ADVERTISEMENT

ಎಲ್ಲರೊಂದಿಗೆ ಬೆರೆಯುತ್ತಿದ್ದ ‘ಬಿಂದಾಸ್’ ಸ್ವಾಮೀಜಿ

ಎಂ.ನವೀನ್ ಕುಮಾರ್
Published 19 ಜುಲೈ 2018, 11:29 IST
Last Updated 19 ಜುಲೈ 2018, 11:29 IST
ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ
ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ   

ಉಡುಪಿ:‘ಎಲೆಕ್ಷನ್‌ಗೆ ನಿಲ್ಲುವುದು ಖಚಿತ, ಗೆಲ್ಲುತ್ತೇನೆ, ಗೆದ್ದ ನಂತರ ನಿಮ್ಮೆಲ್ಲರಿಗೂ ಪಾರ್ಟಿ ಕೊಡ್ತೇನೆ’ ಹೀಗೆಂದು ಹೇಳಿದ್ದು ಯಾವುದೇ ವೃತ್ತಿಪರ ರಾಜಕಾರಣಿ ಅಲ್ಲ, ಉಡುಪಿಯ ಅಷ್ಟ ಮಠಾಧೀಶರಲ್ಲಿ ಒಬ್ಬರಾಗಿದ್ದ ಶೀರೂರು ಮಠದ ಲಕ್ಷ್ಮಿವರತೀರ್ಥ ಸ್ವಾಮೀಜಿ.

ಅಷ್ಟಮಠದ ಸ್ವಾಮೀಜಿಯೊಬ್ಬರು ಚುನಾವಣೆಗೆ ನಿಲ್ಲುವ ಘೋಷಣೆ ಮಾಡುವ ಸುದ್ದಿಗೋಷ್ಠಿ ಎಂದು ಮೊದಲೇ ತಿಳಿದಿದ್ದ ಕಾರಣಕ್ಕೆ ಸಹಜವಾಗಿಯೇ ಕುತೂಹಲ ಇತ್ತು, ಬೇಗ ಸುದ್ದಿ ನೀಡಬೇಕು ಎಂಬ ಆತಂಕದಲ್ಲೇ ಸ್ವಾಮೀಜಿಯವರ ಮಾತು ಕೇಳಿಸಿಕೊಂಡೆವು. ಪ್ರಶ್ನೆಗಳಿಗೂ ಉತ್ತರ ನೀಡಿದರು.ಅವರ ಒಂದು ಹೇಳಿಕೆ ಇನ್ನೊಂದಕ್ಕೆ ತಾಳೆಯಾಗುತ್ತಿರಲಿಲ್ಲ. ಆದರೂ ಅವರು ಹೇಳಬೇಕಾದುದನ್ನು ಕಡ್ಡಿ ಮುರಿದಂತೆ ಹೇಳಿದರು. ಅವರ ಆತ್ಮವಿಶ್ವಾಸ ಒಂದಿಷ್ಟು ಕಡಿಮೆಯಾಗಲಿಲ್ಲ.

ಪತ್ರಕರ್ತರೆಲ್ಲರೂ ಎದ್ದುನಿಂತು ಹೊರಡುವ ತಯಾರಿಯಲ್ಲಿದ್ದಾಗ ಬಂದ ಅವರು ‘ಗೆದ್ದೇ ಗೆಲ್ಲುತ್ತೇನೆ, ಪಾರ್ಟಿ ನೀಡುತ್ತೇನೆ’ ಎಂದು ಮುಗುಳ್ನಕ್ಕು, ಅಕ್ಷರಶಃ ಪತ್ರಕರ್ತರ ಒತ್ತಡವನ್ನೂ ಕಡಿಮೆ ಮಾಡಿದ್ದರು. ದ್ವೈತ ಪರಂಪರೆಯ, ದೊಡ್ಡ ಇತಿಹಾಸ ಇರುವ ಪೀಠದ ಸ್ವಾಮೀಜಿ ಎಂಬ ಹೆಗ್ಗಳಿಕೆ ಅವರನ್ನು ಜನರಿಂದ ಎಂದಿಗೂ ದೂರ ಮಾಡಲಿಲ್ಲ. ಅಸಲಿಗೆ ಅಂತಹ ಹೆಗ್ಗಳಿಕೆಯೇ ಅವರಿಗೆ ಇರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಮಾತನಾಡುತ್ತಿದ್ದರು. ಎಲ್ಲರಲ್ಲಿಯೂ ಉತ್ಸಾಹ ತುಂಬುತ್ತಿದ್ದರು.

