ADVERTISEMENT

ಅಸ್ಥಿಮಜ್ಜೆ: ಚಿಕಿತ್ಸೆಗೆ ಅನುದಾನದ ಕೊರತೆ

ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಸಿಗದ ಆರ್ಥಿಕ ನೆರವು

ವರುಣ ಹೆಗಡೆ
Published 21 ಜೂನ್ 2022, 19:23 IST
Last Updated 21 ಜೂನ್ 2022, 19:23 IST
   

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ದುಬಾರಿ ವೆಚ್ಚದ ಅಸ್ಥಿಮಜ್ಜೆ ಕಸಿಯನ್ನು ಉಚಿತವಾಗಿ ಒದಗಿಸುವಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕಾರ್ಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರದಿಂದ ಈವರೆಗೂ ಅನುದಾನ ದೊರೆಯದಿದ್ದರಿಂದ ಸಂಸ್ಥೆಗೆ ಕಸಿ ಹೊರೆಯಾಗಿ ಪರಿಣಮಿಸಿದ್ದು,ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಚಿಕಿತ್ಸೆಗೆ ಎದುರು ನೋಡುತ್ತಿದ್ದಾರೆ.

ಕಸಿ ಚಿಕಿತ್ಸೆಗಾಗಿ ಸಂಸ್ಥೆಯ ಆವರಣದಲ್ಲಿ ಅಸ್ಥಿಮಜ್ಜೆ ಘಟಕಕ್ಕೆ ಕಳೆದಫೆಬ್ರುವರಿಯಲ್ಲಿ ಚಾಲನೆ ನೀಡಲಾಗಿತ್ತು. ಇಲ್ಲಿ ನಡೆಸುವಕಸಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ₹ 30 ಲಕ್ಷದಿಂದ ₹ 50 ಲಕ್ಷ ವೆಚ್ಚವಾಗಲಿದೆ. ಇದರಿಂದಾಗಿ ಕಸಿ ಚಿಕಿತ್ಸೆಗೆ ಸಂಸ್ಥೆಯಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಆದ್ಯತೆ ಅನುಸಾರ ಈಗಾಗಲೇ 20ಕ್ಕೂ ಅಧಿಕ ಮಂದಿಯನ್ನು ಕಸಿ ಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಳ್ಳಲಾಗಿದೆ. ಈ ಚಿಕಿತ್ಸೆಗೆರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅನುದಾನ ಒದಗಿಸುವಂತೆ ಸಂಸ್ಥೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಈವರೆಗೂ ಅನುಮೋದನೆ ದೊರೆತಿಲ್ಲ.

ನೋಂದಾಯಿತ ರೋಗಿಗಳ ಕಸಿಗೆ ಸಂಸ್ಥೆಯು ಸ್ವಯಂ ಕ್ರೋಢೀಕೃತ ಅನುದಾನ ಹಾಗೂ ದಾನಿಗಳಿಂದ ಸಂಗ್ರಹಿಸುವ ಹಣ ಬಳಸುತ್ತಿದೆ. ರೋಗಿಯೊಬ್ಬರಿಗೆ‌ ಅವರದೇ ದೇಹದ ಆರೋಗ್ಯವಂತ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆದು ನಡೆಸುವ ಕಸಿಗೆ ₹ 7 ಲಕ್ಷ ವೆಚ್ಚವಾಗುತ್ತಿದೆ.ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು, ಕಸಿ ಮಾಡಿದಲ್ಲಿ ₹21 ಲಕ್ಷದ ವರೆಗೆ ಚಿಕಿತ್ಸಾ ವೆಚ್ಚವಾಗಲಿದೆ. ಇಷ್ಟು ಹಣಕ್ಕೆರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅನುಮೋದನೆ ಸಿಕ್ಕಿಲ್ಲ.

ADVERTISEMENT

17 ಹಾಸಿಗೆ: ಅಸ್ಥಿ ಮಜ್ಜೆ ಚಿಕಿತ್ಸಾ ಘಟಕವನ್ನು ಸಂಸ್ಥೆಯಲ್ಲಿ₹ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 13 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ.ರಾಜ್ಯದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಘಟಕ ಎಂಬ ಗೌರವಕ್ಕೆ ಕೂಡ ಇದು ಭಾಜನವಾಗಿದೆ.ಈ ಘಟಕವು 17 ಹಾಸಿಗೆಗಳನ್ನು ಒಳಗೊಂಡಿದೆ.

‘ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯ. ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬದವರಿಗೆ ಸಂಸ್ಥೆಯಲ್ಲಿನ ಘಟಕದ ಮೂಲಕ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು,ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಶೀಘ್ರದಲ್ಲೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ಅಂಕಿ– ಅಂಶಗಳು

1,500: ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಹೊರರೋಗಿಗಳು

1,200: ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಒಳರೋಗಿಗಳು


ಎರಡು ವಿಧದಲ್ಲಿ ಅಸ್ಥಿಮಜ್ಜೆ

‘ಅಸ್ಥಿಮಜ್ಜೆ ಕಸಿ ಘಟಕದಲ್ಲಿ ವ್ಯಕ್ತಿಯ ದೇಹದ ಭಾಗದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್‌ ಕಣಗಳನ್ನು ನಾಶಮಾಡಲಾಗುತ್ತದೆ. ಎರಡು ವಿಧಗಳಲ್ಲಿ ಈ ಕಸಿ ನಡೆಸಲಾಗುತ್ತದೆ. ಅವರದೇ ದೇಹದ ಆರೋಗ್ಯವಂತ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆದು, ಕ್ಯಾನ್ಸರ್‌ ಕಣಗಳು ನಾಶವಾದ ಜಾಗದಲ್ಲಿ ನಡೆಸುವ ಕಸಿಗೆ ಚಿಕಿತ್ಸಾ ವೆಚ್ಚ ಕಡಿಮೆಯಾಗಲಿದೆ. ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು, ಕಸಿ ಮಾಡಿದಲ್ಲಿ ವೆಚ್ಚ ಅಧಿಕವಾಗುತ್ತದೆ’ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2018ರಲ್ಲಿ ಬಿಪಿಎಲ್‌ ಕುಟುಂಬಗಳಿಗಾಗಿ ‘ರಾಜ್ಯ ಅಂಗಾಂಗ ಕಸಿ ಯೋಜನೆ’ ಆರಂಭಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಹೃದಯ ಕಸಿಗೆ ಪ್ರತಿ ರೋಗಿಗೆ ₹ 11 ಲಕ್ಷ, ಮೂತ್ರಪಿಂಡ ಕಸಿಗೆ ₹ 3 ಲಕ್ಷ, ಯಕೃತ್ತು ಕಸಿಗೆ ₹ 12 ಲಕ್ಷ ಧನಸಹಾಯ ನೀಡಲು ಅವಕಾಶವಿದೆ. 2019 ರಲ್ಲಿ ಅಸ್ಥಿಮಜ್ಜೆ ಕಸಿಯನ್ನೂ ಸೇರ್ಪಡೆ ಮಾಡಲಾಗಿತ್ತು.

****

ಅಸ್ಥಿಮಜ್ಜೆ ಕಸಿಗೆ ಬೇಡಿಕೆ ಹೆಚ್ಚಾಗಿದೆ. ಅನುದಾನವಿದ್ದಲ್ಲಿ ವರ್ಷಕ್ಕೆ ನೂರಕ್ಕೂ ಅಧಿಕ ಮಂದಿಗೆ ಕಸಿ ಮಾಡಬಹುದು.

- ಡಾ.ಸಿ. ರಾಮಚಂದ್ರ, , ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.