ADVERTISEMENT

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ

ರಾಜೇಶ್ ರೈ ಚಟ್ಲ
Published 13 ಅಕ್ಟೋಬರ್ 2024, 23:13 IST
Last Updated 13 ಅಕ್ಟೋಬರ್ 2024, 23:13 IST
ಎಂಜಿನಿಯರ್ ಒಬ್ಬರಿಗೆ ಕೆಐಒಸಿಎಲ್ ನೀಡಿರುವ ವಜಾ ನೋಟಿಸ್
ಎಂಜಿನಿಯರ್ ಒಬ್ಬರಿಗೆ ಕೆಐಒಸಿಎಲ್ ನೀಡಿರುವ ವಜಾ ನೋಟಿಸ್   

ಬೆಂಗಳೂರು: ಗಣಿಗಾರಿಕೆಗೆ ಜಮೀನು ಹಸ್ತಾಂತರ ವಿಚಾರದಲ್ಲಿ ಕೇಂದ್ರ– ರಾಜ್ಯ ಸರ್ಕಾರದ ನಡುವೆ ಸಂಘರ್ಷ ಮುಂದುವರಿದಿರುವ ಪರಿಣಾಮ, ಅದಿರು ಲಭ್ಯವಾಗದೆ ‘ಕುದುರೆಮುಖ ಕಬ್ಬಿಣ ಅದಿರು ಕಂಪನಿ’ (ಕೆಐಒಸಿಎಲ್‌) ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಇದರ ಪರಿಣಾಮವಾಗಿ 30 ಎಂಜಿನಿಯರ್‌ಗಳು ಸೇರಿದಂತೆ ವಿವಿಧ ವೃಂದಗಳ 300ಕ್ಕೂ ಹೆಚ್ಚು ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಕೆಐಒಸಿಎಲ್‌ ಕಂಪನಿಯು ಕಳೆದ ಆರು ತಿಂಗಳಿನಿಂದ ನಷ್ಟದ ಸುಳಿಗೆ ಸಿಲುಕಿದೆ. ಕೇಂದ್ರ ಸರ್ಕಾರದ ಮಾಲೀಕತ್ವದ ಈ ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಮಂಗಳೂರಿನ ಪಣಂಬೂರಿನಲ್ಲಿದೆ. ‘ನವೆಂಬರ್ 1ರಿಂದ ನಿಮ್ಮನ್ನು ವಜಾಗೊಳಿಸಲಾಗುವುದು’ ಎಂಬ ಒಕ್ಕಣೆಯುಳ್ಳ ನೋಟಿಸ್‌ ಅನ್ನು ಅಕ್ಟೋಬರ್ 1ರಂದು ಕಾರ್ಮಿಕರಿಗೆ ನೀಡಿದೆ. ಕಂಪನಿಯ ಸದ್ಯದ ಆರ್ಥಿಕ ಸ್ಥಿತಿ ಹಾಗೂ ದಿನದಿಂದ ದಿನಕ್ಕೆ ವಹಿವಾಟು ಕುಸಿತ ಆಗುತ್ತಿರುವುದನ್ನು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ADVERTISEMENT

