಕನಿಷ್ಠ ಮಟ್ಟದ ಬಿಡಿಭಾಗಗಳ ಖರೀದಿ, ಇತರ ಅತ್ಯಾವಶ್ಯಕ ವೆಚ್ಚಗಳನ್ನು ಭರಿಸಲು ಅವಶ್ಯವಿರುವ ಸಂಪನ್ಮೂಲ ಸಂಗ್ರಹ ಸಾಧ್ಯವಾಗಿಲ್ಲ.

* ಮುಂದಿನ 3 ತಿಂಗಳಲ್ಲಿ ₹ 861.31 ಕೋಟಿ ಕೊರತೆ ಅಂದಾಜು

* ಇಂಧನ, ಬಿಡಿಭಾಗ, ಭವಿಷ್ಯನಿಧಿ ಪಾವತಿ ಬಾಕಿ ₹ 2,234.92 ಕೋಟಿ

* ನಾಲ್ಕೂ ನಿಗಮಗಳ ಬ್ಯಾಂಕು ಸಾಲ ಬಾಕಿ ₹ 1,569.33 ಕೋಟಿ

ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜನಸಂಚಾರ ಕಡಿಮೆಯಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಿಬ್ಬಂದಿ ವೇತನವನ್ನು ಸರ್ಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.

- ಲಕ್ಷ್ಮಣ ಸವದಿ, ಸಾರಿಗೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.