ADVERTISEMENT

ಸಂಶೋಧನಾರ್ಥಿಗಳ ಶಿಷ್ಯವೇತನದ ಮೇಲೆ ವಿವಿ ಕಣ್ಣು

ಇಕ್ಕಟ್ಟಿನಲ್ಲಿ ಸಿಲುಕಿದ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
ಸಂಶೋಧನಾರ್ಥಿಗಳಿಂದ ಮುಂಗಡವಾಗಿ ಕಟ್ಟಿಸಿಕೊಂಡಿರುವ ಕೊಠಡಿ ಶುಲ್ಕ ಹಾಗೂ ದಾಖಲಾತಿ ಶುಲ್ಕದ ರಶೀದಿ
ಸಂಶೋಧನಾರ್ಥಿಗಳಿಂದ ಮುಂಗಡವಾಗಿ ಕಟ್ಟಿಸಿಕೊಂಡಿರುವ ಕೊಠಡಿ ಶುಲ್ಕ ಹಾಗೂ ದಾಖಲಾತಿ ಶುಲ್ಕದ ರಶೀದಿ   

ಶಿವಮೊಗ್ಗ: ಸದಾ ಒಂದಿಲ್ಲೊಂದು ವಿಷಯದಿಂದ ಸುದ್ದಿಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಇದೀಗ ಸಂಶೋಧನಾರ್ಥಿಗಳು ಪಡೆಯುತ್ತಿರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಶಿಷ್ಯವೇತನದ ಮನೆಬಾಡಿಗೆ ಭತ್ಯೆ (ಎಚ್‌ಆರ್‌ಎ) ಮೇಲೂ ತನ್ನ ಚಿತ್ತ ಹರಿಸಿದೆ.

ಯುಜಿಸಿಯಿಂದ ರಾಷ್ಟ್ರೀಯ ಶಿಷ್ಯವೇತನಕ್ಕೆ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ 15 ಮಂದಿ ಪಿಎಚ್‌.ಡಿ, ಪಿಡಿಎಫ್‌ ಸಂಶೋಧನಾರ್ಥಿಗಳಿಗೆ ಯುಜಿಸಿ ನೀಡುವ ಎಚ್‌.ಆರ್‌.ಎ ಹಣವನ್ನು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕಕ್ಕೆ ಪಾವತಿ ಮಾಡುವಂತೆ ತಾಕೀತು ಮಾಡಿದೆ.

ಶಿಷ್ಯವೇತನಕ್ಕೆ ಆಯ್ಕೆಯಾದವರಲ್ಲಿ ಹೆಚ್ಚಿನವರು ಮಹಿಳೆಯರು. ಇವರೆಲ್ಲರೂ ಶೈಕ್ಷಣಿಕ ವಾತಾವರಣ ಹಾಗೂ ಭದ್ರತೆಯ ದೃಷ್ಟಿಯಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿನಿಲಯಗಳಲ್ಲೇ ವಾಸವಾಗಿದ್ದಾರೆ. ಅಲ್ಲದೇವಿಶ್ವವಿದ್ಯಾಲಯದ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು ಕಾಲಕಾಲಕ್ಕೆ ದಾಖಲಾತಿ ಹಣ, ಆಹಾರ ಭತ್ಯೆ, ಕೊಠಡಿ ಬಾಡಿಗೆ, ಮುಂಗಡ ಆಹಾರ ಭತ್ಯೆ, ಇತರೆ ಶುಲ್ಕ ಸೇರಿ ಎಲ್ಲಾ ರೀತಿಯ ಹಣವನ್ನು ನಿಲಯಕ್ಕೆ ಪಾವತಿಸುತ್ತಿದ್ದಾರೆ. ಆದರೀಗ ವಿಶ್ವವಿದ್ಯಾಲಯ ಎಚ್‌.ಆರ್‌.ಎ ಹಣ ಪಾವತಿಸಲು ಸೂಚಿಸಿರುವುದರಿಂದ, ಸಂಶೋಧನಾರ್ಥಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ADVERTISEMENT

