ಬೆಂಗಳೂರು: ಕಾರ್ಮಿಕ ಕಲ್ಯಾಣ ನಿಧಿ ಹಣ ಬಳಸಿಕೊಂಡು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾ ಅಭಿಯಾನ ನಡೆಸಲು ಕಾರ್ಮಿಕ ಇಲಾಖೆ ಹೊರಡಿಸಿದ್ದ ಕಾರ್ಯಾದೇಶವನ್ನು ಹಿಂದಕ್ಕೆ ಪಡೆದಿದೆ.
‘ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಲಸಿಕೆ ಕೊಡಿಸಲು ಉದ್ದೇಶಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದಲೇ ಕಾರ್ಮಿಕರಿಗೆ ಲಸಿಕೆ ಹಾಕಿಸುವಂತೆ ಸೂಚನೆ ಬಂದಿರುವುದರಿಂದ ಕಾರ್ಯಾದೇಶ ಹಿಂಪಡೆಯಲಾಗಿದೆ’ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್‌ಗೆ (ಫನಾ) ಪತ್ರ ಬರೆದು ಸ್ಪಷ್ಟಪಡಿಸಿದೆ.
ಕಾರ್ಮಿಕರಿಗೆ ಕೋವಿಡ್ ಲಸಿಕೆ ಕೊಡಿಸಲು ಕಾರ್ಮಿಕರ ನಿಧಿಯ ಹಣ ಖರ್ಚು ಮಾಡುವುದಕ್ಕೆ ವ್ಯಕ್ತವಾಗಿದ್ದ ವಿರೋಧದ ಬಗ್ಗೆ ‘ಲಸಿಕೆ: ಕಾರ್ಮಿಕ ನಿಧಿಯ ₹700 ಕೋಟಿ ವ್ಯಯ?’ ಎಂಬ ಶೀರ್ಷಿಕೆಯಡಿ ಸೆ.5ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಕೋವಿಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿರುವ ಕಾರ್ಯಾದೇಶವನ್ನು ಮಂಡಳಿ ರದ್ದುಗೊಳಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದ್ದಾರೆ.
‘ರಾಜ್ಯದಲ್ಲಿರುವ 30 ಲಕ್ಷ ಕಟ್ಟಡ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಕೊವೀಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ನಿಧಿಯಿಂದ ಪ್ರತಿ ಡೋಸ್‌ಗೆ ₹780 ದರ ನಿಗದಿಪಡಿಸಿತ್ತು. ಇದನ್ನು ವಿರೋಧಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಿದ್ದವು. ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.