ADVERTISEMENT

ಕೃಷಿ ಸಚಿವರ ಮೇಲೆ ಕೆರೆ ಜಾಗ ಒತ್ತುವರಿ ದೂರು: ಪರಿಶೀಲನೆಗೆ ಸೂಚನೆ

ಮಾಕಳಿ ಕೆರೆಯ 3 ಎಕರೆ 31 ಗುಂಟೆ ಜಾಗ

ರಾಜೇಶ್ ರೈ ಚಟ್ಲ
Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಬೆಂಗಳೂರು: ‘ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಮಾಕಳಿ ಗ್ರಾಮದಲ್ಲಿ 3 ಎಕರೆ 31 ಗುಂಟೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ, ಪರಿಶೀಲನೆ ನಡೆಸುವಂತೆ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ. 

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇರುವ ಹಿಮಾಲಯ ಡ್ರಗ್ ಹೌಸ್‌ ಸಮೀಪದ ಕೆರೆ ಅಂಗಳ ಒತ್ತುವರಿ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಈ ಜಮೀನು ₹100 ಕೋಟಿ ಬೆಲೆ ಬಾಳುತ್ತದೆ ಎಂದೂ ದೂರಿನಲ್ಲಿ ಹೇಳಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿ, ಗೋಪಿನಾಥ್ ತಿಮ್ಮಪ್ಪ ಗೌಡ ಅವರು ಇದೇ 18ರಂದು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಜೊತೆಗೆ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಪಡೆದ ನಕ್ಷೆ, ದಿಶಾಂಕ್‌ ಆ್ಯಪ್‌ನಿಂದ ಪಡೆದ ದಾಖಲೆ ಮತ್ತು ಪಹಣಿ (ಆರ್‌ಟಿಸಿ) ಪ್ರತಿಯನ್ನೂ ಸಲ್ಲಿಸಿದ್ದಾರೆ. 

ADVERTISEMENT

ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗೂ ಗೋಪಿನಾಥ್ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ‍ಪರಿಶೀಲಿಸಿ ವರದಿ ಸಲ್ಲಿಸುವಂತೆ, ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ಗೆ ಇಲಾಖೆ ಕಾರ್ಯದರ್ಶಿ ಸೂಚಿಸಿದ್ದಾರೆ. ಈ ಎರಡೂ ದೂರು
ಗಳ ಪ್ರತಿಗಳೂ ‘ಪ್ರಜಾವಾಣಿ’ ಲಭ್ಯವಾಗಿವೆ.

ದೂರಿನಲ್ಲಿ ಏನಿದೆ:

‘ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸಿದ್ಧಪಡಿಸಿರುವ ಮಾಕಳಿ ಗ್ರಾಮದ ನಕ್ಷೆಯಲ್ಲಿ ಸರ್ವೆ ನಂಬರ್ 13ರಲ್ಲಿ ಕೆರೆ ಇರುವ ಬಗ್ಗೆ ಸ್ಪಷ್ಟವಾಗಿದೆ. ಈ ಜಾಗದ ಮಾಲೀಕತ್ವವು 2021ರ ಏಪ್ರಿಲ್‌ 27ರಂದು ನೋಂದಾಯಿತ ದಾನಪತ್ರದ (ಸಂಖ್ಯೆ ಡಿಎಸ್‌ಪಿ–1–00523–2021–22) ಮೂಲಕ ವರ್ಗಾವಣೆಯಾಗಿದೆ. ಎನ್‌. ಚಲುವರಾಯಸ್ವಾಮಿ ಅವರು ತಮ್ಮ ಸಹೋದರ ಲಕ್ಷ್ಮೀ ಕಾಂತ ಅವರಿಂದ ಈ ಜಾಗವನ್ನು ದಾನವಾಗಿ
ಪಡೆದಿದ್ದಾರೆ.

ಲಕ್ಷ್ಮಿಕಾಂತ ಅವರು ಎ.ಎಚ್. ತಿಮ್ಮರಾಯಪ್ಪ ಅವರಿಂದ 2007ರ ಮಾರ್ಚ್‌ 3ರಂದು ಬೆಂಗಳೂರು ಉತ್ತರ ಉಪ ನೋಂದಣಿ ಕಚೇರಿಯಲ್ಲಿ (ಪೀಣ್ಯ) ನೋಂದಾಯಿತ ಡೀಡ್ (ಸಂಖ್ಯೆ ಬಿಎಲ್‌ಎನ್‌–1–69587–2006–07) ಮೂಲಕ ಈ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದರು. ಅದಕ್ಕೆ ಮೊದಲು, ತಿಮ್ಮರಾಯಪ್ಪ ಅವರು ತಮ್ಮ ಪಹಣಿಯಲ್ಲಿ ಆರ್‌ಆರ್‌ 317ನಲ್ಲಿ (ಎಂಆರ್‌ ನಂ 11/1981–82) ಈ ಜಾಗದ ಸ್ವಾಧೀನ ಹೊಂದಿದ್ದರು.

