ತ್ರಿವೇಣಿ ಸಂಗಮ (ಮಂಡ್ಯ ಜಿಲ್ಲೆ): ‘ಕಾವೇರಿ– ಹೇಮಾವತಿ– ಲಕ್ಷ್ಮಣತೀರ್ಥ ನದಿಗಳು ಕೂಡುವ ತ್ರಿವೇಣಿ ಸಂಗಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಸರ್ಕಾರದ ವತಿಯಿಂದ ಕುಂಭಮೇಳ ಆಚರಿಸಲು ಶೀಘ್ರ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಭಾನುವಾರ ನಡೆದ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಂಗಮ ಸ್ಥಳವನ್ನು ತೀರ್ಥಕ್ಷೇತ್ರವನ್ನಾಗಿ ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲು ವಿಶೇಷ ಯೋಜನೆ ರೂಪಿಸಲಾಗುವುದು. ನದಿ ತೀರದಲ್ಲಿ ಸ್ನಾನಘಟ್ಟ ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಶೀಘ್ರ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ತಿಂಗಳೊಳಗೆ ಪರಿಹಾರ: ‘ರಾಜ್ಯದಾದ್ಯಂತ ಮಳೆ ಮುಂದುವರಿದಿರುವ ಕಾರಣ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸೆಪ್ಟೆಂಬರ್‌ಗೆ ಮುಗಿಯಬೇಕಾಗಿದ್ದ ಮುಂಗಾರು ಮಳೆ ಅಕ್ಟೋಬರ್ ಬಂದರೂ ಮುಗಿದಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳು ಹಾನಿಯಾಗಿವೆ, ಮನೆಗಳು ಕುಸಿದು ಬಿದ್ದಿವೆ, ರಸ್ತೆ, ಸೇತುವೆಗಳಿಗೆ ತೀವ್ರ ಹಾನಿಯುಂಟಾಗಿದೆ’ ಎಂದರು.
‘ಮೊದಲಿನ ಹಾಗೆ ಬೆಳೆ ನಷ್ಟ ಪರಿಹಾರ ಬರಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ತಿಂಗಳೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಜಮೆ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕುಸಿದು ಬಿದ್ದ ಮನೆಗಳಿಗೆ ನಮ್ಮ ಬಿಜೆಪಿ ಸರ್ಕಾರ ಪರಿಹಾರ ನೀಡುತ್ತಿದೆ. ಕೇಂದ್ರ ಸರ್ಕಾರಕ್ಕಿಂತ ಹೆಚ್ಚು ಹಣವನ್ನು ಪರಿಹಾರ ರೂಪದಲ್ಲಿ ರಾಜ್ಯ ಸರ್ಕಾರ ನೀಡುತ್ತಿದೆ’ ಎಂದರು.
‘ಮಳೆಹಾನಿಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಹಾಗೂ ಶಾಶ್ವತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಲಾಗಿದ್ದು ಮೂಲಭೂತ ಸೌಲಭ್ಯ ಒದಗಿಸಲು ₹ 600 ಕೋಟಿ ಬಿಡುಗಡೆ ಮಾಡಲಾಗಿದೆ. ಸೋಮವಾರ (ಅ.17) ಮತ್ತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆ ಸಭೆ ನಡೆಸಿ ಮಳೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ತೀರ್ಥ ಪೋಕ್ಷಣೆ: ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದ ಮುಖ್ಯಮಂತ್ರಿಗಳು ತೀರ್ಥ ಪ್ರೋಕ್ಷಣೆ ಮಾಡಿಕೊಂಡರು. ನಾಡಿನ ವಿವಿಧೆಡೆಯಿಂದ ಬಂದಿದ್ದ ಸ್ವಾಮೀಜಿಗಳೊಂದಿಗೆ ನದಿ ತಟದಲ್ಲಿ ನೂತನವಾಗಿ ನಿರ್ಮಿಸಿರುವ ಮಲೈ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.