ಬೆಂಗಳೂರು: ಹಿಂದಿ ಭಾಷೆ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ವಂದೇ ಭಾರತ್ ವಿಮಾನದಲ್ಲಿ ತಾಯ್ನಾಡಿಗೆ ವಾಪಸ್ ಕರೆತರಲು ಕನ್ನಡಿಗ ವಿದ್ಯಾರ್ಥಿಗಳಿಗೆ ಅವಕಾಶ ನೀಡದೇ ಇರುವುದನ್ನು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಖಂಡಿಸಿದ್ದಾರೆ.
ಬಳಿಕ ಕರ್ನಾಟಕದ 209 ವಿದ್ಯಾರ್ಥಿಗಳನ್ನು ರಷ್ಯಾದಿಂದ ಕರೆ ತರಲು ವಿಮಾನ ವ್ಯವಸ್ಥೆ ಮಾಡಿದ ಪ್ರಧಾನಿ ನರೇಂದ್ರಮೋದಿ ಅವರಿಗೆ ಅಭಿನಂದಿಸಿ ಪತ್ರ ಬರೆದಿರುವ ಅವರು ಅಧಿಕಾರಿಗಳ ತಾರತಮ್ಯ ಧೋರಣೆಯನ್ನು ಅವರು ಪ್ರಧಾನಿ ಗಮನಕ್ಕೂ ತಂದಿದ್ದಾರೆ.
ಅಧಿಕಾರಿಗಳು ವಿದೇಶದಿಂದ ಭಾರತಕ್ಕೆ ಕರೆ ತರುವ ಸಂದರ್ಭದಲ್ಲಿ ಹಿಂದಿ ಭಾಷೆ ಮಾತನಾಡುವವರಿಗೆ ಮೊದಲ ಆದ್ಯತೆ ನೀಡಿದ್ದಾರೆ. ಇತರ ಭಾರತೀಯ ಭಾಷೆ ಅದರಲ್ಲೂ ಕನ್ನಡ ಮಾತನಾಡುವವರ ಅಳಲು ಕೇಳಲು ತಯಾರಿರಲಿಲ್ಲ ಎಂದು ಕೆಲವು ರಾಷ್ಟ್ರೀಯ ಮಟ್ಟದ ಪತ್ರಿಕೆಗಳು ವರದಿ ಮಾಡಿವೆ. ಇದು ನಿಜಕ್ಕೂ ಆಘಾತಕಾರಿ ವಿದ್ಯಮಾನ ಎಂದು ಚಂದ್ರಶೇಖರ್ ಹೇಳಿದ್ದಾರೆ.
ನಾವು ಕನ್ನಡಿಗರು ಹೃದಯ ವೈಶಾಲ್ಯವುಳ್ಳವರು. ಮಲೇಷಿಯಾ, ರಷ್ಯಾ, ಕೆರೆಬಿಯನ್ ದ್ವೀಪ ಎಲ್ಲೆಡೆ ಸಿಲುಕಿದ್ದ ಕನ್ನಡಿಗರ ಜೊತೆ ಇತರ ಭಾರತೀಯರನ್ನೂ ಕರೆತಂದಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.