ಬೆಂಗಳೂರು: ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಜಮೀನು ಮಾರಾಟ ಮಾಡುವುದಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರಭಾವಿ ಸಚಿವರು ಒತ್ತಡ ಹೇರಿದ್ದರಿಂದ, ಮಾರಾಟಕ್ಕೆ ಸಮ್ಮತಿ ಸೂಚಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.
‘ಈ ಹಿಂದೆ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ತೀರ್ಮಾನಗಳ ವಿರುದ್ಧ ಹೋರಾಟ ಮಾಡಿದ್ದೆವು. ಈಗ ಪುನರ್‌ಪರಿಶೀಲನೆಗೆ ಒಳಪಡಿಸದೇ, ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಪಡೆಯದೇ ಯಥಾವತ್ ಒಪ್ಪಿಗೆ ನೀಡುವುದು ಸರಿಯಲ್ಲ’ ಎಂಬ ಎಚ್.ಕೆ.ಪಾಟೀಲ ಅವರ ಆಕ್ಷೇಪಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸೇರಿ ಹಲವರು ಧ್ವನಿಗೂಡಿಸಿದರು. ಈ ಬಗ್ಗೆ ಪರ ಮತ್ತು ವಿರೋಧವಾಗಿ ಸುದೀರ್ಘ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.
ಆದರೆ, ಜಿಂದಾಲ್ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡಲೇ ಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಒತ್ತಡ ಹೇರಿದರು. ಇದಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಂದಾಲ್ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡಲು ಒಪ್ಪಿಗೆ ನೀಡಿದರು ಎಂದು ಮೂಲಗಳು ಹೇಳಿವೆ.
ಸಂಡೂರು ತಾಲ್ಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ 2,000.58 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ₹1,22,200 ರಂತೆ ಮತ್ತು ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1,666.75 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ₹1,50,635 ಬೆಲೆ ನಿಗದಿ ಮಾಡಿರುವುದು ಸರಿ ಇಲ್ಲ. ತುಂಬಾ ಹಿಂದೆ ನಿಗದಿ ಮಾಡಿದ್ದ ದರ. ಮರುಪರಿಶೀಲನೆಗೆ ಒಳಪಡಿಸದೇ ಒಪ್ಪಿಗೆ ಕೊಡುವುದು ಸರಿಯಲ್ಲ. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುವುದಿಲ್ಲ ಎಂಬುದಾಗಿಯೂ ಸಚಿವರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಹಿಂದೆ ಇದೇ ಪ್ರಸ್ತಾವನೆಯನ್ನು ಸಂಪುಟದ ಮುಂದೆ ತಂದಾಗ ಎಚ್.ಕೆ.ಪಾಟೀಲ ಅವರು ವಿರೋಧ ವ್ಯಕ್ತಪಡಿಸಿದ್ದರು.
2019ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಪ್ರಸ್ತಾವ ಮತ್ತೆ ಸಚಿವ ಸಂಪುಟದ ಮುಂದೆ ಬಂದಿತ್ತು. ಆಗ ಶಾಸಕರಾಗಿದ್ದ ಎಚ್.ಕೆ. ಪಾಟೀಲ, ‘ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಇಲ್ಲ. ಮೈಸೂರು ಮಿನರಲ್ಸ್ ಕಂಪನಿಗೆ ₹1,200 ಕೋಟಿಗೂ ಹೆಚ್ಚು ಬಾಕಿ ಪಾವತಿ ಮಾಡಿಲ್ಲ. ಕಾನೂನು ಇಲಾಖೆಯ ಅಭಿಪ್ರಾಯ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದ್ದರು. ಅಲ್ಲದೇ, ಅಂದಿನ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದು ‘ಸಾರ್ವಜನಿಕ ಹಿತಕ್ಕೆ ಮಾರಕವಾದ ಮತ್ತು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದ್ದರು.
‘ಈಗಲೂ ಯಥಾಸ್ಥಿತಿ ಮುಂದುವರಿದಿದೆ. ಕೇವಲ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನು ಮುಂದಿಟ್ಟು ಕೊಂಡು ಒಪ್ಪಿಗೆ ನೀಡುವುದು ಸರಿಯಲ್ಲ’ ಎಂದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಎಚ್.ಕೆ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಸಾವಿರಾರು ಎಕರೆಯನ್ನು ಜಿಂದಾಲ್‌ಗೆ ಮಾರಾಟ ಮಾಡುವ ಬದಲಿಗೆ, ರೈತರಿಗೇ ಮಾರಾಟ ಮಾಡಿ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
‘ಸರ್ಕಾರವು ಖನಿಜಭರಿತ ಬೆಲೆಬಾಳುವ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಜಿಂದಾಲ್‌ಗೆ ಮಾರಾಟ ಮಾಡಲು ಹೊರಟಿದೆ. ಈ ಹಿಂದೆ ಇದನ್ನು ವಿರೋಧಿಸಿದ್ದವರೇ ಈಗ ಮಾರಾಟಕ್ಕೆ ಮುಂದಾಗಿದ್ದಾರೆ. ಎಕರೆಗೆ ₹1.22 ಲಕ್ಷ ಮತ್ತು ₹1.50 ಲಕ್ಷ ನಿಗದಿ ಮಾಡಿದ್ದಾರೆ. ರೈತರಿಗೇ ಮಾರಾಟ ಮಾಡಿದರೆ, ಇದಕ್ಕಿಂತ ಹತ್ತುಪಟ್ಟು ಹೆಚ್ಚು ಬೆಲೆ ಕೊಟ್ಟು ಖರೀದಿಸಲು ತಯಾರಿದ್ದಾರೆ’ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
2005–2007ರಲ್ಲಿ ಲೀಸ್ ಕಂ ಸೇಲ್ ಒಪ್ಪಂದದಂತೆ ಬಳ್ಳಾರಿಯ ತೋರಣಗಲ್, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿಯಲ್ಲಿ ಜಿಂದಾಲ್ ಕಂಪನಿಗೆ ಮಂಜೂರು ಮಾಡಿದ್ದ 3,667 ಎಕರೆಯನ್ನು ಶುದ್ಧ ಕ್ರಯ
ಪತ್ರ ಮಾಡಿಕೊಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ಅವರು ಖಂಡಿಸಿದ್ದಾರೆ.
