ADVERTISEMENT

ರೈತರಿಗೆ ದುಪ್ಪಟ್ಟು ಪರಿಹಾರ ಇಲ್ಲ?

ಭೂ ಸ್ವಾಧೀನ ಪುನರ್ವಸತಿ ಕಾಯ್ದೆ: ಕಾಂಗ್ರೆಸ್ ಆಶಯ ‘ಮೈತ್ರಿ’ಯಲ್ಲಿ ಮಣ್ಣುಪಾಲು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 19:38 IST
Last Updated 24 ಫೆಬ್ರುವರಿ 2019, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರದ ವಿವಿಧ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಇನ್ನು ಮುಂದೆ ಮಾರುಕಟ್ಟೆ ದರದ ಎರಡು–ಮೂರು ಪಟ್ಟು ಪರಿಹಾರ ಸಿಗುವುದಿಲ್ಲ.

ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಯ ಗದ್ದಲದ ಮಧ್ಯೆ, ಯಾವುದೇ ಚರ್ಚೆ ಇಲ್ಲದೇ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ–2019’ಗೆ ಸರ್ಕಾರ ಅನುಮೋದನೆ ಪಡೆದಿದೆ.

ಮಸೂದೆಗೆ ಅಂಗೀಕಾರ ಕೋರಿ, ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಅವರ ಸಮ್ಮತಿ ದೊರೆತ ಕೂಡಲೇ ಅದು ಕಾಯ್ದೆಯಾಗಿ ಹೊರಬರಲಿದೆ. ಅದಾದ ಬಳಿಕ ರೈತರಿಗೆ ‘ನ್ಯಾಯಯುತ’ ಪರಿಹಾರ ಕೊಡಬೇಕಾಗಿಲ್ಲ.

ADVERTISEMENT

ಕಾಯ್ದೆ ಉದ್ದೇಶ: ವಿವಿಧ ಯೋಜನೆಗಳಿಗಾಗಿ ಕಡಿಮೆ ಪರಿಹಾರ ಕೊಟ್ಟು ಭೂಸ್ವಾಧೀನಪಡಿಸಿಕೊಂಡು, ಉದ್ಯಮಿಗಳು, ರಿಯಲ್ ಎಸ್ಟೇಟ್‌ ಕುಳಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ ಎಂಬ ಆರೋಪಗಳು ಇದ್ದವು. ಇದರಿಂದ ಬೇಸತ್ತಿದ್ದ ರೈತರು ದೇಶದುದ್ದಗಲಕ್ಕೂ ಸರ್ಕಾರದ ಜತೆ ಸಂಘರ್ಷಕ್ಕೆ
ಇಳಿದಿದ್ದರು. ಹೀಗಾಗಿ, ಮೂಲಸೌಕರ್ಯ ಹಾಗೂ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಹೀಗಾಗಿ, ಕೇಂದ್ರದ ಯುಪಿಎ ಸರ್ಕಾರವು 2014ರ ಏಪ್ರಿಲ್ 1ರಿಂದ ಹೊಸ ಕಾಯ್ದೆ ಜಾರಿಗೆ ತಂದಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಭೂಸ್ವಾಧೀನ ಪರಿಹಾರ ಕಾಯ್ದೆ ತಮ್ಮ ‘ಹೆಗ್ಗಳಿಕೆ’ ಎಂದೇ ಪ್ರಚಾರ ನಡೆಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಕಾಯ್ದೆಗೆ ತಿದ್ದುಪಡಿ ತರುವ ಯತ್ನ ನಡೆಸಿತು. ಅದಕ್ಕೆ ಅವಕಾಶ ಸಿಗಲಿಲ್ಲ. ಆದರೆ,ನ್ಯಾಯಯುತ ಪರಿಹಾರ ಕಾಯ್ದೆಯ ರೈತಪರ ಆಶಯಗಳನ್ನು ಮಣ್ಣುಪಾಲು ಮಾಡಲು ರಾಜ್ಯದ ಜೆಡಿಎಸ್‌–ಕಾಂಗ್ರೆಸ್
ಮೈತ್ರಿ ಸರ್ಕಾರ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಕಾಯ್ದೆಗೆ ಕೊಡಲಿ ಪೆಟ್ಟು: ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಉದ್ದೇಶಕ್ಕೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಸಂತ್ರಸ್ತರ ಸಮ್ಮತಿ, ಪುನರ್ವಸತಿ, ಪುನರ್‌ವ್ಯವಸ್ಥೆ ಹಾಗೂ ಪರಿಹಾರ ನಿಗದಿಯ ಬಗ್ಗೆ ಕಾಳಜಿ ವಹಿಸಿ, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬುದು ಕೇಂದ್ರದ ಕಾಯ್ದೆಯ ಆಶಯ.

