ADVERTISEMENT

ಸನ್ಯಾಸ ದೀಕ್ಷೆ ಪದ್ಧತಿ ಸುಧಾರಣೆಗೆ ನಾಂದಿ

ಶಿರೂರು ಸ್ವಾಮೀಜಿ ಜೀವನ ಶೈಲಿ, ಅವರ ಸಾವು, ಸನ್ಯಾಸ ಸ್ವೀಕಾರ ಕುರಿತ ಚರ್ಚೆಗೆ ಅವಕಾಶ

ಕೋಡಿಬೆಟ್ಟು ರಾಜಲಕ್ಷ್ಮಿ
Published 20 ಜುಲೈ 2018, 19:02 IST
Last Updated 20 ಜುಲೈ 2018, 19:02 IST
ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಲಕ್ಷ್ಮೀವರ ತೀರ್ಥ ಸ್ವಾಮೀಜಿ    

ಮಂಗಳೂರು: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಜೀವನ ಶೈಲಿ ಮತ್ತು ಅವರ ಸಾವು ಸನ್ಯಾಸ ದೀಕ್ಷೆಯ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದೆ. ಲೌಕಿಕ ಅಥವಾ ಅಧ್ಯಾತ್ಮದ ಅರಿವೇ ಇಲ್ಲದ‌ಬಾಲ್ಯದಲ್ಲಿಯೇ ಸನ್ಯಾಸ ದೀಕ್ಷೆ ಪಡೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ವ್ಯಾಪಕ ಚರ್ಚೆಗೊಳಗಾಗಿತ್ತು.

ಇಂತಹ ಪ್ರಶ್ನೆಗಳಿಗೆ ಎಡೆಮಾಡಿಕೊಡುವ ಘಟನೆಗಳೂ ಅಷ್ಟಮಠದಲ್ಲಿ ನಡೆದಿದ್ದು ವಿವಾದ ಸೃಷ್ಟಿಯಾಗಿತ್ತು. ಪ್ರಸ್ತುತ ವಿವಿಧ ಮಠಗಳ ಉತ್ತರಾಧಿಕಾರ ವಹಿಸಿಕೊಂಡ ಯತಿಗಳು ಬಾಲ ಸನ್ಯಾಸಿಗಳಾಗಿ ದೀಕ್ಷೆ ಪಡೆದವರಲ್ಲ. ಔಪಚಾರಿಕ ಮತ್ತು ಅಧ್ಯಾತ್ಮ ಶಿಕ್ಷಣ ಪಡೆದ ಬಳಿಕ ಮಠದ ಉತ್ತರಾಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ಶಿರೂರು ಮಠದ ಉತ್ತರಾಧಿಕಾರಿ ನೇಮಕದ ವಿಷಯದಲ್ಲಿಯೂ ಸುಶಿಕ್ಷಿತ ಬ್ರಹ್ಮಚಾರಿಯಾಗಬೇಕು ಎಂಬ ನಿರೀಕ್ಷೆಯಷ್ಟೇ ಇದೆ. ಬಾಲ ಸನ್ಯಾಸ ಸ್ವೀಕಾರ ಪದ್ಧತಿ ಈಗಿಲ್ಲ. ಕಾಲ ಬದಲಾದಂತೆ ಸನ್ಯಾಸ ಸ್ವೀಕಾರ ಪ್ರಕ್ರಿಯೆಯಲ್ಲಿಯೂ ಅನೇಕ ಸುಧಾರಣೆಗಳು ಆಗಿವೆ ಎನ್ನುತ್ತಾರೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ.

