ಮೈಸೂರು: ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಜನಿಸುವ ಮಕ್ಕಳಿಗೆ ಸೋಂಕು ಹರಡದಂತೆ ನೀಡುವ ಜೀವರಕ್ಷಕ ‘ನೆವಿರಪಿನ್’ ಔಷಧ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಪೂರೈಕೆಯಾಗುತ್ತಿಲ್ಲ.
ಈವರೆಗೆ ಸರ್ಕಾರದ ಎಆರ್‌ಟಿ ಕೇಂದ್ರಗಳಲ್ಲಿ ನೆವಿರಪಿನ್ ಔಷಧಿ ಉಚಿತವಾಗಿ ಲಭ್ಯವಾಗುತ್ತಿತ್ತು. ಇದನ್ನು ಎಚ್‌ಐವಿ ಸೋಂಕಿತ ಮಹಿಳೆಗೆ ಜನಿಸಿದ ಮಕ್ಕಳಿಗೆ 6 ವಾರಗಳ ಕಾಲ ಕಡ್ಡಾಯವಾಗಿ ನೀಡಬೇಕು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಔಷಧಿ ಪೂರೈಕೆ ಸ್ಥಗಿತಗೊಂಡಿದೆ. ಈ ಕುರಿತು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್) ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆನಂದ ಜ್ಯೋತಿ ಸಂಸ್ಥೆಯ ಅಧ್ಯಕ್ಷ ಸಿ.ಚಂದ್ರಶೇಖರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಎರಡು ತಿಂಗಳಿನಿಂದ ನೆವಿರಪಿನ್ ಮಾತ್ರೆಗಳು ಸಿಗದೆ, ಎಚ್‌ಐವಿ ಬಾಧಿತರ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಹಣ ಇದ್ದವರು ಬೇರೆಡೆಯಿಂದ ಖರೀದಿಸಿ ತರುತ್ತಾರೆ. ಆದರೆ ಬಡವರಿಗೆ ಮಾತ್ರೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಎಚ್‌ಐವಿ ಸೋಂಕಿತ ಪೋಷಕರಿಂದ ಜನಿಸುವ ಮಕ್ಕಳಿಗೂ ಎಚ್‌ಐವಿ ಸೋಂಕು ತಗಲುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಶೀಘ್ರ ಔಷಧ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.