‘ನೈಸ್‌’ಗೆ ಅನುಕೂಲ?
ನೈಸ್‌ನಂತಹ (ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್) ಯೋಜನೆಗಳ ಪ್ರವರ್ತಕರಿಗೆ ಲಾಭ ಮಾಡಿಕೊಡುವ ಉದ್ದೇಶ ಮಸೂದೆಯ ಹಿಂದೆ ಇದೆಯೇ ಎಂಬ ಅನುಮಾನ ಮೂಡಿದೆ.

ಅಧಿಸೂಚನೆ ಹೊರಡಿಸಿದ ಬಳಿಕ ಒಂದು ವರ್ಷದೊಳಗೆ ಬಳಕೆಯಾಗದೇ ಇದ್ದರೆ ಭೂಮಿ ವಾರಸುದಾರರಿಗೆ ಹಸ್ತಾಂತರವಾಗಬೇಕು. ಮತ್ತೆ ಭೂಮಿ ನೀಡಬೇಕಾದರೆ ಹೊಸ ಅಧಿಸೂಚನೆ ಹೊರಡಿಸಿ, ಮಾರುಕಟ್ಟೆ ದರದಂತೆ ಪರಿಹಾರ ನಿಗದಿ ಮಾಡಬೇಕು ಎಂದು ಕೇಂದ್ರದ ಕಾಯ್ದೆ ಹೇಳುತ್ತದೆ.

‘ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿ ಮಾರ್ಪಾಟು, ಪರಿಹಾರ ನಿಗದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಮಾಡಬಹುದು’ ಎಂದು ಮಸೂದೆಯಲ್ಲಿ (105–ಎ) ಸೇರಿಸಲಾಗಿದೆ. ಇದರ ಹಿಂದೆ ನೈಸ್‌ಗೆ ಲಾಭ ಮಾಡಿಕೊಡಲು ಉದ್ದೇಶ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನೈಸ್ ಯೋಜನೆಗೆ 20 ವರ್ಷದಿಂದ ನನೆಗುದಿಗೆ ಬಿದ್ದಿದೆ. ರೈತರು ಬಳಸುವಂತಿಲ್ಲ, ಮಾರುವಂತೆಯೂ ಇಲ್ಲ; ನೈಸ್‌ ಯೋಜನೆ ಅನುಷ್ಠಾನವೂ ಆಗಿಲ್ಲ. ಹೊಸ ಮಸೂದೆ ಕಾಯ್ದೆಯಾದರೆ, ಈಗ ಹಳೆಯ ದರದಲ್ಲೇ ಪರಿಹಾರ ಸಿಗಲಿದೆ. ನೈಸ್ ಮಾತ್ರವಲ್ಲ, ಇಂತಹದೇ ಅನೇಕ ಯೋಜನೆಗಳ ಪ್ರವರ್ತಕರಿಗೆ ಹೊಸ ಮಸೂದೆ ಲಾಭ ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಪರಿಹಾರದಲ್ಲೂ ತಾರತಮ್ಯ
ಪರಿಹಾರದ ಮೊತ್ತ ನಿಗದಿ ಮಾಡುವಾಗಲೂ ಒಂದೇ ಪ್ರದೇಶದ ರೈತರಿಗೆ ಬೇರೆ ಬೇರೆ ಮೊತ್ತದಲ್ಲಿ ಪರಿಹಾರ ನೀಡಲು ತಿದ್ದುಪಡಿ (23ಎ)ಯಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ.

