ADVERTISEMENT

ದೇವೇಗೌಡರ ಕುಟುಂಬದಿಂದ ಭೂಕಬಳಿಕೆ; ಆರೋಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 19:56 IST
Last Updated 18 ಸೆಪ್ಟೆಂಬರ್ 2018, 19:56 IST
ಎ.ಮಂಜು
ಎ.ಮಂಜು   

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ.

‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕುಟುಂಬದವರು ನಕಲಿ ದಾಖಲೆ ಸಷ್ಟಿಸಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ.

‘ಹಾಸನ ತಾಲ್ಲೂಕು ದುದ್ದ ಹೋಬಳಿ ಸೋಮನಹಳ್ಳಿ ಕಾವಲ್‌ ಗ್ರಾಮದ ಸರ್ವೆ ನಂ 41ರಿಂದ 50, 51, 58, 62, 63ರಲ್ಲಿ ಒಟ್ಟು 54.29 ಎಕರೆ ಜಾಗವನ್ನು ದೇವೇಗೌಡರ ಅತ್ತೆ ಕಾಳಮ್ಮ ಮತ್ತು ಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಹೆಸರಿಗೆ 2014–15ರಲ್ಲಿ ಗಿರಿಗೌಡ ಎಂಬುವರಿಂದ ಖರೀದಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘1956–57ರಲ್ಲಿ ಸಣ್ಣೇಗೌಡರಿಗೆ ಜಮೀನು ಮಂಜೂರು ಆಗಿರುವ ಕುರಿತ ದಾಖಲೆ ಇದೆ. ಆದರೆ ಅವರಿಗೆ ಯಾವ ಕಾಯಿದೆಯಡಿ ಎಷ್ಟು ಭೂಮಿ ಮಂಜೂರಾಗಿದೆ ಎಂಬ ದಾಖಲೆಯಿಲ್ಲ. ಸಣ್ಣೇಗೌಡರ ನಂತರ ಗಿರೀಗೌಡ, ಕೃಷ್ಣೇಗೌಡ ಎಂಬುವರಿಗೆ ಅದೇ ಭೂಮಿ 1978-79ರಲ್ಲಿ ಹಕ್ಕು ಬದಲಾವಣೆಯಾಗಿದೆ ಎಂದು ನಮೂದಾಗಿದೆ. ಗಿರೀಗೌಡ ಯಾರು. ಅವರ ಹೆಸರು ಏಕೆ ಬಂತು ಎಂಬ ದಾಖಲೆ ತಾಲ್ಲೂಕು ಕಚೇರಿಯಲ್ಲಿ ಇಲ್ಲ’ ಎಂದು ದೂರಿದರು.

‘ಕಾಳಮ್ಮ ಮತ್ತು ಪ್ರಜ್ವಲ್ ರೇವಣ್ಣ ಅವರಿಗೆ ಗಿರೀಗೌಡ ಮತ್ತು ಏಳು ಜನರು ಮಾರಾಟ ಮಾಡಿ ನೋಂದಣಿ ಮಾಡಿಕೊಟ್ಟ ನಂತರ ಹಕ್ಕು ಬದಲಾವಣೆಯಲ್ಲಿ ಎಂ.ಆರ್.ನಲ್ಲಿ (ಹಕ್ಕು ಬದಲಾವಣೆ ದಾಖಲೆ) ಮಾತ್ರ ಸರ್ಕಾರಿ ಭೂಮಿಯು 1978 -79ರಲ್ಲಿ 7 ಜನರಿಗೆ ಸರ್ಕಾರದಿಂದ ಮಂಜೂರಾಗಿದ್ದ ಭೂಮಿ ಎಂದು ಪಹಣಿ ಪ್ರತಿಯ ಹಕ್ಕು ಬದಲಾವಣೆಯ ಕಾಲಂನಲ್ಲಿ ದಾಖಲಾಗಿದೆ. ಆದರೆ ಬೀಳು ಬಿದ್ದ ಸರ್ಕಾರಿ ಭೂಮಿಯನ್ನು ತಹಶೀಲ್ದಾರ್ ಅದೇಶದ ಮೇರೆಗೆ ಮಂಜೂರು ಮಾಡಲು ಬರುವುದಿಲ್ಲ. ಅದನ್ನು ಜಿಲ್ಲಾಧಿಕಾರಿ ಮಾತ್ರ ಮಂಜೂರು ಮಾಡುವ ಅಧಿಕಾರವಿದೆ’ ಎಂದು ವಿವರಿಸಿದರು.

‘ಕಾಳಮ್ಮ ಹೆಸರಿಗೆ ನೋಂದಣಿಯಾಗಿದ್ದ ಭೂಮಿಯನ್ನು ಅವರ ಮರಣದ ನಂತರ ವಿಲ್‌ ಮೂಲಕ ಪ್ರಜ್ವಲ್‌ ಹೆಸರಿಗೆ ವರ್ಗಾಯಿಸಲಾಗಿದೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಮಾರ್ಚ್ 14ರಂದು ತಹಶೀಲ್ದಾರ್‌ಗೆ ಪತ್ರ ಬರೆದಿದ್ದೆ. ಬೀಳು ದುರಸ್ತಾದ ಮಾಹಿತಿ ಬಿಟ್ಟು ಬೇರೆಲ್ಲ ನೀಡಿದ್ದಾರೆ. ಈ ಅವ್ಯವಹಾರಕ್ಕೆ ರೇವಣ್ಣ ತಮ್ಮ ಪ್ರಭಾವ ಬಳಸಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು. ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರತ್ರಿಕ್ರಿಯೆಗೆ ಸಿಗದ ರೇವಣ್ಣ: ಭೂ ಕಬಳಿಕೆ ಆರೋಪ ಕುರಿತು ಪ್ರತಿಕ್ರಿಯೆಗೆ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.