‘ಅಷ್ಟಮಠಗಳ ಪೈಕಿ ಹಲವು ಮಠಗಳ ಉತ್ತರಾಧಿಕಾರಿ ನೇಮಕ ಸಂದರ್ಭದಲ್ಲಿ ಅಧ್ಯಾತ್ಮ ಶಿಕ್ಷಣ ಪಡೆದ, ಧಾರ್ಮಿಕತೆಯ ಒಲವಿರುವ ಪ್ರೌಢ ಯತಿಗಳನ್ನೇ ನೇಮಕ ಮಾಡಲಾಗಿತ್ತು. ಬಾಲ್ಯಾವಸ್ಥೆಯಲ್ಲಿಯೇ ಸನ್ಯಾಸ ದೀಕ್ಷೆ ನೀಡುವ ಪದ್ಧತಿ ಈಗಿಲ್ಲ’ ಎಂದು ಅವರು ‘ ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸನ್ಯಾಸ ಮತ್ತು ಮಠಾಧಿಪತ್ಯದ ನಡುವೆ ಅಗಾಧ ಅಂತರವಿದೆ. ಸನ್ಯಾಸದ ಒಲವು ಇರುವವರು ಮಠಾಧಿಪತಿಗಳಾಗಿ ನಿಭಾಯಿಸಬಲ್ಲರು ಎನ್ನುವಂತಿಲ್ಲ. ಆದ್ದರಿಂದ ನಿರ್ವಹಣಾ ಕೌಶಲ ಇರುವವರಷ್ಟೇ ಮಠದ ಸಾರಥ್ಯವನ್ನು ವಹಿಸಿಕೊಳ್ಳಬಲ್ಲರು.

ಶಿರೂರು ಮಠದ ನೇತೃತ್ವವನ್ನು ಲಕ್ಷ್ಮೀವರತೀರ್ಥ ಸ್ವಾಮೀಜಿ ವಹಿಸಿಕೊಳ್ಳುವ ಮುನ್ನ ಅವರ ಪೂರ್ವಾಶ್ರಮದ ಅಣ್ಣ ಲಕ್ಷ್ಮೀ ಮನೋಜ್ಞ ತೀರ್ಥ ಸ್ವಾಮೀಜಿ ವಹಿಸಿಕೊಂಡಿದ್ದರು. ಆದರೆ ಮಠದೊಳಗಿನ ಬಂಧನವನ್ನು ಮೀರುವ ಆಸೆಯಿಂದ ಅವರು ಶಿರೂರು ಮಠ ತ್ಯಜಿಸಿ ಬರಿಗೈಲಿ ಧಾರವಾಡ ಸೇರಿ ಸಾಹಿತ್ಯ, ಕಲೆ ಮತ್ತು ವೈಚಾರಿಕ ಸಾಧನೆಯಲ್ಲಿ ತೊಡಗಿಸಿಕೊಂಡರು. ಮದುವೆ ಆದರೂ ಅವರು ಕೊನೆಗಾಲದಲ್ಲಿ ಸನ್ಯಾಸಿಯಂತೆಬದುಕಿದರು. ಪೇಜಾವರ ಮಠದ ವಿಶ್ವವಿಜಯ ತೀರ್ಥ ಸ್ವಾಮೀಜಿ ಅವರು ವಿದೇಶ ಯಾತ್ರೆ ಮಾಡಿ ಮಠದ ರಿವಾಜು ಮುರಿದ ಕಾರಣದಿಂದಾಗಿ ಮಠದಿಂದ ಹೊರನಡೆಯಬೇಕಾಗಿ ಬಂತು. ಪಲಿಮಾರು ಮಠದ ರಘೋತ್ತಮ ತೀರ್ಥ ಸ್ವಾಮೀಜಿ ಅವರೂ ಮಠದಿಂದ ಹೊರನಡೆದು ಅಮೆರಿಕದಲ್ಲಿ ದುಡಿಮೆ ಮಾಡಿದರು.

ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ವಿದೇಶ ಪ್ರವಾಸ ಮಾಡಿದ್ದರಿಂದ ಕೃಷ್ಣ ದೇವರನ್ನು ಸ್ಪರ್ಶಿಸಿ ಪೂಜೆ ಮಾಡುವ ಅವಕಾಶ ಕಳೆದುಕೊಂಡವರು. ಸಮುದ್ರದಾಟಿ ವಿದೇಶ ಪ್ರವಾಸ ಮಾಡುವ ಸಂದರ್ಭದಲ್ಲಿ ಆಚಾರ ಪಾಲಿಸುವುದು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಹಿಂದಿನ ಕಾಲದಲ್ಲಿ ರೂಪುಗೊಂಡ ನಿಯಮ ಉಡುಪಿಯಲ್ಲಿ ಇಂದಿಗೂ ಬದಲಾಗಿಲ್ಲ ಎನ್ನುತ್ತಾರೆ ಮಠದ ಸಹಾಯಕ ವರ್ಗದವರು.

