ಬೆಂಗಳೂರು: ಕ್ಯಾಲೆಂಡರ್ ವರ್ಷದ ಕೊನೆಯ ಹಬ್ಬವೆಂದೇ ಪರಿಗಣಿಸಲಾಗುವ ಕ್ರಿಸ್‌ಮಸ್ ಆಚರಣೆಗೆ ಈಗಾಗಲೇ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಹೊಸ ವಸ್ತುಗಳ ಭರಾಟೆ ಹೆಚ್ಚಿವೆ, ಊರಿಂದ ಊರಿಗೆ ಹೊರಡುವವರು ಬಸ್, ರೈಲು, ಫ್ಲೈಟ್‌ಗಳಿಗೆ ತರಾತುರಿಯ ಬುಕ್ಕಿಂಗ್ ನಡೆಸಿದ್ದಾರೆ. ರಾಜ್ಯದಿಂದ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.
ಮುಂದಿನ ಮಂಗಳವಾರ(ಡಿ.25) ಕ್ರಿಸ್‌ಮಸ್ ಇರುವುದರಿಂದ ಹಿಂದಿನ ಒಂದೆರಡು ದಿನ ಕೆಲಸಕ್ಕೆ ರಜೆ ಹಾಕಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳುವವರೂ ಹೆಚ್ಚು. ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರಯಾಣಿಕರ ಹೆಚ್ಚಳದಿಂದ ಉಂಟಾಗುವ ಒತ್ತಡ ನಿರ್ವಹಣೆ ಹಾಗೂ ಅನುಕೂಲಕಾರಿ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ 550 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ. ಡಿ.21(ಶುಕ್ರವಾರ) ಮತ್ತು ಡಿ.22(ಶನಿವಾರ) ನಗರದ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುತ್ತಿದೆ.
ರಾಜ್ಯ ಮತ್ತು ಹೊರರಾಜ್ಯದ ಹಲವು ಸ್ಥಳಗಳಿಂದ ಡಿ.25ರಂದು ಮತ್ತಷ್ಟು ವಿಶೇಷ ಬಸ್‌ಗಳು ಸಂಚರಿಸಲಿವೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ksrtc.in ಮೂಲಕ ಪ್ರಯಾಣಕ್ಕೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಜನರ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಮೇಲೆ ಶೇ 5ರಷ್ಟು ರಿಯಾಯಿತಿ ಹಾಗೂ ಹೋಗಿ ಬರುವ ಟಿಕೆಟ್‌ಗಳನ್ನು ಒಮ್ಮೆಗೆ ಬುಕ್ ಮಾಡಿದರೆ ಬರುವ ಪ್ರಯಾಣದ ಟಿಕೆಟ್ ಮೇಲೆ ಶೇ 10ರಷ್ಟು ರಿಯಾಯಿತಿ ಸಿಗಲಿದೆ.
ಎಲ್ಲಿಂದ ಎಲ್ಲಿಗೆ ವಿಶೇಷ ಬಸ್‌ಗಳು?
* ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ– ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ
* ಮೈಸೂರು ರಸ್ತೆ ಬಸ್ ನಿಲ್ದಾಣದಿಂದ– ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ
* ಶಾಂತಿನಗರದ ಬೆಂಗಳೂರು ಕೇಂದ್ರ ಘಟಕ 4 ಮತ್ತು 2ರ ಮುಂಭಾಗದಿಂದ– ಮದುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರ್, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶ, ತೆಲಂಗಾಣಕ್ಕೆ ತೆರಳುವ ಬಸ್‌ಗಳು
* ಶ್ರೀ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್(ರಾಜಾಜಿನಗರ), ಮಲ್ಲೇಶ್ವರಂ 18ನೇ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಬಸ್ ನಿಲ್ದಾಣಗಳಿಂದ– ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆಸುಬ್ರಮಣ್ಯ, ಧರ್ಮಸ್ಥಳ ಮುಂತಾದ ಕಡೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.