ಬೆಂಗಳೂರು: ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ತಂತ್ರಜ್ಞಾನ ಬಳಸಿಕೊಂಡು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಸೆಸ್ ಹೆಚ್ಚಿಸಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
ನಿರ್ಮಾಣ ಕಾರ್ಮಿಕರ ಮಂಡಳಿಯ ಸೆಸ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಹೆಚ್ಚಳ ಮಾಡಲು ಜಿಐಎಸ್ ತಂತ್ರಜ್ಞಾನ ಬಳಸಿಕೊಳ್ಳುವಂತೆ ತಜ್ಞರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಸಲಹೆ ನೀಡಿದ್ದರು. ಈ ತಂತ್ರಜ್ಞಾನ ಅಳವಡಿಕೆಯಲ್ಲಿ ಅನುಭವ ಹೊಂದಿರುವ ಆರು ವೆಂಡರ್‌ಗಳ ಜತೆ ಶನಿವಾರ ಸಭೆ ನಡೆಸಿದ ಸಚಿವರು, ಜಿಐಎಸ್ ಬಳಕೆ ಕುರಿತು ಮಾಹಿತಿ ಪಡೆದರು.
ಜಿಐಎಸ್ ತಂತ್ರಜ್ಞಾನದ ಅಳವಡಿಕೆ ಹೇಗೆ? ಆ ಮೂಲಕ ಎಷ್ಟು ಪ್ರಮಾಣದ ಹೆಚ್ಚಿನ ಸೆಸ್ ಸಂಗ್ರಹಿಸಬಹುದು ಎಂಬುದರ ಕುರಿತು ವೆಂಡರ್‌ಗಳು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಿದರು. ಎಲ್ಲರಿಂದ ಮಾಹಿತಿ ಪಡೆದ ಸಚಿವರು, ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಜಂಟಿ ಕಾರ್ಯದರ್ಶಿ ವೆಂಕಟರಾಜು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.