ಆದರೆ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮದುವೆಯಾಗಿದ್ದರು ಮತ್ತು ಮದ್ಯಸೇವಿಸುತ್ತಿದ್ದರು ಎಂಬ ಕಾರಣಕ್ಕೆ ಕೃಷ್ಣ ಪೂಜೆಯ ಅವಕಾಶ ಕಳೆದುಕೊಂಡಿದ್ದರು. ಚುನಾವಣೆಗೆ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ‘ನಾನೆಂದೂ ವಿದೇಶ ಪ್ರವಾಸ ಮಾಡುವುದಿಲ್ಲ. ಕೃಷ್ಣಪೂಜೆಯೇ ನನ್ನ ಆದ್ಯತೆ’ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಶಿರೂರು ಮಠದ ಉತ್ತರಾಧಿಕಾರಿ ನೇಮಕದ ಸಂದರ್ಭ ಮಠದ ರೀತಿರಿವಾಜುಗಳಲ್ಲಿ ಸುಧಾರಣೆ ಆದೀತೆ ಎಂಬ ನಿರೀಕ್ಷೆ ಮಠದ ಭಕ್ತರಲ್ಲಿ ಮೂಡಿದೆ.
**
ಗೃಹಸ್ಥಾಶ್ರಮ–ಸನ್ಯಾಸ

ಗೃಹಸ್ಥಾಶ್ರಮವನ್ನು ಪೂರ್ಣಗೊಳಿಸಿದ ಬಳಿಕವೇಮಂತ್ರಾಲಯದಲ್ಲಿ ‘ಸ್ವಾಮೀಜಿ’ ಪಟ್ಟಕ್ಕೆ ಅರ್ಹತೆ ದೊರೆಯುತ್ತದೆ.ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಮುದಾಯದಲ್ಲಿ ಜೀವನದ ಕೆಲವು ವರ್ಷಗಳನ್ನು ಧಾರ್ಮಿಕ ಜೀವನಕ್ಕೆ ಮೀಸಲಿಡುವ ಪದ್ಧತಿ ಇದೆ. ಅಲ್ಲದೆ ಯಾಜಕ ದೀಕ್ಷೆ ಪಡೆದರೂ ಸಂಸಾರ ನಡೆಸುವ ಅವಕಾಶವಿದೆ. ಮುಸ್ಲಿಂ ಸಮುದಾಯದಲ್ಲಿ ಸನ್ಯಾಸತ್ವದ ಪರಿಕಲ್ಪನೆ ಇಲ್ಲ.
**
ತತ್ವಶಾಸ್ತ್ರ, ದೇವಶಾಸ್ತ್ರ ನಂತರ ಯಾಜಕ ದೀಕ್ಷೆ

‘ಕ್ರಿಶ್ಚಿಯನ್‌ ಸಮುದಾಯದಲ್ಲಿ ದೈವ‌ಪ್ರೇರಣೆಯಾದ ಬಳಿಕ ಸನ್ಯಾಸ ಆಥವಾ ಯಾಜಕ ದೀಕ್ಷೆ ಪಡೆಯುವುದು ರೂಢಿ. 10ನೇ ತರಗತಿಯ ಬಳಿಕ ಧಾರ್ಮಿಕ ಶಿಕ್ಷಣ ಆರಂಭವಾಗುತ್ತದೆ. ತತ್ವಶಾಸ್ತ್ರ, ದೇವಶಾಸ್ತ್ರ ಸೇರಿದಂತೆ ಹಲವು ಹಂತಗಳನ್ನು ದಾಟಿದ ಬಳಿಕ ಯಾಜಕ ದೀಕ್ಷೆ ದೊರೆಯುತ್ತದೆ’ ಎಂದು ಮಂಗಳೂರಿನ ನಿಯೋಜಿತ ಬಿಷಪ್‌ ಡಾ.ಪೀಟರ್‌ ಪಾವ್ಲ್‌ ಸಲ್ಡಾನ ಹೇಳಿದರು.
**
ತರ್ಕ, ತತ್ವಶಾಸ್ತ್ರದ ಕಲಿಕೆ ನಂತರ ದೀಕ್ಷೆ