ಉದಾಹರಣೆಗೆ ಕೈಗಾರಿಕೆ ಉದ್ದೇಶಕ್ಕಾಗಿ ಸರ್ವೆ ನಂ 10ರಲ್ಲಿ 250 ಎಕರೆ ಭೂಮಿ ವಶಪಡಿಸಿಕೊಂಡು ತಲಾ ಎಕರೆಗೆ ₹1 ಕೋಟಿ ಪರಿಹಾರ ನೀಡಲಾಗಿದ್ದರೆ, ಅದೇ ಸರ್ವೆ ನಂ. ಅಥವಾ ಪಕ್ಕದ ಸರ್ವೆ ನಂ. ರಲ್ಲಿ 100–200 ಎಕರೆ ವಶ ಪಡಿಸಿಕೊಳ್ಳುವಾಗ ಎಕರೆಗೆ ₹1 ಕೋಟಿ ನೀಡಬೇಕಾಗಿಲ್ಲ. 23ಎ ಪ್ರಕರಣದ 2(1)ರ ‘ಉಪಪ್ರಕರಣದಲ್ಲಿ ಯಾವುದೇ ಭೂಮಿಯ ಪರಿಹಾರ ನಿರ್ಧರಣೆಯು ಅದೇ ಪ್ರದೇಶದ ಅಥವಾ ಬೇರೆ ಕಡೆಯ ಇತರ ಭೂಮಿಯ ಪರಿಹಾರ ನಿರ್ಧರಣೆಗೆ ಅನ್ವಯಿಸುವುದಿಲ್ಲ’ ಎಂದೂ ಹೇಳಲಾಗಿದೆ.

ಸಂತ್ರಸ್ತರಿಗೆ ಇಡುಗಂಟೇ ಗತಿ
ಸರ್ಕಾರದ ಯಾವುದೇ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗಲೆಲ್ಲ ಪುನರ್ವಸತಿ, ಪುನರ್ ವ್ಯವಸ್ಥೆ ಮಾಡಬೇಕು ಎಂಬುದು ಕೇಂದ್ರದ ಕಾಯ್ದೆಯಲ್ಲಿದೆ. ಆದರೆ, ರಾಜ್ಯ ಸರ್ಕಾರದ ಮಸೂದೆಯಲ್ಲಿ (ತಿದ್ದುಪಡಿ 31ಎ) ಇದರ ಬದಲಿಗೆ ರಾಜ್ಯ ಸರ್ಕಾರ ನಿರ್ಧರಿಸಬಹುದಾದ ಇಡುಗಂಟು (ಇಂತಿಷ್ಟು ಮೊತ್ತ) ಪಾವತಿ ಮಾಡಬಹುದು ಎಂದು ಹೇಳಲಾಗಿದೆ. ಇದು ಪುನರ್ವಸತಿ, ಮೂಲಸೌಕರ್ಯ ಕಲ್ಪಿಸಿಕೊಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿ ಎಂದೇ ವ್ಯಾಖ್ಯಾನಿಸಲಾಗಿದೆ.

ಕೇಂದ್ರದ ಕಾಯ್ದೆ ಹೇಳುವುದೇನು?
*ರಕ್ಷಣೆ, ರಾಷ್ಟ್ರೀಯ ಭದ್ರತೆ ಯೋಜನೆಗಳು, ಕೈಗಾರಿಕಾ ಕಾರಿಡಾರ್‌, ರೈಲ್ವೆ, ರಸ್ತೆ, ಬಡವರಿಗೆ ವಸತಿ, ನೀರಾವರಿ ಯೋಜನೆಗಳು ಸೇರಿದಂತೆ ಯಾವುದೇ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಹೊಸ ಕಾಯ್ದೆ ಅನ್ವಯ.

