ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಸಮೀಪಿಸುತ್ತಿರುವಂತೆಯೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ವಾಗ್ಯುದ್ಧವೂ ಜೋರಾಗಿದೆ.
ಕಾಂಗ್ರೆಸ್ ಸೇರಲು ಬಿಜೆಪಿಯ ಶಾಸಕರು ಉತ್ಸುಕರಾಗಿದ್ದಾರೆ. ಪಕ್ಷ ಸೇರುವವರಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದಿರುವ ಸಚಿವ ಡಿ.ಕೆ. ಶಿವಕುಮಾರ್, ಉಪ ಚುನಾವಣೆಯ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎನ್ನುತ್ತಿರುವ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ. ಕೆಲವು ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.
ಬಿಜೆಪಿ– ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಬಳಗದವರು ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯಾಗುತ್ತದೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮತ್ತಷ್ಟು ಬಲಿಷ್ಠವಾಗುವ ಮೂಲಕ ರಾಜಕೀಯ ಬದಲಾವಣೆಯಾಗುತ್ತದೆ ಎಂದು ಭವಿಷ್ಯ ನುಡಿದರು.
ಬಿಳಿ ಬಟ್ಟೆ ಹಾಕಿಕೊಂಡು ಬರುವವರನ್ನು ಲೀಡರ್ ಎಂದು ಒಪ್ಪಿಕೊಳ್ಳುವುದಿಲ್ಲ. ಯಾರು ತಮ್ಮ ವ್ಯಾಪ್ತಿಯ ಬೂತ್‌ನಲ್ಲಿ ಪಕ್ಷಕ್ಕೆ ಹೆಚ್ಚಿನ ಮತ (ಲೀಡ್) ಕೊಡಿಸುತ್ತಾರೋ ಅವರೇ ನಿಜವಾದ ಲೀಡರ್ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಹುಬ್ಬಳ್ಳಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಗದೀಶ ಶೆಟ್ಟರ್, ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ತಮಗೆ ಮತ ಹಾಕುವಂತೆ ಲಿಂಗಾಯತರನ್ನು ಒತ್ತಾಯಿಸಿದ್ದರು. ಆದರೆ, ಈಗ ಕುಂದಗೋಳದಲ್ಲಿ ಸಹ ಅನ್ಯ ಪಕ್ಷಗಳಿಂದ ಲಿಂಗಾಯತ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗ ಯಾರ ಪರ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.
ದಾಖಲೆ ಇಲ್ಲದ ₹30 ಲಕ್ಷ ಜಪ್ತಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 30 ಲಕ್ಷವನ್ನು ಹುಬ್ಬಳ್ಳಿ ಹೊರ ವಲಯದ ಅಗಡಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಒಟ್ಟು ₹42 ಲಕ್ಷ ಹಣವನ್ನು ಸೋಮವಾರ ವಶಪಡಿಸಿಕೊಳ್ಳಲಾಯಿತು. ಹಣ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ್ದು ಎಂದು ಹೇಳಿದ ಸಿಬ್ಬಂದಿ ₹12 ಲಕ್ಷಕ್ಕೆ ಸ್ಥಳದಲ್ಲೇ ದಾಖಲೆ ತೋರಿಸಿದರು. ಮಂಗಳವಾರ ಉಳಿದ ಹಣಕ್ಕೆ ದಾಖಲೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.