ದಾಸನಪುರ ಉಪ ನೋಂದಣಿ ಕಚೇರಿಯಲ್ಲಿ 2008ರ ಮೇ 29ರಂದು ನೋಂದಾಯಿತ ಅಡಮಾನ ಕರಾರು ಪತ್ರ (ಡಿಎಸ್‌ಪಿ–1–00213– 2008–09) ಮೂಲಕ ಈ ಜಾಗವನ್ನು ಲಕ್ಷ್ಮಿಕಾಂತ ಅವರು ಕೆನರಾ ಬ್ಯಾಂಕಿನಲ್ಲಿ ಅಡ ಇಟ್ಟು ₹1.24 ಕೋಟಿ ಸಾಲ ಪಡೆದಿದ್ದರು. ನಂತರ, ದಾಸನಪುರ ಉಪ ನೋಂದಣಿ ಕಚೇರಿಯಲ್ಲಿ 2009ರ ಮಾರ್ಚ್‌ 17ರಂದು ನೋಂದಾಯಿತ ಅಡಮಾನ ಕರಾರು ಪತ್ರ (ಡಿಎಸ್‌ಪಿ–1–07197– 2008–09) ಮೂಲಕ ಮತ್ತೊಮ್ಮೆ ಇದೇ ಜಾಗವನ್ನು ಲಕ್ಷ್ಮಿಕಾಂತ ಅವರು ಕೆನರಾ ಬ್ಯಾಂಕಿನಲ್ಲಿ ಅಡ ಇಟ್ಟು ₹42.45 ಲಕ್ಷ ಸಾಲ ಪಡೆದಿದ್ದರು.

ನೋಂದಾಯಿತ ಡಿಸ್ಚಾರ್ಜ್‌ ಡೀಡ್‌  (ಡಿಎಸ್‌ಪಿ–1–00059–2021–22) ಮೂಲಕ 2021ರ ಮಾರ್ಚ್‌ 25ರಂದು ಬ್ಯಾಂಕಿನಲ್ಲಿದ್ದ ಸಾಲವನ್ನು ಮುಕ್ತಾಯಗೊಳಿಸಲಾಗಿದೆ.

ಜಾಗದ ಮಾಲೀಕತ್ವವು ಕೆನರಾ ಬ್ಯಾಂಕಿನಿಂದ ಲಕ್ಷ್ಮಿಕಾಂತ ಅವರಿಗೆ ವರ್ಗಾವಣೆ ಆಗಿತ್ತು. ಆ ಬಳಿಕ, ಲಕ್ಷ್ಮಿಕಾಂತ ಅವರು ತಮ್ಮ ಸಹೋದರ ಎನ್‌. ಚಲುವರಾಯಸ್ವಾಮಿ ಅವರಿಗೆ 2021ರ ಏಪ್ರಿಲ್‌ 27ರಂದು ಮಾಕಳಿ ಗ್ರಾಮದ ಸರ್ವೆ ನಂಬರ್‌ 13ರ 3 ಎಕರೆ 31 ಗುಂಟೆ ಜಾಗವನ್ನು ದಾನವಾಗಿ
ನೀಡಿದ್ದಾರೆ.

‘ತನಿಖೆ ಮಾಡಲಿ ಬಿಡಿ’

ಆ ರೀತಿ ಏನೂ ಇಲ್ಲ. ಜಾಗದ ಮಾಲೀಕರಿಂದ ತೆಗೆದುಕೊಂಡಿರುವುದು ಅಷ್ಟೆ. ಸುಮ್ಮನೆ ಆರೋಪ ಮಾಡುತ್ತಾರೆ. ಈ ಜಾಗದ ಪಕ್ಕದಲ್ಲಿರುವ ಹಿಮಾಲಯ ಡ್ರಗ್ ಹೌಸ್‌ ಸೇರಿದಂತೆ ಇಡೀ ಪ್ರದೇಶ ಸ್ವಲ್ಪ ಸಮಸ್ಯೆಯಲ್ಲಿದೆ. ಬೇರೆಯವರಿಂದ ಬಂದಿರುವುದು. ನನ್ನ ಸ್ನೇಹಿತರಿಗೆ (ಎಚ್‌.ಡಿ. ಕುಮಾರಸ್ವಾಮಿ) ಯಾವುದೂ ಸಿಗುತ್ತಿಲ್ಲವಲ್ಲ. ಅದಕ್ಕೆ ಹುಡುಕುತ್ತಿದ್ದಾರೆ. ತನಿಖೆ ಮಾಡಲಿ. ತೊಂದರೆ ಇಲ್ಲ.

-ಎನ್‌. ಚಲುವರಾಯಸ್ವಾಮಿ, ಕೃಷಿ ಸಚಿವ

‘ಜಮೀನು ಮೌಲ್ಯ ₹100 ಕೋಟಿ’

‘ಸದ್ಯ ಈ ಜಾಗದ ಮೌಲ್ಯ ಸುಮಾರು ₹100 ಕೋಟಿಯಷ್ಟಿದೆ. ಜಾಗವು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಮೌಲ್ಯ ಇನ್ನಷ್ಟು ಹೆಚ್ಚಲಿದೆ. ಕೆರೆ ಜಾಗ ಒತ್ತುವರಿ ತೆರವಿಗೆ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಈ ಜಾಗದಲ್ಲಿ ಕಾನೂನು ಉಲ್ಲಂಘಿಸಿ ನಿರ್ಮಿಸಿದ ಶೆಡ್ಡ್, ವೇರ್‌ಹೌಸ್‌ಗಳನ್ನು ತೆರವು ಮಾಡಬೇಕು. ದಾಖಲೆಗಳಲ್ಲಿ ಅಕ್ರಮವಾಗಿ ಜಾಗದ ಮಾಲೀಕರ ಹೆಸರು ನಮೂದಿಸಿದ ಕಂದಾಯ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಗೋಪಿನಾಥ್‌ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.