ADVERTISEMENT

ಭೂ ವ್ಯಾಜ್ಯ: 981 ಮೇಲ್ಮನವಿ ವಜಾ

ವಿಳಂಬದಿಂದಾಗಿ ಸರ್ಕಾರಕ್ಕೆ ಹಿನ್ನಡೆ: ಸುಪ್ರೀಂ ಕೋರ್ಟ್‌ಗೆ ಎಸ್‌ಎಲ್‌ಪಿ

ರಾಜೇಶ್ ರೈ ಚಟ್ಲ
Published 4 ನವೆಂಬರ್ 2024, 23:56 IST
Last Updated 4 ನವೆಂಬರ್ 2024, 23:56 IST
   

ಬೆಂಗಳೂರು: ಭೂ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರು ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡಿದ ಕಾರಣಕ್ಕೆ 981 ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಭೂ ಸ್ವಾಧೀನ ವಿವಾದಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 20 ಸಾವಿರ ಮತ್ತು ಹೈಕೋರ್ಟ್‌ನಲ್ಲಿ 2 ಸಾವಿರ ಪ್ರಕರಣಗಳು ಬಾಕಿ ಇವೆ. ಮೇಲ್ಮನವಿಯ ವಿಳಂಬದಿಂದಾಗಿ, ಇಷ್ಟು ಬೃಹತ್ ಸಂಖ್ಯೆಯ ಜಮೀನು ವ್ಯಾಜ್ಯಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. 

ಹೈಕೋರ್ಟ್‌ನಿಂದ ವಜಾಗೊಂಡಿರುವ ಮೇಲ್ಮನವಿ ಅರ್ಜಿಗಳ ಪೈಕಿ‌ 139 ಪ್ರಕರಣಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಉಳಿದ ಬಹುತೇಕ ಪ್ರಕರಣಗಳು ಜಲಸಂಪನ್ಮೂಲ ಇಲಾಖೆಗೆ ಸೇರಿದವುಗಳಾಗಿದ್ದು, ಅದರಲ್ಲೂ 730 ಪ್ರಕರಣಗಳು ಕರ್ನಾಟಕ ನಿರಾವರಿ ನಿಗಮ (ಕೆಎನ್‌ಎನ್‌ಎಲ್‌), 65 ಪ್ರಕರಣಗಳು ಕೃಷ್ಣ ಭಾಗ್ಯ ಜಲ ನಿಗಮಕ್ಕೆ (ಕೆಬಿಜೆಎನ್‌ಎಲ್‌) ಸಂಬಂಧಿಸಿವೆ.

ADVERTISEMENT

ವಜಾ ಆಗಿರುವ ಮೇಲ್ಮನವಿ ಅರ್ಜಿಗಳಿಗೆ ಸಂಬಂಧಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅ. 28ರಂದು ಆರ್ಥಿಕ, ಜಲ‌ಸಂಪನ್ಮೂಲ, ಲೋಕೋಪಯೋಗಿ, ಕಂದಾಯ, ಕಾನೂನು, ಸಣ್ಣ ನೀರಾವರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗಳ ಮುಖ್ಯಸ್ಥರ ಜೊತೆ ವಿಡಿಯೊ ಸಂವಾದದ ಮೂಲಕ ಸಭೆ ನಡೆಸಿದ್ದಾರೆ. ಅಲ್ಲದೆ, ಅರ್ಜಿ ವಜಾಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದ್ದಾರೆ.

‘ಹೈಕೋರ್ಟ್‌ ಮೇಲ್ಮನವಿ ವಜಾಗೊಳಿಸಿದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ದಾಖಲಿಸಲು ಒಂದು ವಾರದ ಒಳಗೆ ಎಲ್ಲ ಇಲಾಖೆಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಇಲಾಖೆಗಳ ಜೊತೆ ಸಮನ್ವಯ ಮಾಡಿ//, ಕ್ರೋಡೀಕೃತ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಯ ಕಚೇರಿಗೆ ಕಂದಾಯ ಇಲಾಖೆಯ ಆಯುಕ್ತರು ಒದಗಿಸಬೇಕು ಎಂದು ಈ ಸಂವಾದದ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಸೇರಿ ಬಾಕಿ ಸುಮಾರು 22 ಸಾವಿರ ಭೂ ಸ್ವಾಧೀನ ಪ್ರಕರಣಗಳಲ್ಲಿ ಕೆಎನ್‌ಎನ್‌ಎಲ್‌ ಮತ್ತು ಕೆಬಿಜೆಎನ್‌ಎಲ್‌ ಅನ್ನು ಪ್ರತಿವಾದಿಯಾಗಿ ಸೇರಿಸಲು ಜಲ ಸಂಪನ್ಮೂಲ ಇಲಾಖೆ ಕ್ರಮ ವಹಿಸಬೇಕು. ಅಲ್ಲದೆ, ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಸಮರ್ಪಕ ವಾದ ಮಂಡಿಸುವ ಸಲುವಾಗಿ ಪ್ರತ್ಯೇಕ ವಕೀಲರ ತಂಡವನ್ನು ರಚಿಸಬೇಕು. ಜೊತೆಗೆ, ಸರ್ಕಾರಿ ವಕೀಲರು ವಿಳಂಬ ಮಾಡುತ್ತಿರುವ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರೇ ನಿಗಾ ವಹಿಸುವಂತೆ ಇಲಾಖೆ ಮನವಿ ಮಾಡಬೇಕು. ಮೇಲ್ಮನವಿ ಸಲ್ಲಿಸಲು ಅಗತ್ಯವಾದ ಆದೇಶದ ಪ್ರತಿಗಳನ್ನು ಪಡೆಯಲು ಆಗುವ ವಿಳಂಬದ ಬಗ್ಗೆ ಸಂಬಂಧಿಸಿದ ಇಲಾಖೆಗಳ ಜೊತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಮನ್ವಯ ಮಾಡಬೇಕು ಎಂದೂ ತೀರ್ಮಾನಿಸಲಾಗಿದೆ.

