ADVERTISEMENT

ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ: 91ನೇ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆ –ಲಹರ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:10 IST
Last Updated 26 ಜುಲೈ 2024, 16:10 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

-ಪಿಟಿಐ ಚಿತ್ರ

ನವದೆಹಲಿ: ‘ಶಾಸಕರನ್ನು ಓಲೈಸಲು ಹಲವು ರಾಜ್ಯಗಳು ಮಿತಿಮೀರಿದ ಸಚಿವ ಸಂಪುಟ ದರ್ಜೆ ಸ್ಥಾನಗಳನ್ನು ಕಲ್ಪಿಸುತ್ತಿವೆ. ಇದು ಸಂವಿಧಾನದ 91ನೇ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆ ಹಾಗೂ ಸರ್ಕಾರಿ ಖಜಾನೆಗೆ ಹೊರೆ’ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್‌ ಸರೋಯಾ ಪ್ರತಿಪಾದಿಸಿದರು. 

ADVERTISEMENT

ರಾಜ್ಯಸಭೆಯಲ್ಲಿ ವಿಶೇಷ ಪ್ರಸ್ತಾವ ಮಂಡಿಸಿದ ಲಹರ್ ಸಿಂಗ್, ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಸಚಿವ ಸಂಪುಟದ ಹೊರತಾಗಿ 56 ಮಂದಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದು, ಇದು ಸಂವಿಧಾನದ ಸದಾಶಯಗಳಿಗೆ ವಿರುದ್ಧ. ಜೊತೆಗೆ ಇದು ಆರ್ಥಿಕ ಅಶಿಸ್ತಿಗೆ ಕಾರಣವಾಗಿದೆ’ ಎಂದು ಗಮನ ಸೆಳೆದರು. 

‘2003ರ 91ನೇ ಸಾಂವಿಧಾನಿಕ ತಿದ್ದುಪಡಿಯ ಪ್ರಕಾರ, ಯಾವುದೇ ಸರ್ಕಾರದಲ್ಲಿ ಪ್ರಧಾನಮಂತ್ರಿ/ಮುಖ್ಯಮಂತ್ರಿ ಸೇರಿದಂತೆ ಒಟ್ಟು ಸಂಪುಟ ಸಚಿವರ ಸಂಖ್ಯೆ, ಲೋಕಸಭೆ ಅಥವಾ ರಾಜ್ಯ ಶಾಸಕಾಂಗದ ಒಟ್ಟು ಬಲದ ಶೇ 15ಕ್ಕೆ ಸೀಮಿತವಾಗಿರಬೇಕು. ಆದರೆ, ಕೆಲವು ರಾಜ್ಯಗಳಲ್ಲಿ ಈ ಸಾಂವಿಧಾನಿಕ ಮಿತಿಯನ್ನು ಮೀರಿ ಸಂಪುಟ ದರ್ಜೆ ನೇಮಕಾತಿಗಳು ನಡೆದಿರುವ ಉದಾಹರಣೆಗಳನ್ನು ನೋಡುತ್ತಿದ್ದೇವೆ’ ಎಂದರು. 

‘ಸಾಂವಿಧಾನಿಕ ಆಶಯಗಳನ್ನು ಮೀರಿ, ಯಾವುದೇ ಕಾರಣಕ್ಕೂ ಕೂಡ ಸಂಪುಟ ದರ್ಜೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತರಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.