ADVERTISEMENT

ಕೆರೆ ಹೂಳೆತ್ತಲು, ಆಟೋ, ಸ್ಕೂಟರ್‌, ಕಾರು: ₹3.99 ಕೋಟಿ ಅಕ್ರಮ

ಕೆರೆ ಸಂಜೀವಿನಿ ಯೋಜನೆ: ಜೆಸಿಬಿ ಬದಲಿಗೆ ಪ್ರಯಾಣಿಕ ವಾಹನ ಬಳಕೆ ₹3.99 ಕೋಟಿ ಅಕ್ರಮ

ಎಸ್.ರವಿಪ್ರಕಾಶ್
Published 26 ಜುಲೈ 2024, 4:38 IST
Last Updated 26 ಜುಲೈ 2024, 4:38 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಹೂಳೆತ್ತಲು ಜೆಸಿಬಿ ಯಂತ್ರ, ಲಾರಿಗಳಷ್ಟೇ ಅಲ್ಲ ಕಾರು, ಸ್ಕೂಟರ್‌, ಸಣ್ಣ ಗಾತ್ರದ ಗೂಡ್ಸ್‌ ವಾಹನ, ಆಟೊ ರಿಕ್ಷಾಗಳನ್ನೂ ಬಳಸಲಾಗಿದೆ. ಅವುಗಳ ಹೆಸರಿಗೆ ಕೋಟಿಗಟ್ಟಲೆ ಬಿಲ್‌ ಕೂಡ ಪಾವತಿಯಾಗಿದೆ.

ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರದ ಮೂಲಕ 20 ಜಿಲ್ಲೆಗಳಲ್ಲಿ ನಡೆದ ಕೆರೆಗಳ ಹೂಳು ತೆಗೆಯುವ ಕಾಮಗಾರಿಗಳಲ್ಲಿ ಪ್ರಯಾಣಿಕ ವಾಹನಗಳು, ಸಣ್ಣ ಗಾತ್ರದ ಸರಕು ಸಾಗಣೆ ವಾಹನಗಳ ನೋಂದಣಿ ಸಂಖ್ಯೆ ದಾಖಲಿಸಿ ₹3.99 ಕೋಟಿ ಬಿಲ್‌ ಪಾವತಿಸಿರುವುದು ಮಹಾಲೇಖಪಾಲರು (ಸಿಎಜಿ) ನಡೆಸಿರುವ ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗವಾಗಿದೆ.

ADVERTISEMENT

ಸಿಎಜಿ ಲೆಕ್ಕಪರಿಶೋಧನಾ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೆರೆಗಳ ಹೂಳು ತೆಗೆಯುವ ಕಾಮಗಾರಿಗಳ ಬಿಲ್‌ ಪಾವತಿಗಳಲ್ಲಿ ಅಕ್ರಮ ನಡೆದಿರುವುದನ್ನು ವರದಿಯು ದೃಢಪಡಿಸಿದೆ.

ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರವು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಸಂಸ್ಥೆ. ಸಣ್ಣ ನೀರಾವರಿ ಇಲಾಖೆ ಟೆಂಡರ್‌ ಪ್ರಕ್ರಿಯೆ ನಡೆಸಿ ವಿವಿಧ ಏಜೆನ್ಸಿಗಳ ಮೂಲಕ ಕೆರೆ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ, ಬಿಲ್‌ ಪಾವತಿ ಮಾಡುವ ಅಧಿಕಾರ ಇರುವುದು ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ಮಾತ್ರ.

‘ಕೆರೆ ಸಂರಕ್ಷಣಾ ಪ್ರಾಧಿಕಾರದ ವತಿಯಿಂದ 2020–21ರಿಂದ 2022–23ರ ನಡುವೆ ರಾಜ್ಯದ ಸುಮಾರು 173 ಕೆರೆಗಳ ಹೂಳು ತೆಗೆಯಲಾಗಿದೆ. ಹೂಳು ತೆಗೆದ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದಾಗ, 174 ಕೆರೆಗಳ ಪೈಕಿ 108 ಕೆರೆಗಳ ಕಾಮಗಾರಿಗಳ ಬಿಲ್‌ ಪಾವತಿಯಲ್ಲಿ ಲೋಪಗಳಿರುವುದು ಕಂಡುಬಂದಿದೆ’ ಎಂಬ ಉಲ್ಲೇಖ ಲೆಕ್ಕಪರಿಶೋಧನಾ ವರದಿಯಲ್ಲಿದೆ.

