ಉಡುಪಿ: ಹೆಬ್ರಿ ಸಮೀಪದ ಮಡಮಕ್ಕಿಯಲ್ಲಿ ವಿಠಲ ಆಚಾರ್ಯ ಹಾಗೂ ಕುಸುಮ ದಂಪತಿಯ ಪುತ್ರನಾಗಿ ಜೂನ್ 8, 1964ರಲ್ಲಿ ಜನಿಸಿದವರು ಶಿರೂರು ಶ್ರೀಗಳು,ಅವರ ಮೂಲ ನಾಮಧೇಯ ಹರೀಶ್ ಆಚಾರ್ಯ. ಪಣಿಯಾಡಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಗ ಅವರಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಕರೆ ಬಂದಿತ್ತು. ಅದರಂತೆ 1971, ಜುಲೈ 2ರಂದು ಸೋದೆ ಮಠದ ವಿಶ್ವೋತ್ತಮ ತೀರ್ಥರಿಂದ ಶಿರೂರು ಲಕ್ಷ್ಮೀವರ ತೀರ್ಥರಾಗಿ ಸನ್ಯಾಸ ದೀಕ್ಷೆ ಪಡೆದರು.
ನಂತರ ಸೋದೆ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳ ಬಳಿ ಶಾಸ್ತ್ರಾಧ್ಯಯನ ಕೈಗೊಂಡರು. ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಬಳಿ ಸುಧಾಪಾಠ ಅಭ್ಯಾಸ ಮಾಡಿದರು.
ಬಾಲ್ಯದಿಂದಲೂ ಚುರುಕು ವ್ಯಕ್ತಿತ್ವದವರಾಗಿದ್ದ ಶೀರೂರು ಲಕ್ಷ್ಮೀವರ ತೀರ್ಥರು, 14ನೇ ವಯಸ್ಸಿನಲ್ಲಿಯೇ ಸರ್ವಜ್ಞ ಪೀಠಾರೋಹಣ ಮಾಡಿದರು. 1978ರಿಂದ 80ರವೆಗೆ ಪ್ರಥಮ ಪರ್ಯಾಯವನ್ನು ನಡೆಸಿ ಸೈ ಎನಿಸಿಕೊಂಡರು.
1996ರಿಂದ 98ರ ಅವಧಿಯಲ್ಲಿ ನಡೆದ ದ್ವಿತೀಯ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣನನ್ನು ವಿಭಿನ್ನವಾಗಿ ಆರಾಧಿಸುವ ಮೂಲಕ ಕೃಷ್ಣ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪರ್ಯಾಯ ಅವಧಿಯ ಬಹುತೇಕ ಸಮಯವನ್ನು ಕೃಷ್ಣ ಪೂಜೆಗೆ ಮೀಸಲಿರಿಸುತ್ತಿದ್ದ ಅವರು, ಮನಸ್ಸು ತಣಿಯುವವರೆಗೂ, ದೇಹ ದಣಿಯುವವರೆಗೂ ಕೃಷ್ಣನಿಗೆ ಬಗೆಬಗೆಯ ಅಲಂಕಾರ ಮಾಡುತ್ತಿದ್ದರು.
‘ಶ್ರೀಗಳ ದ್ವಿತೀಯ ಪರ್ಯಾಯದ ಅವಧಿಯಲ್ಲಿ ಕೃಷ್ಣ ದೇವರಿಗೆ 365 ಬಗೆಯ ಅಲಂಕಾರಗಳನ್ನು ಮಾಡಿ ಪ್ರಸಿದ್ಧರಾಗಿದ್ದರು. ಕೃಷ್ಣನ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಭಕ್ತರು ಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದರು. ಅದೊಂದು ಅಪೂರ್ವ ದೃಶ್ಯ’ ಎಂದು ಸ್ಮರಿಸುತ್ತಾರೆ ಭಕ್ತರಾದ ವೇದವ್ಯಾಸ ಕಾಮತ್.
ಶ್ರೀಗಳ ಪರ್ಯಾಯ ಅವಧಿಯಲ್ಲಿ ಕೈಗೊಂಡ ಗೀತೋಪದೇಶ ಹಾಗೂ ಅಲಂಕಾರ ವಿಶ್ವಪ್ರಸಿದ್ಧಿ ಪಡೆದು ಮಠಕ್ಕೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಇದಕ್ಕಾಗಿ ಶ್ರೀಗಳು ಕೃಷ್ಣನಿಗೆ ಸಣ್ಣ ಬಂಗಾರದ ರಥವನ್ನು ಸಮರ್ಪಿಸಿದ್ದರು. ಪರ್ಯಾಯ ಅವಧಿಯನ್ನು ಹೊರತುಪಡಿಸಿಯೂ ಕೃಷ್ಣ ಮಠಕ್ಕೆ ಬಂದು ಅಲಂಕಾರ ಸೇವೆಗಳನ್ನು ಮಾಡುತ್ತಿದ್ದರು ಎಂದು ಸ್ಮರಿಸುತ್ತಾರೆ ಮಠದ ಸಿಬ್ಬಂದಿ.
ಶ್ರೀಕೃಷ್ಣ ಮಠಕ್ಕೆ ತಡರಾತ್ರಿಯಲ್ಲಿ ಬರುವ ಯಾತ್ರಾರ್ಥಿಗಳಿಗೂ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಇತ್ತು. ಇದನ್ನು ಕಂಡು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೂ ಶ್ಲಾಘನೆ ವ್ಯಕ್ತಪಡಿಸಿದ್ದರು. ಈ ಕಾರಣದಿಂದಲೇ ಶೀರೂರು ಮಠದ ಪಟ್ಟದದೇವರಾದ ವಿಠಲ ದೇವರನ್ನು ‘ಅನ್ನವಿಠಲ’ ಎಂದು ಶ್ರೀಗಳು ಸದಾ ಸ್ಮರಿಸುತ್ತಿದ್ದರು ಎಂದು ಅವರ ಶಿಷ್ಯರು ಹೇಳಿಕೊಳ್ಳುತ್ತಾರೆ.
2012–14ರ ಅವಧಿಯಲ್ಲಿ ಮೂರನೇ ಪರ್ಯಾಯ ನಡೆಸಿದ ಶ್ರೀಗಳು ಕಲಾರಾಧಾನೆಗೆ ಹೆಚ್ಚು ಮಹತ್ವ ನೀಡಿದರು. ಈ ಅವಧಿಯಲ್ಲಿ ಖ್ಯಾತ ಡ್ರಮ್ಮರ್ ಶಿವಮಣಿ ಸ್ನೇಹ ಬೆಳೆದು, ಮಠದಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜತೆಗೆ ಸ್ವತಃ ಶಿವಮಣಿ ಜತೆ ಜುಗಲ್‌ಬಂದಿ ನಡೆಸಿ ಗಮನ ಸೆಳೆದಿದ್ದರು.
ನಾಲ್ಕನೇ ಪರ್ಯಾಯವನ್ನೂ ಮಾಡುವುದಾಗಿ ಈಚೆಗೆ ಶೀರೂರು ಶ್ರೀಗಳು ಹೇಳಿಕೊಂಡಿದ್ದರು.
ಇನ್ನಷ್ಟು ಸುದ್ದಿಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.