ADVERTISEMENT

ಮದ್ಯದಂಗಡಿ ಮುಂದೆ ಹೋರಾಟ

ನಿಷೇಧಕ್ಕೆ ಒಪ್ಪದ ಮುಖ್ಯಮಂತ್ರಿ; ಹಳ್ಳಿಗಳಿಗೆ ಹೊರಟ ಮಹಿಳೆಯರ ಪಡೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:18 IST
Last Updated 30 ಜನವರಿ 2019, 20:18 IST
ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮಹಿಳೆಯರು ಬುಧವಾರ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಣಿ ಸತೀಶ್, ರಂಗಕರ್ಮಿ ಪ್ರಸನ್ನ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮಹಿಳೆಯರು ಬುಧವಾರ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಣಿ ಸತೀಶ್, ರಂಗಕರ್ಮಿ ಪ್ರಸನ್ನ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಬೆಂಗಳೂರು: ಮದ್ಯ ನಿಷೇಧಕ್ಕೆ ಆಗ್ರಹಿಸಿ ಚಿತ್ರದುರ್ಗದಿಂದ ಪಾದಯಾತ್ರೆಯ ಮೂಲಕ ರಾಜಧಾನಿಗೆ ಬಂದ ಮಹಿಳೆಯರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಬುಧವಾರ ರಾತ್ರಿ ನಡೆಸಿದ ಮಾತುಕತೆ ಮುರಿದು ಬಿತ್ತು. ಹಳ್ಳಿಗಳಲ್ಲಿ ಮದ್ಯದಂಗಡಿಗಳ ಮುಂದೆ ಪ್ರತಿಭಟನೆ ನಡೆಸುವ ಪಣತೊಟ್ಟ ಮಹಿಳೆಯರು ಊರಿನತ್ತ ಮುಖ ಮಾಡಿದರು.

ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ತೆರಳಿದ್ದ ಪ್ರತಿಭಟನಾಕಾರರ ನಿಯೋಗ, ‘ಈ ಕ್ಷಣವೇ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಬೇಕು’ ಎಂದು ಪಟ್ಟು ಹಿಡಿಯಿತು. ‘ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದು, ಮಿತ್ರಪಕ್ಷದ ಸಹಮತವಿಲ್ಲದೆ ನಿರ್ಣಯ ಕೈಗೊಳ್ಳುವುದು ಕಷ್ಟ. ಆದರೆ, ನಿಮ್ಮ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸುತ್ತೇನೆ. ನನಗೆ ಸ್ವಲ್ಪ ಸಮಯಾವಕಾಶ ಕೊಡಿ’ ಎಂದು ಕುಮಾರಸ್ವಾಮಿ ಕೇಳಿದರು.

‘ನಾವು ಇಲ್ಲಿಗೆ ಮನವಿ ಸಲ್ಲಿಸಲು ಬಂದಿಲ್ಲ. ಮದ್ಯ ನಿಷೇಧದ ಆದೇಶ ಪಡೆಯಲು ಬಂದಿದ್ದೇವೆ. ನಿರ್ಣಯ ಕೈಗೊಳ್ಳುತ್ತೀರೋ ಇಲ್ಲವೋ ಹೇಳಿ’ ಎಂದು ಪ್ರಸನ್ನ ಕೇಳಿದರು. ’ಅಂತಹ ನಡೆ ತಕ್ಷಣಕ್ಕೆ ಅಸಾಧ್ಯ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ‘ನಿಮ್ಮ ನಿರ್ಧಾರವನ್ನು ಪ್ರತಿಭಟನಾನಿರತರಿಗೆ ತಿಳಿಸುತ್ತೇನೆ’ ಎಂದು ಹೇಳಿದ ಪ್ರಸನ್ನ, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿದರು.

ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ಚರ್ಚೆ ನಡೆಸಿದ ಹೋರಾಟದ ಮುಂದಾಳುಗಳು, ಬೆಂಗಳೂರಿನಲ್ಲಿ ಉಳಿದು ಪ್ರತಿಭಟನೆ ನಡೆಸುವುದಕ್ಕಿಂತ, ಹಳ್ಳಿಗಳಲ್ಲಿಯೇ ಮದ್ಯದಂಗಡಿಗಳ ಎದುರು ಹೋರಾಟ ನಡೆಸುವ ನಿರ್ಣಯ ಕೈಗೊಂಡರು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬುಧವಾರ ರಾತ್ರಿಯೇ ಅವರನ್ನು ಊರುಗಳಿಗೆ ಕಳುಹಿಸಿಕೊಡಲಾಯಿತು.

