ಬೆಂಗಳೂರು: ನಷ್ಟಕ್ಕೆ ಪ್ರಮುಖ ಕಾರಣ ವಾಗಿರುವ ವೋಲ್ವೊ ಹವಾನಿಯಂತ್ರಿತ ಬಸ್‌ಗಳ ನಿರ್ವಹಣೆ ಮಾಡುವುದರಿಂದ ಬಿಎಂಟಿಸಿಗೆ ಬಿಳಿಯಾನೆಗಳನ್ನು ಸಾಕಿದ ಅನುಭವವಾಗಿದೆ.
ಪ್ರತಿನಿತ್ಯ ನಷ್ಟವನ್ನೇ ತರುತ್ತಿರುವ 825 ಬಸ್‌ಗಳು ಪ್ರತಿ ಕಿ.ಮೀಗೆ₹ 20 ನಷ್ಟ ಹೊತ್ತು ತರುತ್ತಿವೆ. ಈ ಕಾರಣದಿಂದಾಗಿಯೇ ನಷ್ಟದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ಈ ಪೈಕಿ 600 ಬಸ್‌ಗಳನ್ನು ಪಕ್ಕದ ಮನೆಗೆ (ಕೆಎಸ್‌ಆರ್‌ಟಿಸಿ) ಸಾಗಿಸಿ ಕೈ ತೊಳೆದುಕೊಳ್ಳುವ ಪ್ರಯತ್ನಕ್ಕೆ ಇದೀಗ ಬಿಎಂಟಿಸಿ ಚಿಂತನೆ ನಡೆಸಿದೆ.
ಬಿಳಿಯಾನೆಗಳನ್ನು ಸಾಕಲು ಕೆಎಸ್‌ಆರ್‌ಟಿಸಿಯೂ ಮನಸ್ಸು ಮಾಡುತ್ತಿಲ್ಲ.ಮೈಸೂರಿನಲ್ಲಿ ಸದ್ಯ 30 ವೋಲ್ವೊ ಬಸ್‌ಗಳನ್ನು ನಗರ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಬಳಸುತ್ತಿದೆ. ಇವುಗಳ ಪ್ರತಿ ಕಿ.ಮೀ ಸಂಚಾರಕ್ಕೆ ₹ 55 ವೆಚ್ಚವಾಗುತ್ತಿದ್ದು, ಬರುತ್ತಿರುವ ಆದಾಯ ₹ 35 ಮಾತ್ರ. ಮೈಸೂರು ನಗರವೊಂದರಲ್ಲೇ ವರ್ಷಕ್ಕೆ ₹ 8 ಕೋಟಿಯಿಂದ ₹ 10 ಕೋಟಿ ನಷ್ಟವಾಗುತ್ತಿದೆ. 600 ಬಸ್‌ಗಳನ್ನು ಪಡೆದು ಏನು ಮಾಡುವುದು ಎಂಬುದು ಕೆಎಸ್ಆರ್‌ಟಿಸಿ ಅಧಿಕಾರಿಗಳ ಚಿಂತೆ.
ಇದನ್ನೂ ಓದಿ...ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ನುಂಗಣ್ಣರ ದರ್ಬಾರ್!
ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದಾಗ 2009ರಲ್ಲಿ ಟಾಟಾ ಮಾರ್ಕೋಪೋಲೊ ಬಸ್‌ಗಳ ಖರೀದಿ ಮಾಡಿತ್ತು. 98 ಬಸ್‌ಗಳ ಖರೀದಿಗೆ ₹ 30.37 ಕೋಟಿ ವೆಚ್ಚ ಮಾಡಲಾಯಿತು. ವಾಹನದ ಕಾರ್ಯಕ್ಷಮತೆ, ಪ್ರತಿ ಲೀಟರ್ ಡೀಸೆಲ್‌ಗೆ ನೀಡುತ್ತಿದ್ದ ಮೈಲೇಜ್, ದಟ್ಟ ಹೊಗೆಯಿಂದ ಆಗುತ್ತಿದ್ದ ಪರಿಸರ ಹಾನಿ ಸೇರಿದಂತೆ ಹಲವಾರು ದೋಷಗಳನ್ನು ಕಂಡು ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಇದರಿಂದ ಸಂಸ್ಥೆಗೆ ₹ 19.64 ಕೋಟಿ ನಷ್ಟವಾಯಿತು.
ಇನ್ನೊಂದೆಡೆ ಇಪಿಕೆಎಂ (ಪ್ರತಿ ಕಿ.ಮೀ. ಆದಾಯ) ಮತ್ತು ಸಿಪಿಕೆಎಂ (ಪ್ರತಿ ಕಿ.ಮೀ. ವೆಚ್ಚ) ನಡುವಿನ ಅಂತರ ಸರಿದೂಗಿಸಲು ಸಾಧ್ಯವಾಗಿಲ್ಲ. ಆದಾಯಕ್ಕಿಂತ ವೆಚ್ಚವನ್ನೇ ಹೊತ್ತು ಡಿಪೋಗೆ ಬರುವ ಬಸ್‌ಗಳು ಇವೆ. ಸೋರಿಕೆ ತಡೆಯಲು ಚೆಕ್ಕಿಂಗ್ ವ್ಯವಸ್ಥೆ ಇದೆ. 2018ರಲ್ಲಿ 29,889 ನಿರ್ವಾ ಹಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೂ, ಇಪಿಕೆಎಂ ಮತ್ತು ಸಿಪಿಕೆಎಂ ನಡುವಿನ ಅಂತರ ಕಡಿಮೆಯಾಗುತ್ತಿಲ್ಲ.
ಇಷ್ಟೆಲ್ಲಾ ಹೊಡೆತಗಳನ್ನತಿಂದಿದ್ದರೂ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಬಿಎಂಟಿಸಿ ಆಡಳಿತ ಮಂಡಳಿ ಆಲೋಚನೆ ನಡೆಸಿದೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯುವುದರಿಂದ ಹೊರೆ ಕಡಿಮೆಯಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಆದರೆ, ಬಸ್‌ಗಳನ್ನು ಖರೀದಿ ಮಾಡಲೇಬೇಕು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಈಗಲೂ ಪಟ್ಟು ಮುಂದುವರಿಸಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.