ನಮಗೆ ಮಾತ್ರ ಏಕೆ

‘ವಿಶ್ವವಿದ್ಯಾಲಯದ ಕಿರಿಯ ಸಂಶೋಧನಾರ್ಥಿಗಳು ತಿಂಗಳಿಗೆ ₹ 2,500 ಹಾಗೂ ಹಿರಿಯ ಸಂಶೋಧನಾರ್ಥಿಗಳು ₹ 2,800ರಂತೆ ಈವರೆಗೆ ಪಡೆದಿರುವ ಮನೆ ಬಾಡಿಗೆ ಬಾಬ್ತನ್ನು ಕಟ್ಟಲು ಸೂಚಿಸಲಾಗಿದೆ. ಆದರೆ ಈಗಾಗಲೇ ರಾಜೀವ್‌ ಗಾಂಧಿ ಶಿಷ್ಯವೇತನ ಪಡೆದು ನಮ್ಮಂತೆ ವಿದ್ಯಾರ್ಥಿನಿಲಯದಲ್ಲೇ ಇದ್ದು, ಸಂಶೋಧನೆ ಮುಗಿಸಿದ ಅಭ್ಯರ್ಥಿಗಳ್ಯಾರೂ ಈ ಹಿಂದೆ ಎಚ್‌.ಆರ್‌.ಎ ಪಾವತಿಸಿರಲಿಲ್ಲ. ಇದೀಗ ನಮಗೆ ಮಾತ್ರ ಈ ನಿಯಮ ತರಲಾಗಿದೆ. ನಾವೆಲ್ಲರೂ ಈಗಾಗಲೇ ಪ್ರತಿ ವರ್ಷ ವಸತಿನಿಲಯಕ್ಕೆ ಸುಮಾರು ₹10 ಸಾವಿರದಷ್ಟು ದಾಖಲಾತಿ ಶುಲ್ಕ ಹಾಗೂ ಪ್ರತಿ ತಿಂಗಳೂ ಮೆಸ್‌ ಶುಲ್ಕ ₹ 2,000 ಪಾವತಿಸುತ್ತಿದ್ದೇವೆ. ಇದೀಗ ಈ ಹಣವೂ ಸೇರಿದರೆ ತಿಂಗಳಿಗೆ ₹ 4,500ರಷ್ಟು ಕಟ್ಟಿದಂತಾಗುತ್ತದೆ’ ಎಂದು ಸಂಶೋಧನಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಗಟ್ಟಲೆ ಹಣ ಕಟ್ಟುವ ಪರಿಸ್ಥಿತಿ

ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕವು ಒಂದು ಅಥವಾ ಎರಡು ತಿಂಗಳು ಮಾತ್ರವೇ ಸಂಶೋಧನಾರ್ಥಿಗಳ ಎಚ್‌.ಆರ್‌.ಎ ಹಣ ಕಟ್ಟುವಂತೆ ಸೂಚಿಸಿಲ್ಲ. 2012ರಿಂದ ಈವರೆಗೆ ಸಂಶೋಧನೆ ನಡೆಸಿದ ಈ ಎಲ್ಲಾ 15 ಮಂದಿಗೂ ಹಣವನ್ನು ಪಾವತಿಸುವಂತೆ ಸೂಚಿಸಿದೆ. ಈ 15 ಮಂದಿಯಲ್ಲಿ ಈಗಾಗಲೇ ಕೆಲವರ ಸಂಶೋಧನೆಯೂ ಮುಗಿದಿದೆ. ಕೆಲವರದ್ದು ಮುಗಿಯುವ ಹಂತದಲ್ಲಿದೆ. ಇನ್ನು ಕೆಲವರು ಶಿಷ್ಯವೇತನ ನಂಬಿಕೊಂಡು ಸಂಶೋಧನೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಲಕ್ಷಗಟ್ಟಲೆ ಹಣವನ್ನು ಕಟ್ಟುವುದಾದರೂ ಹೇಗೆ ಎಂಬ ಚಿಂತೆ ಸಂಶೋಧನಾರ್ಥಿಗಳದ್ದು.

ಮೀರಿದ ಗಡುವು

ಘಟಕವು ಜುಲೈ 10ರೊಳಗೆ ಮನೆ ಬಾಡಿಗೆ ಬಾಬ್ತನ್ನು ಪಾವತಿಸುವಂತೆ ಸಂಶೋಧನಾರ್ಥಿಗಳಿಗೆ ಗಡುವು ನೀಡಿತ್ತು. ಆದರೆ ಯಾವುದೇ ಉದ್ಯೋಗ, ಆದಾಯ ಇಲ್ಲದಿರುವಾಗ ಇಷ್ಟೊಂದು ದೊಡ್ಡ ಮೊತ್ತವನ್ನು ಕಟ್ಟಲು ಹೇಗೆ ಎಂಬ ಚಿಂತೆಯಿಂದ ಯಾರೊಬ್ಬರೂ ಘಟಕದ ಕಡೆಗೆ ತಲೆಹಾಕಿಲ್ಲ.