ಪಾದಯಾತ್ರಿಗಳ ಪಟ್ಟು: ‘ದುಡಿದ ಎರಡು ಕಾಸನ್ನು ಗಂಡ, ಮಕ್ಕಳು ಸಾರಾಯಿ ಅಂಗಡಿಗೆ ಇಟ್ರೆ ನಮ್ಮ ಬದುಕು ನಡೆಯೋದು ಹೇಗೆ? ನಮಗಾಗಿ ಅಲ್ಲ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮದ್ಯ ನಿಷೇಧ ಆಗಲೇಬೇಕು’ ಎಂದು ಸ್ವಾತಂತ್ರ್ಯ ಉದ್ಯಾನದಲ್ಲಿ
ಜಮಾಯಿಸಿದ್ದ ಪಾದಯಾತ್ರಿಗಳು ಪಟ್ಟು ಹಿಡಿದರು.

‘ಮದ್ಯ ನಿಷೇಧ‌ ಆಂದೋಲನ ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದ ಮಹಿಳೆಯರನ್ನು ಸ್ವಾತಂತ್ರ್ಯ ಉದ್ಯಾನದ ಬಳಿಯೇ ಪೊಲೀಸರು ತಡೆದರು. ಆಕ್ರೋಶ ವ್ಯಕ್ತಪಡಿಸಿದ
ಪ್ರತಿಭಟನಾನಿರತರು, ಸುಡು ಬಿಸಿಲಿನಲ್ಲಿ ನಡು ರಸ್ತೆಯಲ್ಲೇ ಕುಳಿತು ಹೋರಾಟ ಮುಂದುವರಿಸಿದರು.

‘ಪೊಲೀಸರೇ ನಮಗೆ ದಾರಿ ಬಿಡಿ, ಕುಮಾರಸ್ವಾಮಿ ಅವರನ್ನು ಭೇಟಿಯಾಗಬೇಕು. ನೀವು ಬಿಡದಿದ್ದರೆ ವಿಷ ಕೊಟ್ಟುಬಿಡಿ. ಇಲ್ಲಿಯೇ ಸಾಯುತ್ತೇವೆ’ ಎನ್ನುತ್ತಾ ವಿಧಾನಸೌಧದತ್ತ ಹೋಗಲು ಪಟ್ಟು ಹಿಡಿದರು.

ರಾಜ್ಯದ ಮೂಲೆ ಮೂಲೆಯಿಂದ ಸಿಡಿದೆದ್ದು ಬಂದಿದ್ದ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ರಾಜಧಾನಿಯ ಶಕ್ತಿಕೇಂದ್ರದತ್ತ ಪಾದಯಾತ್ರೆ ಮೂಲಕ ಬಂದಿದ್ದರು. ಮಂಗಳವಾರವೇ ನಗರಕ್ಕೆ ಬಂದ
ಪ್ರತಿಭಟನಾಕಾರರು, ಮಲ್ಲೇಶ್ವರದ ಸರ್ಕಾರಿ ಕ್ಷೇತ್ರೀಯ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ
ಉಳಿದುಕೊಂಡಿದ್ದರು. ಬೆಳಿಗ್ಗೆ ಸಮಾವೇಶ ನಡೆಸಿದ ಅವರು, ಬಳಿಕ ಪಾದಯಾತ್ರೆಯಲ್ಲಿ ವಿಧಾನಸೌಧದತ್ತ ಹೊರಟಿದ್ದರು.

ಸಚಿವ ಕಾಶೆಂಪೂರಗೆ ತರಾಟೆ:ಮುಖ್ಯಮಂತ್ರಿ ಪರವಾಗಿ ಮನವಿ ಸ್ವೀಕರಿಸಲು ಬಂದಿದ್ದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡರು.