ಜೈನ ಸಮುದಾಯದಲ್ಲಿ ಉಪನಯನ ಆದ ನಂತರ ಅಂದರೆ ಸುಮಾರು 12ನೇ ವಯಸ್ಸಿಗೆ ಧಾರ್ಮಿಕ ಪಾಠಪ್ರವಚನ ಆರಂಭವಾಗುತ್ತದೆ. 11 ಪ್ರತಿಮಾ ನೆಲೆಗಳನ್ನು ದಾಟಿದ ಬಳಿಕ 18ರ ವಯಸ್ಸಿನಲ್ಲಿ ತರ್ಕ ಮತ್ತು ತತ್ವಶಾಸ್ತ್ರದ ಕಲಿಕೆ ಶುರುವಾಗುತ್ತದೆ. ಬಳಿಕವಷ್ಟೇ ಪೀಠಾಧಿಪತಿಗೆ ನೀಡುವ ‘ವಿಚಾರಪಟ್ಟದ ಕ್ಷುಲ್ಲಕ ದೀಕ್ಷೆ’ ನೀಡಲಾಗುತ್ತದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
**
ಜೈನ ಸಮುದಾಯದಲ್ಲಿ ಉಪನಯನ ಆದ ನಂತರ ಅಂದರೆ ಸುಮಾರು 12ನೇ ವಯಸ್ಸಿಗೆ ಧಾರ್ಮಿಕ ಪಾಠಪ್ರವಚನ ಆರಂಭವಾಗುತ್ತದೆ. 11 ಪ್ರತಿಮಾ ನೆಲೆಗಳನ್ನು ದಾಟಿದ ಬಳಿಕ 18ರ ವಯಸ್ಸಿನಲ್ಲಿ ತರ್ಕ ಮತ್ತು ತತ್ವಶಾಸ್ತ್ರದ ಕಲಿಕೆ ಶುರುವಾಗುತ್ತದೆ. ಬಳಿಕವಷ್ಟೇ ಪೀಠಾಧಿಪತಿಗೆ ನೀಡುವ ‘ವಿಚಾರಪಟ್ಟದ ಕ್ಷುಲ್ಲಕ ದೀಕ್ಷೆ’ ನೀಡಲಾಗುತ್ತದೆ.
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ,ಮೂಡುಬಿದಿರೆ ಜೈನ ಮಠ
**
ಕ್ರಿಶ್ಚಿಯನ್‌ ಸಮುದಾಯದಲ್ಲಿ ದೈವ‌ಪ್ರೇರಣೆಯಾದ ಬಳಿಕವೇ ಸನ್ಯಾಸ ಆಥವಾ ಯಾಜಕ ದೀಕ್ಷೆ ಪಡೆಯುವುದು ರೂಢಿ. 10ನೇ ತರಗತಿಯ ಬಳಿಕ ಧಾರ್ಮಿಕ ಶಿಕ್ಷಣ ಆರಂಭವಾಗುತ್ತದೆ. ತತ್ವಶಾಸ್ತ್ರ, ದೇವಶಾಸ್ತ್ರ ಸೇರಿದಂತೆ ಹಲವು ಹಂತಗಳನ್ನು ದಾಟಿದ ಬಳಿಕ ಯಾಜಕ ದೀಕ್ಷೆ ದೊರೆಯುತ್ತದೆ.
ಡಾ.ಪೀಟರ್‌ ಪಾವ್ಲ್‌ ಸಲ್ಡಾನ,ಮಂಗಳೂರಿನ ನಿಯೋಜಿತ ಬಿಷಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.