ADVERTISEMENT

ಆರು ವರ್ಷಗಳ ಹಿಂದೆ ಬೆಂಗಳೂರಿನಿಂದ ಉಡುಪಿಗೆ ವರ್ಗಾವಣೆಯಾಗಿದ್ದೆ. ಉಡುಪಿ ಎಂದರೆ ಕೃಷ್ಣ ಮಠ, ಪೇಜಾವರ ಸ್ವಾಮೀಜಿ ಎಂದೇ ಜನಜನಿತ. ಆದರೆ ಅಲ್ಲಿ ಮಧ್ವಾಚಾರ್ಯರೇ ಸ್ಥಾಪಿಸಿದ ಎಂಟು ಮಠಗಳಿವೆ ಎಂಬ ವಿಷಯ ಹೊರ ಜಿಲ್ಲೆಗಳ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಎಂಟು ಮಠಗಳಿರುವುದು ಗೊತ್ತಿತ್ತಾದರೂ ಆ ಮಠಗಳ ಭವ್ಯ ಪರಂಪರೆಯ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ಸ್ವಾಮೀಜಿಗಳು ಎಷ್ಟು ಮಟ್ಟಿಗೆ ಜನರೊಂದಿಗೆ ಬೆರೆಯಬಹುದು ಎಂಬ ಕಲ್ಪನೆ ಇರಲಿಲ್ಲ.

ಶೀರೂರು ಸ್ವಾಮೀಜಿ ಖುದ್ದು ಉಡುಪಿ ಆಟೊ ನಿಲ್ದಾಣಕ್ಕೆ ಬಂದು ಚಾಲಕರನ್ನು ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ. ಆಹ್ವಾನದ ಜೊತೆಗೆ ಒಂದು ಟೀಶರ್ಟ್ ಅನ್ನು ಸಹ ನೀಡಿದ್ದಾರೆ ಎಂದು ಗೊತ್ತಾಯಿತು. ಪ್ರಚಾರದ ಗೀಳಿಲ್ಲದ ಅವರು ಆಹ್ವಾನ ನೀಡುವ ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ಅಧಿಕೃತ ಆಹ್ವಾನ ನೀಡಿರಲಿಲ್ಲ. ಆದರೆ ಅವರು ಆಟೊ ನಿಲ್ದಾಣ ಮಾತ್ರವಲ್ಲ, ಜನ ಸಾಮಾನ್ಯರು ಗುಂಪುಗೂಡಿದ ಸ್ಥಳಗಳಿಗೂ ತೆರಳಿ ಆಹ್ವಾನ ನೀಡಿದ್ದು ಗೊತ್ತಾದ ನಂತರ ಆ ಸುದ್ದಿ ಬರೆಯಲಾಯಿತು. ಇಂತಹ ಕಾರಣಕ್ಕೆ ಶಿರೂರು ಮಠದೊಂದಿಗೆ ಕೇವಲ ಧಾರ್ಮಿಕ ಬಾಂಧವ್ಯ ಮಾತ್ರವಲ್ಲ, ಭಾವನಾತ್ಮಕ ನಂಟನ್ನೂ ಜನರು ಹೊಂದಿದ್ದಾರೆ. ಸ್ವಾಮೀಜಿ ಅವರನ್ನು ಆರಾಧಿಸುವವರ ಸಂಖ್ಯೆಯೂ ಕಡಿಮೆ ಇಲ್ಲ.