*ಪರಿಹಾರ ಮೊತ್ತ ನಿಗದಿ ಮಾಡುವಾಗ ನಗರ ಪ್ರದೇಶದಲ್ಲಿ ಮಾರುಕಟ್ಟೆ ದರದ ಶೇ 100ರಷ್ಟು, ನಗರ ಕೇಂದ್ರದಿಂದ 10 ಕಿ.ಮೀ. ಆಚೆಗೆ ಶೇ 200ರಷ್ಟು ಹಾಗೂ 30 ಕಿ.ಮೀ ಆಚೆಗೆ ಶೇ 300ರಷ್ಟು ಪರಿಹಾರ ಮೊತ್ತ ಕೊಡಬೇಕಾಗಿತ್ತು. ಅಂದರೆ ನಗರದಲ್ಲಿ ಮಾರುಕಟ್ಟೆ ದರ ₹ 1 ಕೋಟಿ ಇದ್ದರೆ ಅಷ್ಟೇ ಮೊತ್ತ. 10 ಕಿ.ಮೀ ಆಚೆಗೆ ₹20 ಲಕ್ಷ ಇದ್ದರೆ ₹ 40 ಲಕ್ಷ, 30 ಕಿ.ಮೀ ಆಚೆಗೆ ₹10 ಲಕ್ಷ ಇದ್ದರೆ ₹30 ಲಕ್ಷ ನೀಡಲೇಬೇಕಿತ್ತು.

*1885 (ದ ಲ್ಯಾಂಡ್ ಅಕ್ವಿಶಿಷನ್‌(ಮೈನ್ಸ್‌) ಆ್ಯಕ್ಟ್‌) ರಿಂದ ಚಾಲ್ತಿಯಲ್ಲಿದ್ದ ಈ ಕುರಿತ 13 ವಿವಿಧ ಕಾಯ್ದೆಗಳು ರದ್ದಾಗಿದ್ದವು.

ರಾಜ್ಯ ಮಸೂದೆ ಹೇಳುವುದೇನು?
*ಮಸೂದೆಯಲ್ಲಿ 10 ಎ ಪ್ರಕರಣದಲ್ಲಿ ಪಟ್ಟಿ ಮಾಡಲಾದ ಪ್ರಾಜೆಕ್ಟ್‌ಗಳಿಗಾಗಿ (ಕೈಗಾರಿಕೆ, ವಸತಿ, ಮೂಲಸೌಕರ್ಯ ಸೇರಿ) ಭೂಸ್ವಾಧೀನ ಮಾಡುವಾಗ ಭೂ ಪರಿಹಾರ ಕಾಯ್ದೆ ಅನ್ವಯವಾಗುವುದಿಲ್ಲ.

*ಹೀಗೆ ವಿನಾಯಿತಿ ನೀಡುದರಿಂದ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ದರದ 2–3 ಪಟ್ಟು ಪರಿಹಾರ ಸಿಗುವುದಿಲ್ಲ. ಮಾರ್ಗಸೂಚಿ ದರದಷ್ಟು ಪರಿಹಾರ ಸಿಗಲಿದೆ.

*ಗೃಹ ಮಂಡಳಿ, ಹೆದ್ದಾರಿ, ಕೈಗಾರಿಕೆ, ಮನೆ ಮತ್ತು ನಿವೇಶನಗಳ ಮಂಜೂರಾತಿ ಸೇರಿದಂತೆ 6 ಕಾಯ್ದೆಗಳ ಅಡಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗಳಿಗೂ ಕೇಂದ್ರದ ಕಾಯ್ದೆ ಅನ್ವಯವಾಗುವುದಿಲ್ಲ.

***
ರೈತರ ಪರ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ರೈತರಿಗೆ ಪರಿಹಾರ ತಪ್ಪಿಸುವ ಉದ್ದೇಶ ಮಾತ್ರಮಸೂದೆಯಲ್ಲಿ ಪಾರದರ್ಶಕವಾಗಿ ಕಾಣಿಸುತ್ತಿದೆ.
-ಕೆ.ಎನ್. ಸೋಮಶೇಖರ್, ಸಾಮಾಜಿಕ ಕಾರ್ಯಕರ್ತ, ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.