ADVERTISEMENT

ಸಂಚಾರಕ್ಕೆ ಸಿದ್ಧಗೊಂಡ ‘ಅಂಬಾರಿ ಉತ್ಸವ’ ಬಸ್‌ಗಳು

ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಬಸ್‌ಗಳನ್ನು ರಸ್ತೆಗಿಳಿಸಿದ ಕೆಎಸ್‌ಆರ್‌ಟಿಸಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:01 IST
Last Updated 21 ಫೆಬ್ರುವರಿ 2023, 22:01 IST
   

ಬೆಂಗಳೂರು: ದೂರದ ಪ್ರಯಾಣಗಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಐಷಾರಾಮಿ ‘ಅಂಬಾರಿ ಉತ್ಸವ’ ಬಸ್‌ಗಳನ್ನು ರಸ್ತೆಗಿಳಿಸಿದೆ.

ಆರಾಮಾಗಿ ಮಲಗುವ ಸೌಲಭ್ಯವಿರುವ 40 ಆಸನಗಳು (ಸ್ಲೀಪರ್‌), ಬೇಕೆನಿಸಿದಾಗ ಕುಳಿತುಕೊಳ್ಳಲು ‘ಹೆಡ್‌ ರೂಂ’, ಹೊರಗಿನ ದೃಶ್ಯ ಸವಿಯಲು ವಿಶಾಲವಾದ ‘ಪ್ಯಾನೊರಮಿಕ್‌’ ಕಿಟಕಿಗಳನ್ನು ಒಳಗೊಂಡಿದೆ. 50 ‘ವೋಲ್ವೊ 9600ಎಸ್‌’ ವಾಹನಗಳನ್ನು ಖರೀದಿಸಿದ್ದು, ಮೊದಲ ಹಂತದಲ್ಲಿ 15 ಬಸ್‌ಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು.

15 ಮೀಟರ್ ಉದ್ದವಿರುವ ಈ ಬಸ್‌ ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟ ಒಳಗೊಂಡ ‘ಸ್ಕ್ಯಾಂಡಿನೇವಿಯನ್’ ವಿನ್ಯಾಸದಲ್ಲಿ ರೂಪಗೊಂಡಿದೆ. ವಾಹನ ಚಲಿಸುವಾಗ ಗಾಳಿ ವೇಗವಾಗಿ ಹಾಯುವುದನ್ನು ನಿಯಂತ್ರಿಸಲು ಮುಂಭಾಗದಲ್ಲಿ ‘ಏರೋಡೈನಾಮಿಕ್‌’ ವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಇಂಧನದ ಉಳಿತಾಯವಾಗುತ್ತದೆ ಎಂದು ನಿಗಮ ಹೇಳಿದೆ.

ADVERTISEMENT

ಹೊಸ ಬಸ್‌ಗೆ ಹೆಸರು ಸೂಚಿಸಲು ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾರ್ವಜನಿಕರು ಸೂಚಿಸಿದ್ದ ಹೆಸರುಗಳಲ್ಲಿ ‘ಅಂಬಾರಿ ಉತ್ಸವ’ ಆಯ್ಕೆ ಮಾಡಿಕೊಂಡಿದ್ದು, ‘ಸಂಭ್ರಮದ ಪ್ರಯಾಣ’ ಎಂಬ ಟ್ಯಾಗ್‌ಲೈನ್‌ ನೀಡಿದೆ. ಆರಂಭದಲ್ಲಿ ಈ ಬಸ್‌ಗಳು ಬೆಂಗಳೂರಿನಿಂದ ಸಿಕಂದರಾಬಾದ್‌, ಹೈದರಾಬಾದ್‌, ಎರ್ನಾಕುಲಂ, ತಿರುವನಂತಪುರ, ತ್ರಿಶೂರ್, ಪಣಜಿ, ಮಂಗಳೂರು ಹಾಗೂ ಮಂಗಳೂರಿನಿಂದ ಪೂನಾಗೆ ಬಸ್‌ಗಳು ಸಂಚರಿಸಲಿವೆ.

ಕಂದಾಯ ಸಚಿವ ಆರ್‌. ಅಶೋಕ, ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.