ಕುಷ್ಟಗಿ: ಬಿಸಿಯೂಟ ಸೇವಿಸಿ ಸುಮಾರು 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಈ ಮಕ್ಕಳು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದು, ಮಧ್ಯಾಹ್ನದ ನಂತರ ಮಕ್ಕಳಲ್ಲಿ ಏಕಾಏಕಿ ವಾಂತಿ ಕಾಣಿಸಿಕೊಂಡಿದೆ. ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೆ ಬಿಜಕಲ್ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು ಕಡಿಮೆ ಸಮಸ್ಯೆ ಇರುವ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚುತ್ತಿದೆ ಎಂಬುದು ಗೊತ್ತಾಗಿದೆ.
ಶಾಲೆಯಲ್ಲಿನ ಬಿಸಿಯೂಟ ಆಹಾರದಲ್ಲಿನ ದೋಷ ವಾಂತಿಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಇನ್ನಷ್ಟು ಮಾಹಿತಿ ಲಭಿಸಬೇಕಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ದೋಟಿಹಾಳ ಆಸ್ಪತ್ರೆಯಲ್ಲಿ 33 ಮತ್ತು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ಮಕ್ಕಳನ್ನು ತುರ್ತು ವಾಹನದಲ್ಲಿ ಕರೆತರಲಾಗಿದೆ. ಈ ಕುರಿತು 'ಪ್ರಜಾವಾಣಿ'ಗೆ ವಿವರಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ವಾಂತಿ ಮಾತ್ರ ಇರುವುದರಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಅನೇಕ ಮಕ್ಕಳ ಪಾಲಕರು ರೈತರು, ಕೂಲಿಕಾರರಾಗಿದ್ದು ದೂರದ ಹೊಲಗದ್ದೆಗಳಿಗೆ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಂಥ ಮಕ್ಕಳು ಪಾಲಕರು ಬರುವವರೆಗೂ ತೀವ್ರ ತೊಂದರೆ ಅನುಭವಿಸಿದರು ಎಂದು ಗ್ರಾಮಸ್ಥರು ತಿಳಿಸಿದರು.
ಬಿಜಕಲ್ ಗ್ರಾಮಕ್ಕೆ ತಹಶೀಲ್ದಾರ್ ಅಶೋಕ ಶಿಗ್ಗಾವಿ ಭೇಟಿ ನೀಡಿದ್ದು ಊಟದಲ್ಲಿನ ದೋಷದಿಂದ ಸಮಸ್ಯೆಯಾಗಿದ್ದು ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಡುಗೆದಾರರು ಮಾಡಿದ್ದೇ ಮಾನ್ಯ; ಆರೋಪ
ಬಿಜಕಲ್ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದ್ದು ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ, ಗ್ರಾಮದ ಪ್ರಭಾವಿಗಳ ಕುಟುಂಬಕ್ಕೆ ಸೇರಿದವರು ಅಡುಗೆದಾರರಾಗಿದ್ದು ಅವರು ಮಾಡಿದ್ದೇ ಮಾನ್ಯ ಎನ್ನುವಂತಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಊಟದಲ್ಲಿ ಅಸ್ತವ್ಯಸ್ತವಾದರೂ ಅಡುಗೆದಾರರನ್ನು ಯಾರೂ ಪ್ರಶ್ನಿಸುವಂತಿಲ್ಲ. ಕೇಳಿದರೆ ಅವರ ಮನೆಯವರು ಬಂದು ಜನರನ್ನು ಬೆದರಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದಲೂ ಈ ಶಾಲೆಯಲ್ಲಿಯೇ ಬೀಡು ಬಿಟ್ಟಿರುವ ಮುಖ್ಯಶಿಕ್ಷಕಿ ಲೆಕ್ಕಕ್ಕಿಲ್ಲದಂತಾಗಿದ್ದು ಬಿಸಿಯೂಟದ ಸಿಬ್ಬಂದಿಯೇ ಮುಖ್ಯಶಿಕ್ಷಕಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಆಹಾರ ವಸ್ತುಗಳನ್ನು ಸ್ವಚ್ಛಗೊಳಿಸುವುದಿಲ್ಲ, ಶುಚಿ ರುಚಿಯಂತೂ ಇಲ್ಲವೇ ಇಲ್ಲ. ದುರ್ಬಳಕೆ ಮಿತಿಮೀರಿದೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದರೂ ಕ್ರಮ ಜರುಗಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಸದ್ಯ ಇರುವ ಅಡುಗೆದಾರರನ್ನು ಬದಲಿಸಿದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಹೆಸರು ಬಹಿರಂಗಪಡಿದ ಗ್ರಾಮಸ್ಥರು 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.