ಒತ್ತಡಕ್ಕೆ ಒಳಗಾಗಿದ್ದೇ ಇಲ್ಲ: ಯುವಕರ ಭಾಷೆಯಲ್ಲಿಯೇ ಹೇಳಬೇಕೆಂದರೆ ಶಿರೂರು ಸ್ವಾಮೀಜಿ ಬಿಂದಾಸ್ ಸ್ವಾಮೀಜಿ. ಎಂತಹ ಸಂದರ್ಭವಿದ್ದರೂ ಅವರು ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ಸಂದಿಗ್ಧ ಸನ್ನಿವೇಶಗಳನ್ನು ಅವರು ಧೈರ್ಯವಾಗಿಯೇ ಎದುರಿಸುತ್ತಿದ್ದರು. ‘ನನಗೂ ಮಕ್ಕಳಿದ್ದಾರೆ. ಅಷ್ಟ ಮಠದ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ’ ಎಂದು ಸ್ವಾಮೀಜಿ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಖಾಸಗಿ ವಾಹಿನಿಯಿಂದು ಪ್ರಸಾರ ಮಾಡಿತು.

ವಿಡಿಯೊ ತುಣುಕು, ಮಾತನಾಡಿದ ವಿಷಯಗಳೆಲ್ಲವನ್ನೂ ಸಂಗ್ರಹಿಸಿದ ನಂತರ ಸ್ವಾಮೀಜಿ ಅವರ ಪ್ರತಿಕ್ರಿಯೆ ಪಡೆಯಬೇಕಾಗಿತ್ತು. ಸ್ವಾಮೀಜಿ ಅವರು ಬಹಳ ಒತ್ತಡದಲ್ಲಿರುತ್ತಾರೆ. ಫೋನ್ ಮಾಡಿದರೆ ಸ್ವೀಕರಿಸುವರೋ, ಸ್ವೀಕರಿಸಿದರೂ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಸಣ್ಣ ಆತಂಕವೂ ಇತ್ತು. ಮೊದಲು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಎಂಬ ಸಂದೇಶ ಬಂತು. ಅವರು ಬಳಸುತ್ತಿದ್ದ ಎರಡು ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದಾಗಲೂ ಅದೇ ಸಂದೇಶ ಮರುಕಳಿಸಿತು. ವಿವಾದಿತ ವಿಡಿಯೊ ಪ್ರಸಾರ ಆಗಿರುವುದರಿಂದ ಅವರು ಆತಂಕಕ್ಕೆ ಒಳಗಾಗಿರಬಹುದು, ಅಥವಾ ಮುಜುಗರಕ್ಕೀಡಾಗಿರಬಹುದು ಅವರ ಇನ್ನೂ ಕರೆ ಸ್ವೀಕರಿಸುವುದಿಲ್ಲ ಅಂದುಕೊಂಡೆ. ಆದರೆ ಅವರ ಪ್ರತಿಕ್ರಿಯೆಯ ವಿನಃ ಬರೆದ ಸುದ್ದಿ ಪೂರ್ಣವಾಗುತ್ತಿರಲಿಲ್ಲ. ಅದೇ ಚಿಂತೆ ಕಾಡಲು ಒಂದು ಗಂಟೆಯ ನಂತರ ಮೊತ್ತೊಮ್ಮೆ ಕರೆ ಮಾಡಿದೆ. ಅದೃಷ್ಟವಶಾತ್ ಅವರೇ ಕರೆ ಸ್ವೀಕರಿಸಿದರು. ಸ್ವಾಮೀಜಿ ನಿಮ್ಮ ವಿಡಿಯೊ ನ್ಯೂಸ್ ಚಾನಲ್‌ನಲ್ಲಿ ಪ್ರಸಾರವಾಗುತ್ತಿದೆ ಏನು ಹೇಳುತ್ತೀರ ಎಂದು ಕೇಳಿದೆ. ‍ಅದೊಂದು ನಕಲಿ ವಿಡಿಯೊ ಎಂದು ಸ್ಪಷ್ಟವಾಗಿ ತಳ್ಳಿ ಹಾಕಿದರು. ಅದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸಹ ಹೇಳಿ ಕರೆ ಸ್ಥಗಿತಗೊಳಿಸಿದರು. ಅವರ ಧ್ವನಿಯಲ್ಲಿ ಒಂದಿಷ್ಟು ಆತಂಕ ಇರಲಿಲ್ಲ. ಆ ನಂತರ ಗೊತ್ತಾಯಿತು ಅವರ ಮೂಲ ಮಠದಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ ಎಂದು.

