ADVERTISEMENT

ಸಾರಿಗೆ ನೌಕರರ ವೇತನ: ಶೇ 25ರಷ್ಟು ಸಹಾಯಧನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:30 IST
Last Updated 23 ಆಗಸ್ಟ್ 2021, 21:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರ ಜುಲೈ ತಿಂಗಳ ವೇತನಕ್ಕೆ ಶೇ 25ರಷ್ಟು ಸಹಾಯಧನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ವೇತನಕ್ಕೆ ಅಗತ್ಯ ಇರುವ ₹640.61 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ನಾಲ್ಕು ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಗಾಗಿ ಶೇ 25ರಷ್ಟು ಅಂದರೆ ₹61.82 ಕೋಟಿ ಮತ್ತು ಬಿಎಂಟಿಸಿಗೆ ಶೇ 50ರಷ್ಟು ಅಂದರೆ ₹49.31 ಕೋಟಿ ಸಹಾಯಧನ ಬಿಡುಗಡೆ ಮಾಡಿದೆ.

ಕೆಎಸ್‌ಆರ್‌ಟಿಸಿಗೆ ₹27.74 ಕೋಟಿ, ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ₹17.47 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ ₹15.61 ಕೋಟಿ ಬಿಡುಗಡೆ ಮಾಡಿದೆ. ಉಳಿದ ಮೊತ್ತವನ್ನು ನಿಗಮದ ವರಮಾನದಿಂದಲೇ ಭರಿಸಿಕೊಳ್ಳಲು ಸರ್ಕಾರ ತಿಳಿಸಿದೆ.

ADVERTISEMENT

ಮೊದಲಿಗೆ ಶೇ 75ರಷ್ಟು ಸಹಾಯಧನ ನೀಡುತ್ತಿದ್ದ ಸರ್ಕಾರ, ಬಳಿಕ ಶೇ 50ರಷ್ಟು ಅನುದಾನ ನೀಡಿತು. ಈಗ ಶೇ 25ರಷ್ಟು ಬಿಡುಗಡೆ ಮಾಡಿದೆ. ಡೀಸೆಲ್ ದರ ದುಬಾರಿ ಮತ್ತು ಪ್ರಯಾಣಿಕರ ಕೊರತೆಯಿಂದ ಬಸ್‌ಗಳ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ವೇತನಕ್ಕೆ ಉಳಿದ ವೆಚ್ಚ ಭರಿಸಲು ನಿಗಮಗಳು ತಿಣಕಾಡಬೇಕಾಗಿದೆ.

‘ಹೆಚ್ಚಿನ ಸಹಾಯಧನವನ್ನು ಸರ್ಕಾರದಿಂದ ಬಯಸಿದ್ದೆವು. ಸರ್ಕಾರದ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಶೇ 25ರಷ್ಟು ನೀಡಿದೆ. ನಿಗಮದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ನೌಕರರಿಗೆ ಒಂದೆರಡು ದಿನಗಳಲ್ಲಿ ನಿವ್ವಳ ವೇತನ ಪಾವತಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

‘ಕೋವಿಡ್‌ ಮುನ್ನ ಇದ್ದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಈಗ ಶೇ 50ರಷ್ಟು ಪ್ರಯಾಣಿಕರೂ ಬರುತ್ತಿಲ್ಲ. ಪ್ರತಿ ತಿಂಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಹಾಯಧನ ಕೋರುವ ಬದಲು ಮಾರ್ಚ್‌ ತನಕದ ಒಟ್ಟಾರೆ ಸಹಾಯಧನ ನೀಡಲು ಕೋರಿ ಮನವಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.