ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ಎರಡನೇ ಕಂತು ನೆರೆ ಪರಿಹಾರ ಬರುವುದಿಲ್ಲ ಎಂದು ಹೇಳಲು ಎಚ್.ಡಿ.ಕುಮಾರಸ್ವಾಮಿ ಏನು ಪ್ರಧಾನಿಯೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಅವರು ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ಮತ್ತೊಂದು ಕಂತಿನ ನೆರೆ ಪರಿಹಾರ ಬರುವುದಿಲ್ಲ' ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರಲ್ಲಿ ಅತೃಪ್ತಿ ಕಾಡುತ್ತಿದೆ. ಅಸಮಾಧಾನ ಹಾಗೂ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ನೆರೆ ಪರಿಹಾರವನ್ನು ಮತ್ತೊಂದು ಕಂತಿನಲ್ಲಿ ನೀಡುವುದಾಗಿ ಕೇಂದ್ರ ಸರ್ಕಾರವೇ ಹೇಳಿದೆ. ಪರಿಹಾರ ಹಣದ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆಯೇ ಹೊರತು ಕುಮಾರಸ್ವಾಮಿ ಅಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ಅವರು ನೀಡಬಾರದು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ₹ 1,200 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಬೆಳೆ ನಷ್ಟ ಅಂದಾಜು ಮಾಡಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ರೈತರಿಗೆ ಮತ್ತೊಂದು ಕಂತಿನಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ಮೂರು ದಿನ ಅಧಿವೇಶನ
ಅ.10 ರಿಂದ 12ರ ವರೆಗೆ ವಿಧಾನಮಂಡಲದ ಅಧಿವೇಶನ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅ. 8 ರಂದು ನಡೆಯುವ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ. ಬಳಿಕ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಅತಿವೃಷ್ಟಿ ಕಾರಣಕ್ಕೆ ಬೆಳಗಾವಿ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪತ್ರ ಬರೆದಿದ್ದರು. ಹೀಗಾಗಿ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ಕ್ಯಾಬಿನೆಟ್ ತೀರ್ಮಾನಿಸಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.