108 ಕೆರೆಗಳಲ್ಲಿ ಹೂಳನ್ನು ತೆಗೆಯಲು 230 ಜೆಸಿಬಿ, ಹಿಟಾಚಿ ಎಕ್ಸ್‌ಕವೇಟರ್‌ ಬಳಸಿದ್ದು, 38,197 ಗಂಟೆಗಳ ಕೆಲಸ ಮಾಡಲಾಗಿದೆ ಎಂದು ಬಿಲ್‌ ಸೃಜಿಸಲಾಗಿದೆ. ಇದಕ್ಕಾಗಿ ₹3.19 ಕೋಟಿ ವೆಚ್ಚವಾಗಿದೆ ಆಗಿದೆ. ಹೂಳು ತೆಗೆಯಲು ಬಳಸಿರುವ 191 ಜೆಸಿಬಿಗಳ ಮಾಲೀಕತ್ವದ ದಾಖಲೆ, ಗುತ್ತಿಗೆ ಕರಾರು, ನೋಂದಣಿ ಪ್ರಮಾಣಪತ್ರದ ಪುಸ್ತಕಗಳ ದಾಖಲೆಗಳನ್ನು ಸಲ್ಲಿಸಿಲ್ಲ.

ಲಾಗ್‌ಬುಕ್‌ನಲ್ಲಿ ನಮೂದಿಸಿರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಆರ್‌ಟಿಓ ದಾಖಲೆಗಳಲ್ಲಿ ತಾಳೆ ಹಾಕಿದಾಗ ಅವು ಪ್ರಯಾಣಿಕ ವಾಹನಗಳಾದ ಕಾರು, ಸ್ಕೂಟರ್‌, ಮಾರುತಿ ವ್ಯಾನ್‌, ರಿಟ್ಜ್‌ ಕಾರು, ಆಟೊ ರಿಕ್ಷಾ ಮುಂತಾದವು ಎಂಬುದು ಖಚಿತವಾಗಿದೆ. ಈ 191 ವಾಹನಗಳಿಗೆ ಪಾವತಿಸಿದ ಬಿಲ್‌ ಮೊತ್ತವೇ ₹2.62 ಕೋಟಿ ಎಂದು ವರದಿ ವಿವರಿಸಿದೆ.

ಒಂದೇ ನೋಂದಣಿ ಸಂಖ್ಯೆಯ ಮೂರು ಜೆಸಿಬಿಗಳು ಒಂದೇ ದಿನ ಒಂದೇ ಸಮಯದಲ್ಲಿ ಬೇರೆ ಬೇರೆ ಕೆರೆಗಳಲ್ಲಿ ಕೆಲಸ ಮಾಡಿವೆ ಎಂದು ಉಲ್ಲೇಖಿಸಿ ಬಿಲ್‌ ಸೃಜಿಸಿರುವುದನ್ನೂ ಲೆಕ್ಕಪರಿಶೋಧಕರು ಪತ್ತೆ ಮಾಡಿದ್ದಾರೆ. ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂದೂ ವರದಿಯಲ್ಲಿ ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ 263 ಕೆರೆಗಳ ಪೈಕಿ 51 ಕೆರೆಗಳ ಹೂಳು ತೆಗೆಯಲು 129 ಜೆಸಿಬಿ, ಎಕ್ಸ್‌ಕವೇಟರ್‌ ಬಳಸಿ 23,088 ಗಂಟೆ ಕೆಲಸ ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಜಿಸಲಾಗಿದೆ. ಇದಕ್ಕೆ ₹1.92 ಕೋಟಿ ಬಿಲ್‌ ಮಾಡಲಾಗಿದೆ. ಆದರೆ ಲಾಗ್‌ಪುಸ್ತಕದಲ್ಲಿ ದಾಖಲು ಮಾಡಿದ 65 ಜೆಸಿಬಿಗಳ ನೋಂದಣಿ ಸಂಖ್ಯೆಯನ್ನು ಆರ್‌ಟಿಒದಲ್ಲಿ ತಾಳೆ ಹಾಕಿದಾಗ ಅವು ಪ್ರಯಾಣಿಕ ವಾಹನಗಳೆಂದು ತಿಳಿದಿದೆ. ಈ 65 ಯಂತ್ರಗಳನ್ನು ಬಳಸಿ ಹೂಳು ತೆಗೆದ ಕಾಮಗಾರಿಗಳ ಬಿಲ್‌ ಮೊತ್ತ ₹1.02 ಕೋಟಿ ಎಂದು ವರದಿ ಹೇಳಿದೆ. ಬೇರೊಂದು ಕಾಮಗಾರಿಯಲ್ಲಿ ಇದೇ ರೀತಿ ₹35 ಲಕ್ಷ ಬಿಲ್‌ ಮಾಡಲಾಗಿದೆ.

ಲೋಕಾಯುಕ್ತಕ್ಕೆ ದೂರು:

ಕೆರೆ ಸಂಜೀವಿನಿ ಯೋಜನೆಯಲ್ಲಿ ನಡೆದಿರುವ ಅಕ್ರಮಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ತಜ್ಞ ವೆಂಕಟರಾಮಯ್ಯ ಅವರೇ ಕಾರಣ ಎಂದು ತುಮಕೂರು ಜಿಲ್ಲಾ ಕೆರೆ ಅಭಿವೃದ್ಧಿ ಸಂಘದ ಪದಾಧಿಕಾರಿ ಸಂಜೀವಯ್ಯ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿವರಣೆ ನೀಡುವಂತೆ ಲೋಕಾಯುಕ್ತರು ವೆಂಕಟರಾಮಯ್ಯ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.