ಬೆಂಗಳೂರು: ‘ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಂಗೇನಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ನಡೆದಿದೆ. ಇದೊಂದು ವ್ಯವಸ್ಥಿತ ದರೋಡೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿನೋಟಿಫೈ ಆಗಿರುವ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಭಾಮೈದನ ಹೆಸರಿಗೆ ನೋಂದಣಿಯಾಗಿದೆ. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ತ್ವರಿತಗತಿಯಲ್ಲಿ ಪೂರೈಸಿ ಸರ್ಕಾರಕ್ಕೆ ವರದಿ ನೀಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಯಾವುದೇ ದಾಖಲೆಗಳು ಇಲ್ಲದಿದ್ದರೂ ದಲಿತರ ಭೂಮಿ ನುಂಗಿದ್ದಾರೆ ಎಂದು ಮುಖ್ಯಮಂತ್ರಿ ಮೇಲೆ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಆದರೆ, ಈ ಪ್ರಕರಣದಲ್ಲಿ ಎಲ್ಲ ದಾಖಲೆಗಳಿವೆ’ ಎಂದರು.
‘ತಮ್ಮ ಮುಖ್ಯಮಂತ್ರಿ ಸ್ಥಾನ ಹೋಗುವವರೆಗೆ ಡಿನೋಟಿಫಿಕಷನ್‌ಗೆ ಸಂಬಂಧಿಸಿದ ಕಡತದ ಹಿಂದೆಯೇ ಕುಮಾರಸ್ವಾಮಿ ಇರುತ್ತಾರೆ. ಕುಮಾರಸ್ವಾಮಿಯವರ ಅತ್ತೆಗೂ ಈ ಜಮೀನಿಗೂ ಸಂಬಂಧವೇ ಇಲ್ಲ. ಆದರೂ, ಅವರ ಹೆಸರಿಗೆ 20 ದಿನಗಳಲ್ಲಿ ಜಿಪಿಎ ಆಗುತ್ತದೆ. ಅವರು ತಮ್ಮ ಮಗ ಹಾಗೂ ಅನಿತಾ ಕುಮಾರಸ್ವಾಮಿ ಸೋದರ ಚನ್ನಪ್ಪ ಅವರಿಗೆ ಈ ಜಮೀನು ಮಾರಾಟ ಮಾಡಿರುವುದು ನಿಜವೋ ಸುಳ್ಳೋ ಎಂದು ಕುಮಾರಸ್ವಾಮಿ ಹೇಳಬೇಕು’ ಎಂದು ಒತ್ತಾಯಿಸಿದರು.
‘ಈ ಹಗರಣದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಎಷ್ಟು ಪಾಲು ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಇಬ್ಬರೂ ಉತ್ತರ ನೀಡಬೇಕು. ಯಡಿಯೂರಪ್ಪ ಅವರಿಗೆ ₹ 25 ಸಾವಿರ ದಂಡ ಹಾಕಿದ್ದ ಹೈಕೋರ್ಟ್, ತನಿಖೆ ಮುಂದುವರೆಸುವಂತೆ ಸೂಚಿಸಿದ್ದರೂ ಲೋಕಾಯುಕ್ತದಲ್ಲಿ ತನಿಖೆ ಏಕೆ ಮುಂದುವರೆಯುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಈ ಹಗರಣದ ಮುಖ್ಯ ರೂವಾರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು. ಬಿಜೆಪಿಯವರು ನಾವು ಬಿಡುಗಡೆ ಮಾಡುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ನೀಡಿ ಮತ್ತೊಮ್ಮೆ ತನಿಖೆಗೆ ಆದೇಶಿಸುವಂತೆ ಮನವಿ ಮಾಡಬೇಕು. ರಾಷ್ಟ್ರಪತಿ ಮಧ್ಯಪ್ರವೇಶಿಸಿ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯಬೇಕು’ ಎಂದು ಸಂತೋಷ್ ಲಾಡ್ ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.