ADVERTISEMENT

ಅಪರಾಧಕ್ಕೆ ಅನುಗುಣವಾಗಿ ಶಿಕ್ಷೆಯಾಗಲಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:35 IST
Last Updated 26 ಜೂನ್ 2024, 15:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನಿಷ್ಠರಲ್ಲದ ಸಾಲಗಾರರಿಗೆ ಮನಬಂದಂತೆ ಸಾಲ ಮಂಜೂರು ಮಾಡಿದ ಮತ್ತು ಮರುಪಾವತಿಗೆ ಪಡೆಯಬೇಕಿದ್ದ ಭದ್ರತೆಗಳಲ್ಲಿ ರಾಜಿ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಂಡ ಬ್ಯಾಂಕ್‌ ಅಧಿಕಾರಿಯ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್‌, ‘ಯಾವುದೇ ತಪ್ಪಿತಸ್ಥ ನೌಕರನಿಗೆ ನೀಡುವ ಶಿಕ್ಷೆಯು ಆತ ಎಸಗಿದ ಅಪರಾಧಕ್ಕೆ ಅನುಗುಣವಾಗಿರಬೇಕು’ ಎಂದು ಸ್ಪಷ್ಟಪಡಿಸಿದೆ.

ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್‌ ಆದ ನಾಗರಬಾವಿಯ ಎಂ.ಆರ್‌.ನಾಗರಾಜನ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ಶಿಕ್ಷೆ ನೀಡುವಾಗ ಆ ನೌಕರ ಸುದೀರ್ಘವಾಗಿ ಕಳಂಕ ರಹಿತರಾಗಿ ಸೇವೆ ಸಲ್ಲಿಸಿದ ಅವಧಿ, ಪಡೆದಿರುವ ಬಡ್ತಿ, ನಿವೃತ್ತಿಗೆ ಇರುವ ಅವಧಿಯೂ ಸೇರಿದಂತೆ ಅಗತ್ಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನಾಗರಾಜನ್‌ 1979ರಲ್ಲಿ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿ ಸೇವೆಗೆ ಸೇರ್ಪಡೆಯಾಗಿದ್ದಾರೆ. 1996ರಲ್ಲಿ ಮೊದಲ ಬಡ್ತಿ ಪಡೆದು ಅಧಿಕಾರಿಯಾದ ಮರು ವರ್ಷವೇ ಮ್ಯಾನೇಜರ್‌ ಆಗಿ ಬಡ್ತಿ ಹೊಂದಿದ್ದರಲ್ಲದೆ, 'ಸ್ಟಾರ್‌ ಫರ್ಫಾರ್ಮರ್‌' ಪ್ರಶಸ್ತಿಯನ್ನೂ ಪಡೆದಿರುವುದು ದಾಖಲೆಗಳಲ್ಲಿದೆ. ₹ 400 ಕೋಟಿ ಸಾಲ ವಸೂಲು ಮಾಡಿ ಉತ್ತಮ ಉದ್ಯೋಗಿ ಎಂಬ ಪ್ರಮಾಣ ಪತ್ರ ಪಡೆದಿದ್ದರು ಎಂದೂ ಈ ದಾಖಲೆಗಳಲ್ಲಿ ತಿಳಿಸಲಾಗಿದೆ. ಹೀಗಿರುವಾಗ, ಈ ಎಲ್ಲಾ ಅಂಶಗಳನ್ನು ವಿಚಾರಣೆ ವೇಳೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ವಿವರಿಸಿದೆ.

ADVERTISEMENT

‘ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಕ್ಲೀನ್‌ ಚಿಟ್‌ ನೀಡಲಾಗದು. ಈಗಾಗಲೇ ಅವರು ತಮ್ಮ ಸೇವಾವಧಿ ಪೂರೈಸಿ ನಿವೃತ್ತರಾಗಿರುವ ಕಾರಣ, ಈ ಹಂತದಲ್ಲಿ ವಜಾ ಆದೇಶ ರದ್ದುಗೊಳಿಸುವುದು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶಿಸುವುದು ಕಾರ್ಯಸಾಧುವಲ್ಲ’ ಎಂದು ಸ್ಪಷ್ಟಪಡಿಸಿದೆ.

‘ನನ್ನ ವಿರುದ್ಧದ ಆರೋಪಗಳನ್ನು ಪರಿಗಣಿಸುವಾಗ ಶಿಸ್ತು ಮತ್ತು ಮೇಲ್ಮನವಿ ಪ್ರಾಧಿಕಾರಗಳು ಯಾವುದೇ ಸಾಕ್ಷ್ಯಾಧಾರ ಪರಿಗಣಿಸಿಲ್ಲ. ಹಾಗಾಗಿ, ನನ್ನ ವಜಾ ಆದೇಶವನ್ನು ರದ್ದುಗೊಳಿಸಬೇಕು’ ಎಂದು ನಾಗರಾಜನ್‌ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.