‘ಕೆಲವು ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗೆ ಮೇಲ್ಮನವಿ ಸಲ್ಲಿಸಲು ಆದೇಶ ಹೊರಡಿಸಲಾಗಿತ್ತು. ಆದರೆ, ಅಡ್ವೊಕೇಟ್ ಜನರಲ್‌ ಅವರ ಕಚೇರಿಯಿಂದ ವಿಳಂಬವಾಗಿದೆ’ ಎಂದು ಕಂದಾಯ ಆಯುಕ್ತರು ವಿವರಣೆ ನೀಡಿದ್ದಾರೆ. ಮೇಲ್ಮನವಿ ಸಲ್ಲಿಸುವ ಪ್ರಕರಣಗಳಲ್ಲಿ ಅಡ್ವೊಕೇಟ್‌ ಜನರಲ್‌ ಕಚೇರಿಯಿಂದ ಕೇಳಿದ ಮಾಹಿತಿಯನ್ನು ಒದಗಿಸಲು ಎಲ್ಲ ಇಲಾಖೆಗಳಿಗೆ ಕಾಲಮಿತಿ ನಿಗದಿಪಡಿಸುವುದು ಒಳ್ಳೆಯದು ಎಂಬ ಸಲಹೆಯನ್ನು ಕಂದಾಯ ಇಲಾಖೆಯ ಕಾರ್ಯದರ್ಶಿ ನೀಡಿದ್ದಾರೆ.

‘ನಮ್ಮ ಇಲಾಖೆಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಆರು ಪ್ರಕರಣಗಳು ಬಾಕಿ ಇವೆ. ಒಂದು ಪ್ರಕರಣದಲ್ಲಿ ಕಾನೂನು ಕೋಶವು ಅಭಿಪ್ರಾಯ ನೀಡಲು ತಿರಸ್ಕರಿಸಿದೆ’ ಎಂಬ ಅಂಶವನ್ನು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಹಂಚಿಕೊಂಡಿದ್ದಾರೆ.

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ, ‘ತಮ್ಮ ಇಲಾಖೆಯಲ್ಲಿ 29 ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಅಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ’ ಎಂದು ತಿಳಿಸಿದರೆ, ತಮ್ಮ ಇಲಾಖೆಯಲ್ಲಿ 20 ಪ್ರಕರಣಗಳು ಬಾಕಿ ಇದ್ದು, ತಕ್ಷಣ ಮಾಹಿತಿ ಒದಗಿಸಲಾಗುವುದು ಎಂದು ಮುಖ್ಯಕಾರ್ಯದರ್ಶಿಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ವಿವರಣೆ ನೀಡಿದ್ದಾರೆ.

ಮೇಲ್ಮನವಿ ವಜಾ: ಇಲಾಖೆಗಳ ವಾದವೇನು?

* ಸರ್ಕಾರಿ ವಕೀಲರ ಅಸಹಕಾರ

* ಅಡ್ವೊಕೇಟ್ ಜನರಲ್‌ ಕಚೇರಿಯಿಂದ ವಿಳಂಬ

* ಸರ್ಕಾರದ ವಾದ ಸರಿಯಾಗಿ ಮಂಡಿಸದೇ ಇರುವುದು

‘ಪ್ರತ್ಯೇಕ ಕೋಶ ರಚಿಸಲು ಸಲಹೆ’
‘ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ (ಯುಕೆಪಿ) ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಮತ್ತು ಭೂಸ್ವಾಧೀನ ಆಯುಕ್ತರು ವ್ಯಾಜ್ಯ ನಿರ್ವಹಣಾ ಅಧಿಕಾರಿಯಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸರ್ಕಾರಿ ವಕೀಲರ ಅಸಹಕಾರದಿಂದ ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದೆ. ಅಲ್ಲದೆ, ಸರ್ಕಾರದ ವಾದವನ್ನು ಸರಿಯಾಗಿ ಮಂಡಿಸದೇ ಇರುವುದರಿಂದ ಸರ್ಕಾರದ ವಿರುದ್ಧವಾಗಿ ಹೈಕೋರ್ಟ್‌ ಆದೇಶ ಮಾಡುತ್ತಿದೆ’ ಎಂದು ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ವಿವರಣೆ ನೀಡಿದ್ದಾರೆ. ಜಿಲ್ಲಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ನಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ಕೋಶ ರಚಿಸಬೇಕು ಮತ್ತು ಐವರು ಸರ್ಕಾರಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ಮನವಿ ಮಾಡಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಅದಕ್ಕೆ, ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ‘ಕೆಲವು ಪ್ರಕರಣಗಳಲ್ಲಿ ಕೃಷ್ಣ ಭಾಗ್ಯ ಜಲ ನಿಗಮವು ಮೇಲ್ಮನವಿಯನ್ನೇ ಸಲ್ಲಿಸಿಲ್ಲ. ಅಂತಹ ಪ್ರಕರಣಗಳಲ್ಲಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ.ಎಂ. ಗಂಗಾಂಧರ್ ಸೂಕ್ತ ಸಹಕಾರ ನೀಡುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.