‘ನಿಮ್ಮ ಬೇಡಿಕೆ ಏನೇ ಇದ್ದರೂ ಹೇಳಿ ಕುಮಾರಸ್ವಾಮಿ ಅವರಿಗೆ ತಲುಪಿಸುತ್ತೇನೆ’ ಎಂದು ಸಚಿವರು ಹೇಳಿದ ಕೂಡಲೇಜಾಥಾ ಮುಖ್ಯ ಸಂಘಟಕಿ ಸ್ವರ್ಣಾ ಭಟ್ ಅವರು, ‘ಸಚಿವರೇ, ನಾವು ನೂರಾರು ಕಿ.ಮೀ ರಕ್ತ ಸುಟ್ಟುಕೊಂಡು ಬಂದಿರುವುದು ಮನವಿ ಕೊಡಲು ಅಲ್ಲ. ಮುಖ್ಯಮಂತ್ರಿ ಬರುವವರೆಗೂ ಕದಲುವುದಿಲ್ಲ. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಸಂಜೆ ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರಸನ್ನ ಅವರ ನೇತೃತ್ವದ ನಿಯೋಗವನ್ನು ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆಸಲು ಕರೆದೊಯ್ದರು.

‘ಓಟಿಗಾಗಿ ನೀವು ಬಾಟ್ಲಿ ಕೊಡ್ತೀರಾ’
ಹೋರಾಟದ ಹಾದಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ ರಾಯಚೂರಿನ ರೇಣುಕಮ್ಮ ಅವರ ಭಾವಚಿತ್ರವನ್ನು ಪಾದಯಾತ್ರಿಗಳು ಹಿಡಿದು ಸಾಗಿದರು.

‘ಓಟಿಗಾಗಿ ನೀವು ಬಾಟ್ಲಿ ಕೊಡ್ತೀರ...’ ‘ನಮ್ಮ ಹೋರಾಟ ಮದ್ಯ ನಿಷೇಧದ ಹೋರಾಟ...’ ಹಾಡುಗಳನ್ನು ಹಾಡಿದರು. ತಮಟೆ ಬಾರಿಸಿದರು. ಒಂದು ಕಿ.ಮೀ.ನಷ್ಟು ಉದ್ದವಿದ್ದ ಪಾದಯಾತ್ರೆಯಲ್ಲಿ ಮಹಿಳೆಯರು ಎರಡು ಸಾಲಿನಲ್ಲಿ ಸಾಗಿದರು.

ಸಂಚಾರ ದಟ್ಟಣೆ ಆಗದಂತೆ ಆನಂದ ರಾವ್‌ ವೃತ್ತದ ಮೇಲ್ಸೇತುವೆಯಲ್ಲಿ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೂ ವಾಹನ ಸಂಚಾರ ನಿರ್ಬಂಧಿಸಿದ್ದ ಕಾರಣ ಆ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಂತಿದ್ದವು. ಮಲ್ಲೇಶ್ವರದ ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ಅಡ್ಡರಸ್ತೆ ಮತ್ತು ಶೇಷಾದ್ರಿಪುರ ಪೊಲೀಸ್‌ ಠಾಣೆಯ ಸುತ್ತಮುತ್ತ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೋರಾಟ ತೀವ್ರಗೊಂಡರೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ ಎರಡು ಜಲಫಿರಂಗಿ, ಆಶ್ರುವಾಯು ಪ್ರಯೋಗದ ವಾಹನ, ಮೂರು ಬಸ್‌ ಮುಂಜಾಗ್ರತೆ ವ್ಯವಸ್ಥೆ ಮಾಡಿಕೊಂಡಿದ್ದರು.

*
ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಸಾಧ್ಯವಿಲ್ಲ.‌ ಇದು ರಾಜ್ಯಕ್ಕೆ ಅತಿ ಹೆಚ್ಚು ಆದಾಯದ ಮೂಲ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಾಗುತ್ತದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

*
ರೆಸಾರ್ಟ್‌ನಲ್ಲಿ ಬೀರ್ ಬಾಟಲ್‌ಗಳಲ್ಲಿ ಹೊಡೆದುಕೊಂಡು ಆಸ್ಪತ್ರೆ ಸೇರಿದವರನ್ನು ವಿಚಾರಿಸುತ್ತಾರೆ. ನೂರಾರು ಕಿ.ಮೀ ಪಾದಯಾತ್ರೆ ನಡೆಸಿದ ತಾಯಂದಿರ ನೋವು ತಟ್ಟುತ್ತಿಲ್ಲ.
-ಸ್ವರ್ಣಾ ಭಟ್‌, ಜಾಥಾ ಮುಖ್ಯ ಸಂಘಟಕಿ

ಪ್ರತಿಭಟನೆಯ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಟ್ಟ ಪೊಲೀಸರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.