ಇದಾಗಿ ಕೆಲವು ನಿಮಿಷಗಳ ನಂತರ ಅವರು ಪ್ರೆಸ್‌ಕ್ಲಬ್‌ಗೆ ಬರುವ ಸುದ್ದಿಯೂ ಬಂತು. ಚುನಾವಣೆಗೆ ನಿಲ್ಲುವ ಸಂಬಂಧ ಖಾಸಗಿ ಸುದ್ದಿ ವಾಹಿನಿಯೊಂದಿಗೆ ನೇರ ಸಂಪರ್ಕದಲ್ಲಿ ಮಾತನಾಡಲು ಅವರು ಬಂದಿದ್ದರು. ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು, ದೀಢೀರ್ ಎಂದು ನಡೆದ ‘ವಿಡಿಯೊ’ ಬೆಳವಣಿಗೆಯಿಂದ ಅವರು ಸ್ವಲ್ಪವೂ ಅಧೀರರಾಗಿರಲಿಲ್ಲ. ಮೊದಲೇ ವಾಗ್ದಾನ ಮಾಡಿದಂತೆ ಸರಿಯಾದ ಸಮಯಕ್ಕೆ ಪ್ರೆಸ್‌ಕ್ಲಬ್‌ನಲ್ಲಿದ್ದರು. ಮಾತನಾಡಿ ಮಾತು ಉಳಿಸಿಕೊಂಡರು.

ಕಲಾಸಕ್ತರೂ, ಕ್ರೀಡಾ ಪ್ರೇಮಿಗಳು ಆಗಿದ್ದ ಸ್ವಾಮೀಜಿ ಹಲವು ಸಾಧಕರೊಂದಿಗೆ ಸ್ನೇಹ ಇಟ್ಟುಕೊಂಡಿದ್ದರು. ಖ್ಯಾತ ಡ್ರಮ್ಸ್ ವಾದಕ ಶಿವಮಣಿ ಅವರಲ್ಲಿ ಒಬ್ಬರು. ತಮ್ಮ ಮೂರನೇ ಪರ್ಯಾಯದಲ್ಲಿ ಸ್ವಾಮೀಜಿ ಅವರು ಶಿವಮಣಿ ಅವರ ಡ್ರಮ್ಸ್ ವಾದನ ಕಾರ್ಯಕ್ರಮ ಏರ್ಪಡಿಸಿದ್ದರು. ತಾವೂ ಸಹ ಡ್ರಮ್ಸ್ ಭಾರಿಸುವ ಮೂಲಕ ಗಮನ ಸೆಳೆದಿದ್ದರು. ಒಂದೇ ಕಾರ್ಯಕ್ರಮ ಆದರೂ ಅವರಿಬ್ಬರ ಮಧ್ಯೆ ಎಂತಹ ಸ್ನೇಹ ಇತ್ತು ಎಂಬುದಕ್ಕೆ ಇನ್ನೊಂದು ಸನ್ನಿವೇಶವನ್ನು ನೆನಪಿಸಿಕೊಳ್ಳಲೇಬೇಕು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉಡುಪಿಯಲ್ಲಿ ಮೂರು ದಿನಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಿವಮಣಿ ಅವರ ಡ್ರಮ್ಸ್ ವಾದನ ಕಾರ್ಯಕ್ರಮ ಪಟ್ಟಿಯಲ್ಲಿತ್ತು. ಅಷ್ಟೊಂದು ಹಣ ಕೊಟ್ಟು ಅವರನ್ನು ಕರೆಯಿಸುವ ಅಗತ್ಯ ಏನಿತ್ತು ಎಂಬುದರ ಬಗ್ಗೆಯಯೂ ಗುಸುಗುಸು ನಡೆದಿತ್ತು. ಮಲ್ಪೆಯ ಕಡಲ ಕಿನಾರೆಯಲ್ಲಿ ಶಿವಮಣಿ ಅದ್ಭುತ ಪ್ರದರ್ಶನ ನೀಡಿದರು. ಕಡಲ ಅಬ್ಬರವನ್ನೂ ಮೀರಿಸುವಂತೆ ಡ್ರಮ್ಸ್ ವಾದನ ಹೊಮ್ಮಿಸಿದರು.

