ADVERTISEMENT

ವಿಶ್ವಾಸಮತ ನಿರ್ಣಯದ ಪರ 99, ವಿರುದ್ಧ 105: ಉರುಳಿತು ಮೈತ್ರಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 14:57 IST
Last Updated 23 ಜುಲೈ 2019, 14:57 IST
   

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಬೃಹನ್ನಾಟಕಕ್ಕೆಕೊನೆಗೂ ತೆರೆಬಿದ್ದಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯಕ್ಕೆ ಸೋಲಾಗಿ,ಮೈತ್ರಿ ಸರ್ಕಾರ ಉರುಳಿತು. ಈ ಮೂಲಕ 14 ತಿಂಗಳುಗಳಿಂದ ಅಧಿಕಾರದಲ್ಲಿದ್ದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಆಡಳಿತ ಕೊನೆಗೊಂಡಂತೆ ಆಗಿದೆ.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯವನ್ನು ಮಂಗಳವಾರ ಮತಕ್ಕೆ ಹಾಕಲಾಯಿತು.ಮತ ವಿಭಜನೆಗೂ ಮೊದಲು, ನಿಯಮದಂತೆಧ್ವನಿ ಮತಯಾಚಿಸಲಾಯಿತು.ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರ ವಿನಂತಿ ಮೇರೆಗೆವಿಧಾನಸಭಾಧ್ಯಕ್ಷರುಮತ ಗಣನೆಗೆ ಮುಂದಾದರು. ಸಂಜೆ 7.20ಗೆ ಡಿವಿಷನ್‌ ಬೆಲ್‌ ಮೊಳಗಿತು.

ADVERTISEMENT

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಶಾಸಕರುಕುಳಿತಿದ್ದಪ್ರತಿ ಸಾಲುಗಳಿಗೆ ತೆರಳಿದ ಸದನದ ಅಧಿಕಾರಿಗಳುಸದಸ್ಯರ ನಿರ್ಣಯ ಎಣಿಕೆಮಾಡಿ, ಲೆಕ್ಕಹಾಕಿದರು.ಆಡಳಿತ ಪಕ್ಷದ ಪರ 99 ಹಾಗೂ ಪ್ರತಿಪಕ್ಷದ ಪರ 105 ಮತಗಳು ಚಲಾವಣೆಯಾಗಿದ್ದವು.20 ಶಾಸಕರು ಗೈರಾಗಿದ್ದರು. ಸ್ಪೀಕರ್ ತಮ್ಮ ಮತ ಚಲಾಯಿಸಲಿಲ್ಲ.ಸರ್ಕಾರ ರಚಿಸಲು ಒಟ್ಟು 103 ಸ್ಥಾನಗಳು ಅಗತ್ಯವಿದ್ದಿದ್ದರಿಂದ ಮೈತ್ರಿ ಸರ್ಕಾರ ಪತನವಾಯಿತು.

ಜುಲೈ 12ರಂದು ವಿಧಾನಸಭೆ ಕಲಾಪ ಪ್ರಾರಂಭವಾಗಿದ್ದು, ಆಗಿನಿಂದಲೂ ಬಿಜೆಪಿ ಶಾಸಕರು ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸಬೇಕು ಎಂದು ಪಟ್ಟು ಹಿಡಿದಿತ್ತು. ಸಂಖ್ಯಾ ಬಲ ಇಲ್ಲದಿದ್ದರೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗಾದಿಗೆ ಅಂಟಿಕೊಂಡು ಕೂತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಟೀಕಿಸಿದ್ದರು.

ಜುಲೈ 18ರ ಗುರುವಾರವಿಶ್ವಾಸಮತ ಯಾಚಿಸುವುದಾಗಿ ಕುಮಾರಸ್ವಾಮಿ ಸದನದಲ್ಲಿ ತಿಳಿಸಿದ್ದರು. ಜೊತೆಗೆ ಅಂದೇ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಆದೇಶಿಸಿದ್ದರು.ಆದರೆ, ಎಲ್ಲಾ ಶಾಸಕರು ಮಾತನಾಡಬೇಕು ಎಂದು ಒತ್ತಾಯಿಸಿದ್ದರಿಂದ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸಮಯಾವಕಾಶ ನೀಡಿದರು.ಇದನ್ನು ವಿರೋಧಿಸಿದ ಬಿಜೆಪಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ಶುಕ್ರವಾರ ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು ಮತ್ತೊಂದು ಗಡುವು ನೀಡಿದರೂ. ಅದೂ ಸಹ ನಡೆಯಲಿಲ್ಲ. ಕೊನೆಗೆ ಸೋಮವಾರ ಮತಕ್ಕೆ ಹಾಕಬೇಕು ಎಂದು ಸ್ಪೀಕರ್‌ ರಮೇಶ್‌ಕುಮಾರ್‌ ಅವರೇ ಸೂಚಿಸಿದರು. ಎಲ್ಲಾ ಶಾಸಕರು ಮಾತು ಮುಗಿಯದಿದ್ದರಿಂದ ಮಂಗಳವಾರಕ್ಕೆ ಸದನ ಮುಂದೂಡಿಕೆಯಾಯಿತು.

ಮಂಗಳವಾರ ಖಂಡಿತಾ ಮತಯಾಚನೆ ಮಾಡುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದರು.‘ನಾಡಿನ ಜನತೆ ನಮ್ಮನ್ನು ಕ್ಷಮಿಸಲಾರರು. ಕುಮಾರಸ್ವಾಮಿ ಕುರ್ಚಿಗೆ ಅಂಟಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಅನೇಕ ಜನ ಅಂದುಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸಂಜೆ 5.25ಕ್ಕೆ ಭಾಷಣ ಆರಂಭಿಸಿದರು.

‘ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಇವತ್ತು ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತಿದ್ದೇನೆ. ಯಾವುದೂ ಬೇಕಾಗಿಲ್ಲ ನನಗೆ’ ಎನ್ನುವ ಮುಖ್ಯಮಂತ್ರಿಯ ಸದನದಲ್ಲಿಯಮಾತುಗಳು ಪರೋಕ್ಷವಾಗಿ ರಾಜೀನಾಮೆಯನ್ನೇ ಸಂಕೇತಿಸುತ್ತಿದ್ದವು.

ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾಗುತ್ತಿದ್ದಂತೆ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಟ್ವೀಟ್‌ ಮಾಡಿದರು

ವಿಶ್ವಾಸಮತಯಾಚನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ 'ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಅತಿದೊಡ್ಡ ಗೆಲುವು. ಕುಮಾರಸ್ವಾಮಿ ಸರ್ಕಾರದಿಂದ ಜನ ಬೇಸರಗೊಂಡಿದ್ದರು.ನಾಳೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಶರುವಾಗಲಿದೆ. ರೈತರಿಗೆ ಹೆಚ್ಚು ಮಹತ್ವ ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ’ಎಂದು ಹೇಳಿದರು.

ಬಹುಮತ ಸಾಬೀತು ಪಡಿಸುವಲ್ಲಿ ಮೈತ್ರಿ ಸರ್ಕಾರ ವಿಫಲವಾದ ನಂತರಕಾಂಗ್ರೆಸ್‌ ಕರ್ನಾಟಕ ಘಟಕ ಟ್ವೀಟ್‌ ಮಾಡಿದೆ.

ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.