ಬೆಂಗಳೂರು: ಕೋರ್ಟ್ ನಿರ್ದೇಶನ, ಸಂಪುಟ ಸಭೆಯ ನಿರ್ಣಯದಂತೆ ಕಾನೂನಿಗೆ ಅನುಸಾರವಾಗಿ ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಗುತ್ತಿಗೆ ನೀಡಲಾಗಿದೆ. ಹಾಗೆ ಮಾಡದಿದ್ದಲ್ಲಿ, ಬಂಡವಾಳ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ಹಿಂದೆ ಇದ್ದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ನೀಡಲಾಗಿದೆ. ಕಂಪನಿ ಸರ್ಕಾರದ ಷರತ್ತುಗಳನ್ನು ಪಾಲಿಸಿದೆ. ರಾಜ್ಯದ ಕೈಗಾರಿಕೆಗಳಿಗೆ ಅನುಸರಿಸುವ ನಿಯಮಗಳನ್ನೇ ಜಿಂದಾಲ್‌ಗೂಗೂ ಅನ್ವಯಿಸಲಾಗಿದೆ. ವಾಸ್ತವವಾಗಿ ಒಂಬತ್ತು ವರ್ಷಗಳು ವಿಳಂಬವಾಗಿದೆ’ ಎಂದರು.
ರಾಜ್ಯದಲ್ಲಿ ಜಿಂದಾಲ್ ಕಂಪನಿ ₹90 ಸಾವಿರ ಕೋಟಿ ಹೂಡಿಕೆ ಮಾಡಿದೆ, 50 ಸಾವಿರ ಉದ್ಯೋಗ ಕೊಟ್ಟಿದೆ. ಸರ್ಕಾರ ನೀಡಿದ ಜಮೀನಿನಲ್ಲಿ ಶೇ 51ರಷ್ಟನ್ನು 10 ವರ್ಷಗಳಲ್ಲಿ ಬಳಸಿಕೊಂಡಿದೆ. ಹಾಗಾಗಿ, ಕೈಗಾರಿಕಾ ನೀತಿಯಂತೆ ಗುತ್ತಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದರು.
‘ಕೈಗಾರಿಕಾ ಕ್ಷೇತ್ರದಲ್ಲಿ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಜೊತೆಗೆ ಪೈಪೋಟಿ ಎದುರಿಸುತ್ತಿದ್ದೇವೆ. ಕೆಲ ರಾಜ್ಯಗಳು ಉಚಿತವಾಗಿ ಭೂಮಿ ಕೊಡುತ್ತಿವೆ. ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡಲು ವಿರೋಧಿಸಿರಲಿಲ್ಲ, ಜನಾರ್ದನ ರೆಡ್ಡಿ ವಿರುದ್ಧವಷ್ಟೇ ಧ್ವನಿ ಎತ್ತಲಾಗಿತ್ತು’ ಎಂದರು.
ಕೈಗಾರಿಕಾ ಕಾನೂನಿಗೆ ಅನುಗುಣವಾಗಿ ಜಿಂದಾಲ್ ಕಂಪನಿಗೆ ಜಮೀನು ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
‘ಜಿಂದಾಲ್‌ಗೆ ಕಾಂಗ್ರೆಸ್ ಸರ್ಕಾರ ಹೊಸದಾಗಿ ಭೂಮಿ ನೀಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ಭೂಮಿಯ ನಿರ್ವಹಣೆಯಲ್ಲಿ ಕಾನೂನು ಪಾಲನೆ ಮಾಡಿದ್ದಾರೆ. ಹಾಗಾಗಿ, ಗುತ್ತಿಗೆ ಮಾರಾಟ ಮಾಡಲಾಗಿದೆ. ಬಿಜೆಪಿ ಮಾಡಿದ್ದ ಲೋಪಗಳನ್ನು ಸರಿಪಡಿಸಿದ್ದೇವೆ’ ಎಂದರು.
ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆಇನ್ನಷ್ಟು ಕೈಗಾರಿಕೆಗಳು ಬರಬೇಕು ಎನ್ನುವುದು ರಾಜ್ಯ ಸರ್ಕಾರದ ಆಶಯ. ಅದಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.