ಆ ಕಾರ್ಯಕ್ರಮ ವೀಕ್ಷಿಸಲು ಲಕ್ಷ್ಮೀವರ ಸ್ವಾಮೀಜಿ ಅವರೂ ಬಂದಿದ್ದರು. ಕೊನೆಯಲ್ಲಿ ಮಾತನಾಡಿದ ಶಿವಮಣಿ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಆಯೋಜಕರು ಸಂಭಾವನೆ ಕಡಿಮೆ ಕೊಟ್ಟರು ಆದರೆ ಸ್ವಾಮೀಜಿ ಅವರ ಮೇಲಿನ ಪ್ರೀತಿಯ ಕಾರಣಕ್ಕೆ ಮತ್ತೊಮ್ಮೆ ಉಡುಪಿಗೆ ಬಂದಿದ್ದೇನೆ ಎಂದರು. ವ್ಯಕ್ತಿಗಳೊಂದಿಗೆ ವ್ಯಾವಹಾರಿಕ ಸಂಬಂಧ ಮಾತ್ರವಲ್ಲ, ಭಾವನಾತ್ಮಕವಾಗಿ ಅವರು ಬೆಸೆದುಕೊಳ್ಳುತ್ತಿದ್ದರು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಕಲಾಪೋಷಕರಾಗಿದ್ದ ಅವರು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕಲಾ ತಂಡಗಳ ಸದಸ್ಯರಿಗೆ ಗರಿಗರಿ ನೋಟಿನ ಹಾರವನ್ನು ಹಾಕಿ ಪ್ರೋತ್ಸಾಹ ನೀಡುತ್ತಿದ್ದರು. 20– 30 ಲಕ್ಷವನ್ನು ಅದಕ್ಕಾಗಿಯೇ ಅವರು ಖರ್ಚು ಮಾಡುತ್ತಿದ್ದರು. ಸ್ವಾಮೀಜಿ ಅವರು ಆಯೋಜಿಸುತ್ತಿದ್ದ ಕಾರ್ಯಕ್ರಮ ವಿಶೇಷವೂ ವಿಶಿಷ್ಟವೂ ಆಗಿರುತ್ತಿತ್ತು. ಎಂಡೊ ಪೀಡಿತರ ಕರುಣಾಜನಕ ಕಥೆಯನ್ನು ಬಿಚ್ಚಿಡುವ ಸರಣಿ ಕಾರ್ಯಕ್ರಮವನ್ನು ಖಾಸಗಿ ವಾಹಿನಿ ಮಾಡಿತ್ತು. ಸಂಕಷ್ಟಕ್ಕೆ ಒಳಗಾದವರ ಬವಣೆ ನೋಡಿದ ಸ್ವಾಮೀಜಿ ಸ್ಪಂದಿಸಿ ಸುಮಾರು ₹5 ಲಕ್ಷ ಧನ ಸಹಾಯ ಮಾಡಿದ್ದರು. ಅವರ ವ್ಯಕ್ತಿತ್ವದ ಮಾನವೀಯ ಆಯಾಮಕ್ಕೆ ಇದೊಂದು ಉದಾಹರಣೆ ಸಾಕೆನಿಸುತ್ತದೆ.

ಗೋ ಸೇವಕ:ಸ್ವಾಮೀಜಿ ಅವರು ಮೂಲ ಮಠದಲ್ಲಿ ಗೋಶಾಲೆಯನ್ನೂ ನಡೆಸುತ್ತಿದ್ದರು. ಪ್ರತಿ ದಿನ ಅವುಗಳ ಆರೈಕೆ ಅವರ ನಿತ್ಯ ಕಾಯಕದಲ್ಲೊಂದು. ಗೋವುಗಳ ಕಳವು ಪ್ರಕರಣಗಳು ಆ ಭಾಗದಲ್ಲಿ ಹೆಚ್ಚಾದಾಗ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತಹ ಘಟನೆಗಳು ನಡೆಯದಂತೆ ತಡೆಯಿರಿ ಎಂದು ಪೊಲೀಸರಿಗೂ ದೂರು ನೀಡಿದ್ದರು.

ಇನ್ನಷ್ಟು ಸುದ್ದಿಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.