ADVERTISEMENT

’ಶಕ್ತಿ’ಯಿಂದ ನಿಗಮದ ನಗದು ಹರಿವಿನ ಮೇಲೆ ಪರಿಣಾಮ: ₹3,773 ಕೋಟಿ ಪಾವತಿಸದ ಸರ್ಕಾರ

ರಾಜೇಶ್ ರೈ ಚಟ್ಲ
Published 27 ಜೂನ್ 2024, 2:18 IST
Last Updated 27 ಜೂನ್ 2024, 2:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ 2023–24ನೇ ಸಾಲಿನ ಬಾಕಿ ₹1,180.61 ಕೋಟಿಯೂ ಸೇರಿ ಒಟ್ಟು ₹3,773.79 ಕೋಟಿಯನ್ನು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಮರುಪಾವತಿ ಮಾಡಬೇಕಿದೆ. 

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್ ಅವರಿಗೆ ಇದೇ 18ರಂದು ನಾಲ್ಕು ‍ಪುಟಗಳ ಟಿಪ್ಪಣಿ ಬರೆದು ಸಾರಿಗೆ ನಿಗಮಗಳ ಸದ್ಯದ ಆರ್ಥಿಕ ಪರಿಸ್ಥಿತಿಯ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.  ‘ಶಕ್ತಿ’ ಯೋಜನೆಯ ಅನುಷ್ಠಾನದ ನಂತರ ನಿಗಮಗಳ ಆದಾಯದಲ್ಲಿ ಹೆಚ್ಚಳ ಉಂಟಾಗಿದ್ದರೂ, ನಗದು ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ.

ADVERTISEMENT

ಈ ಯೋಜನೆಯಲ್ಲಿ ನಿಗಮಗಳಿಗೆ ಆಗಿರುವ ವೆಚ್ಚವನ್ನು ಸಂಪೂರ್ಣ ಮರು ಪಾವತಿಸಿ, ಸಾರಿಗೆ ಸೇವೆಯನ್ನು ಸಮರ್ಪಕವಾಗಿ ನಿಭಾಯಿಸಲು ಆರ್ಥಿಕ ನೆರವು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದೂ ಸಚಿವರು ಮನವಿ ಮಾಡಿದ್ದಾರೆ. ಈ ಟಿಪ್ಪಣಿಯನ್ನು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯ ಕಾರ್ಯದರ್ಶಿ ರವಾನಿಸಿದ್ದಾರೆ.

ಟಿಪ್ಪಣಿಯಲ್ಲಿ ಏನಿದೆ?:

ಇಂಧನ ವೆಚ್ಚ ಮತ್ತು ಕಾಲಕಾಲಕ್ಕೆ ತುಟ್ಟಿ ಭತ್ಯೆ ಹೆಚ್ಚಳ, ಬಿಡಿ ಭಾಗಗಳ ವೆಚ್ಚದಲ್ಲಿ ಹೆಚ್ಚಳದಿಂದಾಗಿ ನಿಗಮಗಳ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆ ಉಂಟಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ಪ್ರಯಾಣಿಕರ ಟಿಕೆಟ್‌ ದರಗಳನ್ನು 2020ರಿಂದ ಹಾಗೂ ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ಗಳ ದರಗಳನ್ನು 2012ರಿಂದ ಪರಿಷ್ಕರಿಸಿಲ್ಲ. 2023ರ ಮಾರ್ಚ್‌ 1ರಿಂದ ಸಿಬ್ಬಂದಿ ವೇತನ ಪರಿಷ್ಕರಣೆಯಿಂದ ನಿಗಮಕ್ಕೆ ತಿಂಗಳಿಗೆ ₹55.35 ಕೋಟಿ ಹೆಚ್ಚುವರಿ ವೆಚ್ಚ ಉಂಟಾಗುತ್ತಿದ್ದು, ಅದನ್ನು ನಿಭಾಯಿಸಲು ವಿಶೇಷ ಅನುದಾನ ಬಿಡುಗಡೆ ಆಗಿಲ್ಲ.

2023–24ನೇ ಸಾಲಿನಲ್ಲಿ ನಿಗಮಗಳ ಆದಾಯದಲ್ಲಿ ಶೇ 47ರಷ್ಟು ‘ಶಕ್ತಿ’ ಯೋಜನೆಯಡಿ ಹಾಗೂ ಶೇ 53ರಷ್ಟು ‘ಶಕ್ತಿ’ಯೇತರವಾಗಿ ಬಂದಿದೆ. ಡೀಸೆಲ್‌, ಸಿಬ್ಬಂದಿ ವೆಚ್ಚ ಮತ್ತು ಇತರ ಕಾರ್ಯಾಚರಣೆ ವೆಚ್ಚಗಳನ್ನು ತಿಂಗಳಿಡೀ ನಿಭಾಯಿಸಲು ‘ಶಕ್ತಿ’ಯೇತರ ಆದಾಯದ ಜೊತೆಗೆ ‘ಶಕ್ತಿ’ ಯೋಜನೆಯಡಿ ಸಂಗ್ರಹವಾಗುವ ಸಂಪೂರ್ಣ ಮೊತ್ತವೂ ಅತ್ಯಗತ್ಯವಾಗಿದೆ. ಆದರೆ, ‘ಶಕ್ತಿ’ ಯೋಜನೆಯಡಿ ಸಂಗ್ರಹವಾದ ಆದಾಯ ಸಂಪೂರ್ಣವಾಗಿ ಮರು ಪಾವತಿಯಾಗದೇ ಇರುವುದರಿಂದ, ಆ ಮೊತ್ತವೂ ಸೇರಿ ಒಟ್ಟು ₹3,773.79 ಕೋಟಿಯನ್ನು ಸರ್ಕಾರ ಮರು ಪಾವತಿಸಲು ಬಾಕಿಯಿದೆ ಎಂದು ವಿವರಿಸಿರುವ ಸಚಿವರು, ಆ ವಿವರಗಳ ಪಟ್ಟಿಯನ್ನೂ ಟಿಪ್ಪಣಿಯಲ್ಲಿ ನೀಡಿದ್ದಾರೆ.

‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಗ್ರಾಮಾಂತರ ಪ್ರದೇಶವೂ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲು ಭಾರಿ ಬೇಡಿಕೆ ಇದೆ. ಹೀಗಾಗಿ, ಹೊಸ ವಾಹನಗಳನ್ನು ಖರೀದಿಸುವ ಮೂಲಕ ನಿಗಮಗಳ ವಾಹನ ಬಲ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಹೊಸ ವಾಹನಗಳ ಖರೀದಿಗೆ 2023–24ನೇ ಸಾಲಿನಲ್ಲಿ ಸರ್ಕಾರ ₹600 ಕೋಟಿ ಬಿಡುಗಡೆ ಮಾಡಿದೆ. ಆದರೆ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯಾವುದೇ ಅನುದಾನ ಒದಗಿಸಿಲ್ಲ. ಸಂಗ್ರಹವಾಗುತ್ತಿರುವ ನಗದು ಆದಾಯದಿಂದ ನೌಕರರ ವೇತನ ಮತ್ತು ಬಸ್‌ಗಳ ಕಾರ್ಯಾಚರಣೆಗೆ ಅತ್ಯಗತ್ಯವಾದ ಇಂಧನ ಮತ್ತು ಇತರ ವೆಚ್ಚಗಳನ್ನು ಮಾತ್ರ ಭರಿಸಲಾಗುತ್ತಿದೆ. ಭವಿಷ್ಯ ನಿಧಿಗೆ ಪಾವತಿಸಬೇಕಿರುವ ಮೊತ್ತವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2023ರ ವೇತನ ಪರಿಷ್ಕರಣೆಯಂತೆ ಹಾಲಿ ಮತ್ತು ನಿವೃತ್ತ ನೌಕರರಿಗೆ ಹಿಂಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೊಸ ಬಸ್‌ಗಳ ಖರೀದಿಗೆ ಸಂಪನ್ಮೂಲ ಕ್ರೋಡೀಕರಿಸಿ ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ ಎಂದೂ ಟಿಪ್ಪಣಿಯಲ್ಲಿದೆ.

ಸಚಿವರ ಬೇಡಿಕೆಗಳೇನು?

  • ‘ಶಕ್ತಿ’ ಯೋಜನೆಯ 2023–24ನೇ ಸಾಲಿನ ಬಾಕಿ ₹1180.61 ಕೋಟಿ ಬಿಡುಗಡೆ ಮಾಡಬೇಕು

  • ಪ್ರಸಕ್ತ ಸಾಲಿನಡಿ ‘ಶಕ್ತಿ’ ಯೋಜನೆಯಡಿ ನಿಗಮಗಳಿಗೆ ಆಗಿರುವ ವೆಚ್ಚವನ್ನು ಸಂಪೂರ್ಣ ಮರುಪಾವತಿಸಬೇಕು

  • ವೇತನ ಪರಿಷ್ಕರಣೆಯ ಮೊತ್ತ (ನಿವೃತ್ತ ನೌಕರರಿಗೆ ಹಿಂಬಾಕಿ) ಪಾವತಿಗೆ ₹220 ಕೋಟಿ ನೀಡಬೇಕು

  • ಪ್ರಸಕ್ತ ಸಾಲಿನಲ್ಲಿ ನಿಗಮಗಳು 2068 ಹೊಸ ವಾಹನಗಳನ್ನು ಖರೀದಿಸಲು ಯೋಚಿಸಿದ್ದು ಬಂಡವಾಳ ವೆಚ್ಚ ನಿಭಾಯಿಸಲು ₹800 ಕೋಟಿ ವಿಶೇಷ ಅನುದಾನ ನೀಡಬೇಕು

  • ಸರ್ಕಾರಕ್ಕೆ ಸಾರಿಗೆ ನಿಗಮಗಳು 2024–25ನೇ ಸಾಲಿನಲ್ಲಿ ಪಾವತಿಸಬೇಕಾದ ಮೋಟಾರು ವಾಹನ ತೆರಿಗೆ ₹637.76 ಕೋಟಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು

‘ಶಕ್ತಿ ಅನುಕರಣೀಯ ಯೋಜನೆ’

‘ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಸಾರಿಗೆ ನಿಗಮಗಳ ವೇಗದೂತ ಸೇರಿದಂತೆ ಎಲ್ಲ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು ಅತ್ಯಂತ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿದೆ. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಅಲ್ಲದೆ ಇದು ರಾಷ್ಟ್ರದಾದ್ಯಂತ ಅತ್ಯಂತ ಜನಪ್ರಿಯ ಅನುಕರಣೀಯ ಯೋಜನೆಯಾಗಿ ಹೊರಹೊಮ್ಮಿದೆ. ಮಹಿಳೆಯರ ಸಬಲೀಕರಣ ಹಾಗೂ ರಾಜ್ಯದ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೂ ನೆರವಾಗಿದೆ’ ಎಂದು ರಾಮಲಿಂಗಾರೆಡ್ಡಿ ಅವರು ‘ಶಕ್ತಿ’ ಯೋಜನೆಯನ್ನು ಟಿಪ್ಪಣಿಯಲ್ಲಿ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.