ಸಂಶೋಧನಾರ್ಥಿಗಳಲ್ಲಿ ಅನುಮಾನ

'ವಿಶ್ವವಿದ್ಯಾಲಯದ ಕುಲಪತಿ ಕಾರ್ಯ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ. ಅವರಿಲ್ಲದ ವೇಳೆಯಲ್ಲಿ ಎಚ್‌.ಆರ್‌.ಎ ಹಣವನ್ನು ಪಾವತಿಸುವಂತೆ ಸೂಚಿಸಿರುವುದು ಹಾಗೂಇಷ್ಟು ವರ್ಷ ಕೇಳದೆ ಈಗ ಕೇಳುತ್ತಿರುವುದು ನಮ್ಮ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಯುಜಿಸಿಯೂ ನಮ್ಮ ಸಂಶೋಧನೆಗೆ ಸಹಕಾರಿಯಾಗಲೆಂದು ನೀಡುತ್ತಿರುವ ಶಿಷ್ಯವೇತನ ಹಣವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂಶೋಧನಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

* ‘ಸಂಶೋಧನಾರ್ಥಿಗಳು ಪ್ರತ್ಯೇಕವಾಗಿ ಮನೆ ಮಾಡಿಕೊಂಡರೆ ಭತ್ಯೆಗೆ ಅರ್ಹರಿರುತ್ತಾರೆ. ವಿಶ್ವವಿದ್ಯಾಲಯದ ವಸತಿನಿಲಯದಲ್ಲೇ ಇದ್ದರೆ ನಿಯಮದಂತೆ ಭತ್ಯೆ ಮರುಪಾವತಿಸಬೇಕು. ಈ ಕುರಿತು ಆರಂಭದಲ್ಲೇ ಲಿಖಿತವಾಗಿ ತಿಳಿಸಲಾಗಿದೆ. ಆದರೆ, ಹಲವರು ವಸತಿನಿಲಯ ಸೌಲಭ್ಯ ಪಡೆದರೂ, ಭತ್ಯೆ ಹಿಂದಿರುಗಿಸಿಲ್ಲ. ಹಿಂದೆ ಏಕೆ ಬಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲ. ಈಗ ಮರುಪಾವತಿಸಲು ಸೂಚಿಸಲಾಗಿದೆ’ ಎಂದು ಕುಲಸಚಿವರ ಆದೇಶ ಸಮರ್ಥಿಸಿಕೊಳ್ಳುತ್ತಾರೆ ಕುವೆಂಪು ವಿವಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಘಟಕದ ಸಂಚಾಲಕ ಡಾ.ತಿಪ್ಪೇಸ್ವಾಮಿ.

* ವಿದ್ಯಾರ್ಥಿನಿಲಯಕ್ಕೆ ಕಟ್ಟಡ ಬಾಡಿಗೆ ಸೇರಿದಂತೆ ಎಲ್ಲಾ ರೀತಿಯ ಹಣವನ್ನು ಕಾಲ ಕಾಲಕ್ಕೆಪಾವತಿಸುತ್ತಾ ಬರುತ್ತಿದ್ದೇವೆ. ನಾಲ್ಕೈದು ವರ್ಷದಿಂದ ಯುಜಿಸಿ ನೀಡಿದ ಎಚ್‌.ಆರ್‌.ಎ ಹಣವನ್ನು ಕಟ್ಟುವಂತೆ ಸೂಚಿಸಿರುವುದರಿಂದ ದಿಕ್ಕುತೋಚದಂತಾಗಿದೆ. ಲಕ್ಷಗಟ್ಟಲೆ ಹಣ ತರುವುದಾದರೂ ಎಲ್ಲಿಂದ?
–ನೊಂದ ಸಂಶೋಧನಾರ್ಥಿ

ಮುಖ್ಯಾಂಶಗಳು
* ನಾಲ್ಕೈದು ವರ್ಷದ ಎಚ್‌.ಆರ್‌.ಎ ಕಟ್ಟಲು ತಾಕೀತು

* ಹಣವಿಲ್ಲದೇ ಇಕ್ಕಟ್ಟಿಗೆ ಸಿಲುಕಿದ ಸಂಶೋಧನಾರ್ಥಿಗಳು

* ಶಿಷ್ಯವೇತನವನ್ನೇ ನಂಬಿರುವ ಸಂಶೋಧನಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.