ADVERTISEMENT

ಜೋಗ, ಸಿಗಂದೂರು, ಚಿತ್ರದುರ್ಗಕ್ಕೆ ಪ್ಯಾಕೇಜ್ ಪ್ರವಾಸ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:49 IST
Last Updated 28 ಜುಲೈ 2021, 19:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ವರಮಾನ ಹೆಚ್ಚಿಸಿಕೊಳ್ಳಲು ಮುಂದಾಗಿರುವಕೆಎಸ್‌ಆರ್‌ಟಿಸಿ ಹೊಸದಾಗಿ ಮೂರು ಪ್ಯಾಕೇಜ್ ಪ್ರವಾಸ ಆರಂಭಿಸಿದೆ. ಬೆಂಗಳೂರಿನಿಂದ ಜೋಗ ಜಲಪಾತ, ಬೆಂಗಳೂರು–ಸಿಗಂದೂರು– ಜೋಗ ಜಲಪಾತ ಮತ್ತು ಬೆಂಗಳೂರು–ಚಿತ್ರದುರ್ಗ–ವಾಣಿವಿಲಾಸ ಸಾಗರಕ್ಕೆ ಪ್ಯಾಕೇಜ್ ಪ್ರವಾಸ ಜು.30ರಿಂದ ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರಿನಿಂದ ಜೋಗ ಜಲಪಾತದ ಪ್ರವಾಸಕ್ಕೆ ಎ.ಸಿ ರಹಿತ ಸ್ಲೀಪರ್, ರಾಜಹಂಸ ಬಸ್‌ಗಳನ್ನು ನಿಯೋಜಿಸಲಾಗಿದೆ. ರಾತ್ರಿ ಬೆಂಗಳೂರಿನಿಂದ ಹೊರಟು ಸಾಗರದಲ್ಲಿ ವಿಶ್ರಾಂತಿ ಮತ್ತು ಉಪಾಹಾರ ಸೇವನೆ ಬಳಿಕ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ಜಲಪಾತ ವೀಕ್ಷಣೆ ಮಾಡಿಕೊಂಡು ರಾತ್ರಿ ಹೊರಟರೆ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ.

ಸ್ಲೀಪರ್‌ ಬಸ್‌ನಲ್ಲಿ ವಯಸ್ಕರಿಗೆ ₹2,200, ಮಕ್ಕಳಿಗೆ ₹2 ಸಾವಿರ, ರಾಜಹಂಸ ಬಸ್‌ನಲ್ಲಿ ವಯಸ್ಕರರಿಗೆ ₹2 ಸಾವಿರ ಮತ್ತು ಮಕ್ಕಳಿಗೆ ₹1,700 ದರ ನಿಗದಿ ಮಾಡಿದೆ.‌

ADVERTISEMENT

ಬೆಂಗಳೂರು-ಸಿಗಂದೂರು-ಜೋಗ ಜಲಪಾತ ಪ್ಯಾಕೇಜ್ ಪ್ರವಾಸದಲ್ಲಿ ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಸಾಗರದಲ್ಲಿ ಉಪಾಹಾರ ಸೇವಿಸಿ ಸಿಗಂದೂರು, ಜೋಗ ಜಲಪಾತ ವೀಕ್ಷಣೆ ಮಾಡಿ ಬೆಳಗಿನ ಜಾವ ಬೆಂಗಳೂರಿಗೆ ತಲುಪಬಹುದಾಗಿದೆ. ಐರಾವತ ಕ್ಲಬ್ ಕ್ಲಾಸ್‌ ಬಸ್‌ನಲ್ಲಿ ವಯಸ್ಕರರಿಗೆ ₹2,500 ಮತ್ತು ಮಕ್ಕಳಿಗೆ ₹2,300 ದರ ನಿಗದಿ ಮಾಡಿದೆ.

ಬೆಂಗಳೂರು-ಚಿತ್ರದುರ್ಗ-ವಾಣಿವಿಲಾಸ ಸಾಗರ ಪ್ಯಾಕೇಜ್ ಪ್ರವಾಸದಲ್ಲಿ ಬೆಳಿಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು ಚಿತ್ರದುರ್ಗದಲ್ಲಿ ಉಪಾಹಾರ ಸೇವನೆ ಬಳಿಕ ಚಿತ್ರದುರ್ಗದ ಕೋಟೆ ವೀಕ್ಷಣೆ, ಚಂದವಳ್ಳಿ ತೋಟ, ವಾಣಿವಿಲಾಸ ಸಾಗರ ಜಲಾಶಯ ವೀಕ್ಷಣೆ ಬಳಿಕ ಅಲ್ಲಿಂದ ಹೊರಟರೆ ರಾತ್ರಿ 9ರ ವೇಳೆಗೆ ಬೆಂಗಳೂರಿಗೆ ಬಸ್ ತಲುಪಲಿದೆ. ಕರ್ನಾಟಕ ಸಾರಿಗೆ, ರಾಜಹಂಸ, ಐರಾವತ ಕ್ಲಬ್ ಕ್ಲಾಸ್ ಬಸ್‌ಗಳಲ್ಲಿ ಪ್ರವಾಸ ಇರಲಿದ್ದು, ಪ್ರತ್ಯೇಕ ದರ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.