‘ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್‌// ಪ್ರದೇಶದಲ್ಲಿ 401.57 ಹೆಕ್ಟೇರ್ ಅರಣ್ಯ ಜಮೀನಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೆಐಒಸಿಎಲ್‌ ಅರಣ್ಯ ತೀರುವಳಿ ಪಡೆದಿದೆ. ಆದರೆ, ಅರಣ್ಯ ಇಲಾಖೆಯಿಂದ ‘ಅರಣ್ಯ ತೀರುವಳಿ ಗುತ್ತಿಗೆ ಪತ್ರ’ವೂ ಸೇರಿದಂತೆ ಜಮೀನು ಹಸ್ತಾಂತರ ಬಾಕಿ ಇದೆ. ಕರ್ನಾಟಕ ಸರ್ಕಾರವು ಗಣಿಗಾರಿಕೆ ಪ್ರದೇಶದ ಹಸ್ತಾಂತರಕ್ಕೆ ಮಾಡುತ್ತಿರುವ ವಿಳಂಬ ಮತ್ತು ಸದ್ಯದ ಮಾರುಕಟ್ಟೆ ಪರಿಸ್ಥಿತಿಯ ಪರಿಣಾಮದಿಂದಾಗಿ ಕಂಪನಿಯು ಉತ್ಪಾದನಾ ಸಮಸ್ಯೆ ಎದುರಿಸುತ್ತಿದೆ. ಈ ಕಾರಣಕ್ಕೆ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಕೆಐಒಸಿಎಲ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುದುರೆಮುಖದಲ್ಲಿ ಗಣಿಗಾರಿಕೆ 2006ರಲ್ಲಿ ಸ್ಥಗಿತವಾದ ನಂತರ, ಪೆಲೆಟ್‌ಗಳನ್ನು (ಸಣ್ಣ ಗುಂಡುಗಳು) ಉತ್ಪಾದಿಸುವ ಪಣಂಬೂರಿನ ಕೆಐಒಸಿಎಲ್ ಘಟಕದಲ್ಲಿ ಸದ್ಯ 433 ಕಾಯಂ ಸಿಬ್ಬಂದಿ, 52 ಗುತ್ತಿಗೆ ಎಂಜಿನಿಯರ್‌ಗಳು, 400 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ನುರಿತ ಮತ್ತು ಅನುಭವಿ ಕೆಲಸಗಾರರನ್ನು ಕೆಐಒಸಿಎಲ್‌ ನಷ್ಟದ ಕಾರಣಕ್ಕೆ ವಜಾಗೊಳಿಸುವ ಕುರಿತು ಕಂಪನಿಯ ಕಾರ್ಮಿಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೆಪ್ಟೆಂಬರ್ 20ರಂದೇ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಉಲ್ಲೇಖಿಸಿ ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ, ಕೆಐಒಸಿಎಲ್‌ನಿಂದ ವರದಿ ಪಡೆಯುವಂತೆ ಅಕ್ಟೋಬರ್ 3ರಂದು ಸೂಚಿಸಿದ್ದಾರೆ. ಆದರೆ, ಕೆಐಒಸಿಎಲ್‌ ಇನ್ನೂ ವರದಿ ನೀಡಿಲ್ಲ ಎಂದು ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ಗೋಕುಲ್‌ ದಾಸ್ ನಾಯಕ್ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಕೆಐಒಸಿಎಲ್ ಕಾರ್ಯಾಚರಣೆಗೆ ಸಣ್ಣ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ. ಇದರಿಂದ ಆ ಸಂಸ್ಥೆ ಪ್ರತಿ ತಿಂಗಳು ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ –ಆರ್‌ಎನ್‌ಐಎಲ್‌ (ವೈಜಾಗ್ ಉಕ್ಕು ಕಾರ್ಖಾನೆ) 4,200 ಗುತ್ತಿಗೆ ಕಾರ್ಮಿಕರನ್ನು ಸೆಪ್ಟೆಂಬರ್ 27ರಂದು ಕೆಲಸದಿಂದ ವಜಾ ಮಾಡಿದ ಮಾಹಿತಿ ಸಿಕ್ಕಿದ ತಕ್ಷಣ ಮಧ್ಯಪ್ರವೇಶಿಸಿ, 48 ಗಂಟೆಗಳಲ್ಲಿ ಅವರನ್ನು ಮರು ನೇಮಕ ಮಾಡಿಸಿದ್ದೇನೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.  ಆದರೆ, ಇಲ್ಲಿನ ಸರ್ಕಾರ ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಹಣದ ಕೊರತೆ ಇಲ್ಲ. ರಾಜ್ಯ ಸರ್ಕಾರ ಸಹಕಾರ ಕೊಟ್ಟರೆ ಕೆಐಒಸಿಲ್‌ ಕಾರ್ಯಾಚರಣೆ ಮತ್ತೆ ಹಾದಿಗೆ ಮರಳಲಿದೆ. ಹಬ್ಬ ಮುಗಿಯುವವರೆಗೆ ಕಾರ್ಮಿಕರನ್ನು ಮುಂದುವರಿಸುವಂತೆ ಕಂಪನಿಗೆ ಸಲಹೆ ನೀಡಿದ್ದೇನೆ. ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಜೊತೆ ಕೆಐಒಸಿಎಲ್‌ ವಿಲೀನಗೊಳಿಸಿ ಜಂಟಿಯಾಗಿ ಕಾರ್ಯಾಚರಿಸುವಂತೆ ಮಾಡುವ ಪ್ರಸ್ತಾವವನ್ನೂ ಸಿದ್ಧಪಡಿಸುತ್ತಿದ್ದೇನೆ. ಕಂಪನಿ ಉಳಿಸುವ ಜೊತೆಗೆ ಕಾರ್ಮಿಕರ ಹಿತ ಕಾಪಾಡುವುದು ಮುಖ್ಯ’ ಎಂದರು.

ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜ್ಯದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ‘ಕೆಐಒಸಿಎಲ್ ಪ್ರಸ್ತಾಪಿತ ದೇವದಾರಿ ಪ್ರದೇಶದ ಗಣಿಗಾರಿಕೆಗೆ ಅನುಮತಿಯನ್ನು ರಾಜ್ಯ ಸರ್ಕಾರ ನಿರಾಕರಿಸಿಲ್ಲ. ಈ ಹಿಂದೆ ಈ ಕಂಪನಿಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಪರಿಸರಕ್ಕೆ ಉಂಟು ಮಾಡಿರುವ ಹಾನಿಗೆ ಸಂಬಂಧಿಸಿದಂತೆ ಕೇಂದ್ರದ ಉನ್ನತ ಅಧಿಕಾರ ಸಮಿತಿ (ಸಿಇಸಿ) ನಿರ್ದೇಶನಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ಹದಿಮೂರನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಮೂರನೇ ವರದಿಯಲ್ಲೂ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ’ ಎಂದರು.

ದೇವದಾರಿ ಗಣಿಗಾರಿಕೆ ಪ್ರದೇಶದ ಹಸ್ತಾಂತರಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿದೆ. ಪರಿಣಾಮ ಕಾರ್ಯಾಚರಣೆ ಇಲ್ಲದೆ ಕೆಐಒಸಿಎಲ್ ಪ್ರತಿ ತಿಂಗಳು ₹27 ಕೋಟಿ ನಷ್ಟ ಅನುಭವಿಸುತ್ತಿದೆ
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ
ರಾಜ್ಯದ ಅಮೂಲ್ಯ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ. 300 ಕಾರ್ಮಿಕರ ಹಿತ ಕಾಯುವುದು ಉದ್ದೇಶ ಆಗಿದ್ದರೆ ಕೆಐಒಸಿಎಲ್ ಕೇಂದ್ರದ ಉನ್ನತ ಅಧಿಕಾರ ಸಮಿತಿಯ ವರದಿಯನ್ನು ತಕ್ಷಣ ಪಾಲನೆ ಮಾಡಲಿ
ಈಶ್ವರ ಬಿ. ಖಂಡ್ರೆ, ರಾಜ್ಯ ಅರಣ್ಯ ಸಚಿವ

ರಾಜ್ಯ ಸರ್ಕಾರ ಅಡ್ಡಗಾಲು– ಎಚ್‌ಡಿಕೆ

‘ನಾನು ಕೇಂದ್ರ ಸಚಿವನಾದ ಬಳಿಕ ಕೆಐಒಸಿಎಲ್‌ಗೆ ದುಡಿಮೆಯ ಬಂಡವಾಳವಾಗಿ ₹1700 ಕೋಟಿಯ ಕಡತಕ್ಕೆ ಸಹಿ ಹಾಕಿದ್ದೇನೆ. ಆರ್ಥಿಕ ಇಲಾಖೆಯಿಂದಲೂ ಈ ಕಡತ ವಿಲೇವಾರಿ ಆಗಿದೆ. ಆದರೆ ಸಂಡೂರಿನ ದೇವದಾರಿ ಅರಣ್ಯದಲ್ಲಿ ಕಂಪನಿ ಅದಿರು ತೆಗೆಯುವ ಕೆಲಸ ಆರಂಭಿಸಲು ರಾಜ್ಯ ಸರ್ಕಾರ ಅಸಹಕಾರ ತೋರಿಸುತ್ತಿದೆ. ಈ ಪ್ರದೇಶದಲ್ಲಿ ಕಂಪನಿಗೆ ಗಣಿ ಮಂಜೂರು ಮಾಡಿ ಅದನ್ನು ₹500 ಕೋಟಿ ಕಟ್ಟಿಸಿಕೊಂಡು ನೋಂದಣಿ ಮಾಡಿಕೊಟ್ಟಿದ್ದು 2016ರಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಗಣಿಗಾರಿಕೆ ಸ್ಥಳದಲ್ಲಿ ಗಿಡ ಬೆಳೆಸಲು ಅರಣ್ಯ ಇಲಾಖೆಗೆ ಕಂಪನಿ ಈಗಾಗಲೇ ₹190 ಕೋಟಿ ಪಾವತಿಸಿದೆ. ಆದರೆ ನನ್ನ ಗಮನಕ್ಕೆ ಬಾರದೆ ಅನುಮತಿ ನೀಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ’ ಎಂದು ಎಚ್.ಡಿ. ಕುಮಾರಸ್ವಾಮಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.