ಕಲಬುರಗಿ: 'ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ, ಅಲ್ಲಿನ ಬಿಜೆಪಿ ನಾಯಕರ ಕಾಲು ಬಿದ್ದಿದ್ದಾರೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
'ಇಂಡಿಯಾ' ಒಕ್ಕೂಟ ಖುಷಿ ಪಡಿಸಲು ತಮಿಳುನಾಡಿಗೆ ನೀರಿ ಹರಿಸಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಚಿಂಚೋಳಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, 'ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ವರಿಷ್ಠ ಜೆ.ಪಿ ನಡ್ಡಾ ಅವರನ್ನು ಹಾಗೂ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬರೀ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆಯೋ ಅಥವಾ ಕರ್ನಾಟಕದ ಜನತೆಯ ಬಗ್ಗೆಯೂ ಮಾತುಕತೆ ನಡೆಸಿದ್ದಾರಾ?' ಎಂದು ಪ್ರಶ್ನಿಸಿದರು.
'ದೆಹಲಿಗೆ ಹೋಗಿ 2ರಿಂದ 3 ದಿನ ಕಾದು ಕುಳಿತರೂ ಕೇಂದ್ರದ ಸಚಿವರು ಭೇಟಿಗೆ ಸಿಗುತ್ತಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಏಕಪಾತ್ರ ಅಭಿನಯ ಕಾಣಿಸುತ್ತಿದ್ದು, ಎಲ್ಲ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಬೇರೆ ಸಚಿವರ ಹೆಸರು ಸಹ ಗೊತ್ತಿಲ್ಲ. ಕೆಲಸ ಇಲ್ಲದೆ ಬಾಗಿಲು ಹಾಕಿಕೊಂಡು ಸುಮ್ಮನೆ ಕುಳಿತಿರುವ ಕೇಂದ್ರ ಸಚಿವರ ಮನೆಯ ಮುಂದೆ ಎಷ್ಟು ದಿನ ಕಾಯುವುದು' ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.