ADVERTISEMENT

ಎಫ್‌ಐಆರ್ ಇದ್ದರೂ ಸಿ.ಎಂ ಆದರು: ರಾಜ್ಯದಲ್ಲಿ ಎರಡು ನಿದರ್ಶನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 1:04 IST
Last Updated 28 ಸೆಪ್ಟೆಂಬರ್ 2024, 1:04 IST
   

ಬೆಂಗಳೂರು: ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕೈಗೊಂಡ ನಿರ್ಧಾರಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದರೂ, ಇಬ್ಬರು ನಾಯಕರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿದರ್ಶನಗಳೂ ರಾಜ್ಯದಲ್ಲಿವೆ. 

ಬಿ.ಎಸ್‌.ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಲೋಕಾಯುಕ್ತ ನ್ಯಾಯಾಲಯವು ಗಣಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ 2011ರ ಅಕ್ಟೋಬರ್‌ 11ರಂದು ಜೈಲಿಗೆ ಕಳುಹಿಸಿತ್ತು. ನ್ಯಾಯಾಲಯವು ಬಂಧನ ವಾರಂಟ್‌ ಹೊರಡಿಸಿದ್ದ ಕಾರಣ, ಯಡಿಯೂರಪ್ಪ ನ್ಯಾಯಾಲಯಕ್ಕೆ ಶರಣಾಗಿದ್ದರು. ಅಲ್ಲಿ ಅವರನ್ನು ಬಂಧಿಸಿ, ಅಕ್ಟೋಬರ್ 22ರವರೆಗೆ ಜೈಲಿಗೆ ಕಳುಹಿಸಲಾಗಿತ್ತು.

ADVERTISEMENT

ತಮ್ಮ ಮಕ್ಕಳ ಒಡೆತನದ ‘ಪ್ರೇರಣಾ ಎಜುಕೇಷನಲ್‌ ಆ್ಯಂಡ್‌ ಸೋಷಿಯಲ್‌ ಟ್ರಸ್ಟ್‌’ಗೆ, ಜೆಎಸ್‌ಡಬ್ಲ್ಯು ಕಂಪನಿಯ ಅಂಗ ಸಂಸ್ಥೆ ಎಸ್‌ಡಬ್ಲ್ಯುಎಂಎಸ್‌ನಿಂದ ₹10 ಕೋಟಿ ಲಂಚವನ್ನು ಚೆಕ್‌ ಮೂಲಕ ಪಡೆದ ಮತ್ತು ಗಣಿ ಭೂಮಿ ಅಕ್ರಮವಾಗಿ ಮಂಜೂರು ಮಾಡಿದ ಆರೋಪದಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ 2012ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಕ್ರಮ ಟೆಂಡರ್‌ಗೆ ಸಂಬಂಧಿಸಿ 2022ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮತ್ತೊಂದು ಪ್ರಕರಣವೂ ಇದೆ.

ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದರೂ 2019ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಎಚ್.ಡಿ.ಕುಮಾರಸ್ವಾಮಿ

ಎಚ್‌.ಡಿ.ಕುಮಾರಸ್ವಾಮಿ ಅವರು ಗಂಗೇನಹಳ್ಳಿಯಲ್ಲಿ 1 ಎಕರೆ, 11 ಗುಂಟೆ ಜಮೀನನ್ನು ಡಿನೋಟಿಫೈ ಮಾಡಿದ ಮತ್ತು ಅದನ್ನು ಅವರ ಭಾವಮೈದುನ ಖರೀದಿಸಿದ ಆರೋಪದಲ್ಲಿ 2015ರಲ್ಲಿ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಸಲು ಹೈಕೋರ್ಟ್‌ ಆದೇಶಿಸಿದ್ದು, ತನಿಖೆ ಪ್ರಗತಿಯಲ್ಲಿದೆ. 

ನೋಂದಣಿಯೇ ಆಗದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಬಳ್ಳಾರಿಯಲ್ಲಿ 550 ಎಕರೆ ಗಣಿ ಭೂಮಿ ಮಂಜೂರು ಮತ್ತು ಜಂತಕಲ್‌ ಮೈನಿಂಗ್‌ ಕಂಪನಿಗೆ ಗಣಿ ಮಂಜೂರು ಮಾಡಲು ₹150 ಕೋಟಿ ಲಂಚ ಪಡೆದ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ 2017ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆ ಪ್ರಕಾರ ಎಫ್‌ಐಆರ್ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಇದರ ಮಧ್ಯೆಯೂ 2018ರ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವಲ್ಲದೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಇನ್ನೂ ಮೂರು ಪ್ರಕರಣಗಳನ್ನು ಕುಮಾರಸ್ವಾಮಿ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.