ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೀಡುವ ಸಹಾಯಧನಗಳ ಮೊತ್ತದಲ್ಲಿ ಭಾರಿ ಏರಿಕೆ ಮಾಡುವ ನಿರ್ಣಯಗಳನ್ನು ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಮಂಡಳಿಯ ಸಭೆಯ ಬಳಿಕ ಮಾತನಾಡಿದ ಅವರು, ‘ಕಾರ್ಮಿಕರ ಮಾಸಿಕ ಪಿಂಚಣಿಯ ಮೊತ್ತವನ್ನು ₹ 2,000ದಿಂದ ₹ 3,000ಕ್ಕೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿಯನ್ನು ₹ 1,000ದಿಂದ ₹ 2,000ಕ್ಕೆ ಹೆಚ್ಚಿಸಲಾಗಿದೆ. ಹೆರಿಗೆ ಸೌಲಭ್ಯಗಳನ್ನು ₹ 20,000 ದಿಂದ ₹ 25,000ಕ್ಕೆ, ಹೆಣ್ಣು ಮಗುವಿಗೆ ನೀಡುವ ಸಹಾಯಧನವನ್ನು₹ 30,000ದಿಂದ ₹ 35,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದರು.
ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನೂ ಹೆಚ್ಚಿಸುವ ತೀರ್ಮಾನ ಮಾಡಲಾಗಿದೆ. ನರ್ಸರಿ ಹಂತದಿಂದ ನಾಲ್ಕನೇ ತರಗತಿವರೆಗಿನ ಮಕ್ಕಳಿಗೆ 5,000 (ಹಿಂದೆ ₹ 3,000), ಐದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ₹ 9,000 (ಹಿಂದೆ ₹ 8,000), ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ₹ 12,000 (ಹಿಂದೆ ₹ 10,000) ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ₹ 15,000 (ಹಿಂದೆ ₹ 10,000) ಪ್ರೋತ್ಸಾಹಧನನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ತರಬೇತಿ ಕೇಂದ್ರಗಳ ವಿದ್ಯಾರ್ಥಿಗಳಿಗೆ ₹ 20,000 (ಹಿಂದೆ ₹ 12,000), ಪದವಿ ವಿದ್ಯಾರ್ಥಿಗಳಿಗೆ ₹ 25,000 (ಹಿಂದೆ ₹ 15,000), ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹ 40,000 (ಹಿಂದೆ ₹25,000), ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹20,000 (ಹಿಂದೆ ₹ 15,000), ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ₹ 50,000 (ಹಿಂದೆ ₹ 30,000), ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ₹ 70,000 (ಹಿಂದೆ ₹ 40,000) ಮತ್ತು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ₹ 50,000 (ಹಿಂದೆ ₹ 25,000) ಪ್ರೋತ್ಸಾಹಧನ ನೀಡುವ ಪ್ರಸ್ತಾವಕ್ಕೆ ಮಂಡಳಿ ಒಪ್ಪಿಗೆ ನೀಡಿದೆ ಹೆಬ್ಬಾರ್ ಹೇಳಿದರು.
ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಮಂಡಳಿಯಿಂದ ಭರಿಸಲಾಗುವುದು. ಇತರ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೆ ₹ 30,000 ನೀಡಲಾಗುವುದು. ಅರೆ ವೈದ್ಯಕೀಯ ಮತ್ತು ಬಿ.ಎಡ್ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದರು.
ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯಧನವನ್ನು ₹ 10,000 ದಿಂದ ₹ 20,000ಕ್ಕೆ ಹಾಗೂ ವಿವಾಹ ಸಹಾಯಧನವನ್ನು ₹ 50,000ದಿಂದ ₹ 60,000ಕ್ಕೆ ಹೆಚ್ಚಿಸಲಾಗಿದೆ.ರಾಜ್ಯದ ಎಂಟು ಲಕ್ಷ ಮಂದಿ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಈ ಯೋಜನೆಗಳ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ವರ್ಷಕ್ಕೆ₹ 100 ಕೋಟಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ, ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾದ ನಾಗನಾಥ, ಪ್ರಕಾಶ ಎಂ. ನಾಡಿಗೇರ್, ಶಿವಾನಿ ಭಟ್ಕಳ, ಹಣಕಾಸು ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.